ಬೊಳುವಾರು ವಿಶ್ವಕರ್ಮ ಸಭಾಂಗಣದಲ್ಲಿ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ

0

ಬ್ರಹ್ಮೋಪದೇಶದಿಂದ ಸಂಸ್ಕಾರ ನೀಡುವ ಕಾರ್ಯ: ಶಿವಸುಜ್ಞಾನ ತೀರ್ಥ ಶ್ರೀ

ಪುತ್ತೂರು: ಬ್ರಹ್ಮ ಎಂದರೆ ನಿರಾಕಾರ. ವಟುಗಳಿಗೆ ಬ್ರಹ್ಮೋಪದೇಶ ನೀಡುವ ಮೂಲಕ ನಿರಾಕಾರ ತತ್ವವನ್ನು ಬೋಧಿಸಲಾಗಿದೆ. ಬ್ರಹ್ಮೋಪದೇಶ ಸಂಸ್ಕಾರ ಪಡೆದ ವಟುಗಳು ಮುಂದೆ ಸಂಸ್ಕಾರವಂತರಾಗಿ ಸಮಾಜದಲ್ಲಿ ಬೆಳಗುವಂತಾಗಲಿ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದರು.

ಬೊಳುವಾರು ವಿಶ್ವಕರ್ಮ ಯುವ ಸಮಾಜ, ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಮಹಿಳಾ ಮಂಡಳಿ ಆಶ್ರಯದಲ್ಲಿ ಜ.8ರಂದುಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆದ 8ನೇ ಬಾರಿಯ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವಿಶ್ವಕರ್ಮ ಸಮಾಜದ 27 ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ಮಾಡಲಾಗಿದೆ. 27 ವಟುಗಳು 27 ನಕ್ಷತ್ರಗಳಿಗೆ ಸಮಾನ. ಈ 27 ವಟುಗಳು ಮುಂದೆ ಸಮಾಜದಲ್ಲಿ ಸ್ವಯಂ ನಕ್ಷತ್ರಗಳಂತೆ ಶೋಭಿಸಲಿ ಎಂದು ಹಾರೈಸಿದ ಅವರು, ಸಂಸ್ಕಾರ ನೀಡುವಂತಹ ಉತ್ತಮ ಕಾರ್ಯವನ್ನು ಸಂಘ ನಡೆಸಿರುವುದು ಶ್ಲಾಘನೀಯ ಎಂದರು.

ವಿಶ್ವಬ್ರಾಹ್ಮಣ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಆಗಬೇಕಿದೆ. ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಕೊಡುವುದಕ್ಕಿಂತಲೂ, ಪೋಷಕರನ್ನು, ಹಿರಿಯರನ್ನು ನೋಡಿಕೊಂಡು ಅವರಿಂದಲೇ ತಾವೇ ಸ್ವತಃ ಕಲಿತುಕೊಳ‍್ಳುವಂತಹ ವಾತಾವರಣ ನಿರ್ಮಾಣ ಆಗಬೇಕಿದೆ. ಎಳವೆಯಲ್ಲಿ ಮಕ್ಕಳಿಗೆ ಬ್ರಹ್ಮೋಪದೇಶದಂತಹ ಸಂಸ್ಕಾರ ನೀಡುವ ಮೂಲಕ, ಭವ್ಯ ಸಮಾಜದ ಉನ್ನತಿಗೆ ಅಡಿಪಾಯ ಹಾಕಿದಂತಾಗಿದೆ ಎಂದರು.

ಉತ್ತಮ ಸಂಸ್ಕಾರ ಪಡೆದ ಪಾಂಡವರು, ಇಂದಿಗೂ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ. ಅಧರ್ಮ ಮಾರ್ಗದಲ್ಲಿ ನಡೆದ ಕೌರವರ ಅಂತ್ಯಕ್ಕೆ ಅವರು ಪಡೆದ ಸಂಸ್ಕಾರದ ಕೊರತೆಯೇ ಕಾರಣವಾಗಿತ್ತು. ಪಾಂಡವರ ಒಂದೊಂದು ಹೆಸರು ಧರ್ಮಕ್ಕೆ ಪೂರಕವಾಗಿಯೇ ಇದೆ. ಧರ್ಮರಾಯ ಎಂದರೆ ಧರ್ಮ. ಭೀಮ ಎಂದರೆ ಶಕ್ತಿ. ಅರ್ಜುನನ ಇನ್ನೊಂದು ಹೆಸರು ಫಲ್ಗುಣ. ಫಲ್ಗುಣ ಎಂದರೆ ಹಾಲಿನಂತಹ ಮನಸ್ಸುಳ್ಳವನು ಎಂದರ್ಥ. ನಕುಲ ನನ್ನವರು ಎಂದು ಪ್ರೀತಿ ತೋರಿದವನು. ಸಹದೇವ ಎಲ್ಲರನ್ನು ಪ್ರೀತಿಸಿ, ಆ ಮೂಲಕ ಭಗವಂತನನ್ನು ಕಂಡವನು ಎಂದು ವಿವರಿಸಿದರು.

ಮುಖ್ಯಅತಿಥಿಯಾಗಿದ್ದ ಬಂಟ್ವಾಳ ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಮಾತನಾಡಿ, ತಂದೆ – ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಒಂದು ದೊಡ್ಡ ಸಂಸ್ಕಾರ. ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಸಣ್ಣಪುಟ್ಟ ಸಂಸ್ಕಾರಗಳೇ, ಸಮಾಜದ ಉನ್ನತಿಗೆ ಕಾರಣವಾಗುತ್ತದೆ. ಅಂತಹವರನ್ನು ಸಮಾಜ ಕೊನೆವರೆಗೂ ನೆನಪಿಸಿಕೊಳ‍್ಳುತ್ತದೆ ಎಂದರು.

ನಿವೃತ್ತ ಉಪಖಜಾನಾಧಿಕಾರಿ ಬಿ. ವಿಠಲಾಚಾರಿ ಮಾತನಾಡಿ, ಸಂಘಟನೆಯಿಂದ ಮಾತ್ರ ಇಂತಹ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯ. ಆದ್ದರಿಂದ ಯುವಕರು ಸಮುದಾಯದ ಸಂಘಟನೆಯತ್ತ ಗಮನ ಕೊಡಬೇಕು ಎಂದರು.

ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚಾರ್ಯ ಕೆ. ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯಶ್ರೀ ವಾದಿರಾಜ್ ಉಪಸ್ಥಿತರಿದ್ದರು.

ಇದೇ ಸಂದರ್ಭ ದಾನಿಗಳನ್ನು ಗೌರವಿಸಲಾಯಿತು. ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ, ಎಸ್‍ಕೆಜಿಐ ಕೋಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಅತಿಥಿಗಳನ್ನು ಪರಿಚಯಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಕೆ. ಶ್ರೀಧರ ಆಚಾರ್ಯ ಕೊಕ್ಕಡ ದಾನಿಗಳ ಹೆಸರನ್ನು ಓದಿದರು.

ವಿಶ್ವಕರ್ಮ ಯುವಸಮಾಜದ ಕಾರ್ಯದರ್ಶಿ ಮಹೇಶ್ ಎಂ. ಆಚಾರ್ಯ ವಂದಿಸಿ, ಕಿಶನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here