ಪುತ್ತೂರು: ರೈತ ದಿನಾಚರಣೆಯ ದಿನವಾದ ದ. 23 ರಂದು ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕರ್ನಾಟಕ ಮತ್ತು ಕೇರಳ ಭಾಗದ ಗೇರು ಕೃಷಿಕರು ಭೇಟಿ ನೀಡಿ ಕಡಮಜಲುರವರ ಸಮಗ್ರ ಕೃಷಿಯನ್ನು ವೀಕ್ಷಿಸಿದರು.
ಭಾರತದಾದ್ಯಂತ ದ. 23 ರಂದು ರೈತ ದಿನಾಚರಣೆಯನ್ನು ಮಾಜಿ ಪ್ರಧಾನಿ ಚೌದ್ರಿ ಚರಣ್ಸಿಂಗ್ ರವರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂದು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ವಿಶೇಷವಾಗಿ ರೈತ ದಿನಾಚರಣೆಯನ್ನು ಆಚರಿಸಲಾಗಿತ್ತು.
ಸುದ್ದಿ ಬಿಡುಗಡೆಯ ಸಂಪಾದಕ ಡಾ. ಯು.ಪಿ. ಶಿವಾನಂದರ ಆಶಯದಂತೆ ಕೃಷಿ ಪ್ರವಾಸೋದ್ಯಮದ ದ್ಯೋತಕವಾಗಿ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಸುಮಾರು 75 ಕೃಷಿಕರು ಭೇಟಿ ನೀಡಿ ಸಮಗ್ರ ಕೃಷಿಯ ಬಗ್ಗೆ ತಿಳಿದುಕೊಂಡರು.
ಗೇರು ಕೃಷಿಯಲ್ಲಿ ವೈಜ್ಞಾನಿಕ ಕೃಷಿಕರಾದ ಕಡಮಜಲು ಸುಭಾಸ್ ರೈಯವರು ತನ್ನ 14 ಎಕರೆ ವೈಜ್ಞಾನಿಕ ತೋಟವನ್ನು ಸಂದರ್ಶಿಸಿ ವಿವಿಧ ರೀತಿಯ ಗೇರು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ‘ಅತೀಸಾಂದ್ರ ಪದ್ದತಿಯಲ್ಲಿ 3×3 ಅಡಿಯಲ್ಲಿ ವಿಆರ್ಐ – 3 ಎಂಬ ಗೇರು ತಳಿಯನ್ನು ಮಾತ್ರ ಬೆಳೆಸಬಹುದು. ಈ ತಳಿಯನ್ನು ಪ್ರತೀ ವರ್ಷ ಗೆಲ್ಲು ಸವರುವ ಮೂಲಕ (ಪ್ರೂನಿಂಗ್) ನಿಯಂತ್ರಿಸಬಹುದು. ಉಳ್ಳಾಲ – 3, ಭಾಸ್ಕರ, ವೆಂಗುರ್ಲಾ -4, ವೆಂಗುರ್ಲಾ – 7 ಗಳೆಂಬ ತಳಿಗಳನ್ನು ಸಾಂದ್ರ ಪದ್ದತಿಯಲ್ಲಿ (4×4, 5×5) ನಾಟಿ ಮಾಡಿ ಸಾಧಾರಣ 7-8 ವರ್ಷದ ಪ್ರಾಯವಾಗುವಾಗ ಮಧ್ಯದಿಂದ ಒಂದು ಗಿಡ ತೆಗೆಯಬೇಕು. ಇದರಿಂದ ಉಳಿದ ಗಿಡಗಳಲ್ಲಿ ಉತ್ತಮ ಫಸಲನ್ನು ಪಡೆಯಬಹುದು. ಸಾಮಾನ್ಯ ಪದ್ದತಿ (8×8 ಅಥವಾ 10×10) ಅಡಿಯಲ್ಲಿ ಮೇಲಿನ ಕಸಿ ಗೇರು ಗಿಡಗಳನ್ನು ಬೆಳೆಸಿದರೆ ಆರಾಮದಾಯಕವಾಗಿ ರೈತನಿಗೆ ಉತ್ತಮ ಆದಾಯ ಪಡೆಯಬಹುದು. ಗೇರು ಹಣ್ಣಿನ ಮೂಲಕ ರಸವನ್ನು ಗೇರು ಪಾನೀಯ ತಯಾರಿಸಿ ಮೌಲ್ಯವರ್ಧನೆ ಮಾಡಬಹುದು’ ಎಂದು ಸುದೀರ್ಘವಾಗಿ ತನ್ನ ಅನುಭವ ಮಾಹಿತಿ ನೀಡಿದರು.
ಡಿಸಿಆರ್ ಹಿರಿಯ ವಿಜ್ಞಾನಿಗಳಾದ ಡಾ. ರವಿಪ್ರಸಾದ್, ಡಾ. ಈರದಾಸಪ್ಪ ಈ. ಮತ್ತು ಹಲವಾರು ವಿಜ್ಞಾನಿಗಳು, ಸಿಬಂದಿಗಳು ಉಪಸ್ಥಿತರಿದ್ದರು.