ಪುತ್ತೂರು: ವೇಣೂರು ಪೊಲೀಸ್ ಠಾಣೆಯ ಎಸ್.ಐ.ಸೌಮ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿಗಳ ಸಹಿತ ಐವರನ್ನು ಬಂಧಿಸಲಾಗಿದೆ. ಬಂಧಿತ ಐವರ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ರಂತೆ ಕೇಸು ದಾಖಲಿಸಿಕೊಳ್ಳಲಾಗಿದೆ.
ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ಎಂಬಲ್ಲಿ ಜ.4ರಂದು ವೇಣೂರು ಪೊಲೀಸ್ ಠಾಣಾ ಎಸ್.ಐ. ಸೌಮ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ತೌಸಿಫ್, ಪುತ್ತಿಲದ ಉಸ್ಮಾನ್, ಇಕ್ಬಾಲ್ ಪುತ್ತೂರು, ಇರ್ಫಾನ್ ಕರಾಯ ಮತ್ತು ಅನಾಸ್ ಕರಾಯ ಎಂಬವರನ್ನು ಬಂಧಿಸಲಾಗಿದೆ.
ಎಸ್.ಐ. ಸೌಮ್ಯರವರ ನೇತೃತ್ವದಲ್ಲಿ ಪೊಲೀಸರ ತಂಡ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಬಳಿಯ ನಾರಾವಿ ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿತ್ತು.
ನಾರಾವಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ (ಕೆಎ.21.ಇಬಿ.2235)ವನ್ನು ತಪಾಸಣೆ ನಡೆಸಿದ ವೇಳೆ ದ್ವಿಚಕ್ರದಲ್ಲಿದ್ದವರು ತಾವು ಮಾರುತಿ ಒಮ್ನಿ ಕಾರಿ(ನಂಬ್ರ ಕೆಎ.20.ಎಂ.6451)ನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದು ನಾವು ಬೆಂಗಾವಲಾಗಿ ಹೋಗುವುದಾಗಿ ತಿಳಿಸಿದ್ದರು.
ಬಳಿಕ ಮಾರುತಿ ಒಮ್ನಿ ಕಾರನ್ನು ತಡೆದು ನಿಲ್ಲಿಸಿ ಕಾರು ಪರಿಶೀಲಿಸಿದಾಗ ಕಾರಿನಲ್ಲಿ ಚಾಲಕ ಹಾಗೂ ಇತರ ಇಬ್ಬರು ಇದ್ದು, ಕಾರಿನಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಒಮ್ನಿ ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1,75,000/- ರೂ. ಅಗಬಹುದು ಎಂದು ತಿಳಿದು ಬಂದಿದೆ