ಲಾರಿಯಿಂದ 21.44 ಲಕ್ಷ ರೂ. ಮೌಲ್ಯದ ಕಾಫಿ ಬೀಜಗಳ ಕಳವು ಪ್ರಕರಣ : ವಿಚಾರಣೆಗೆ ಹಾಜರಾಗಲು ಆರೋಪಿಗಳಿಗೆ ಪೊಲೀಸ್ ನೋಟಿಸ್‌

0

ಪುತ್ತೂರು: ಕಬಕ ಗ್ರಾಮದ ನೆಹರುನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ ಬಿಡುಗಡೆಗೊಳಿಸಿದ್ದಾರೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರ್ನಾಜೆಯ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್, ಬನ್ನೂರಿನ ವಿಜಯ ಶೆಟ್ಟಿ ಮತ್ತು ಸಹಾಯಕ ಸುಳ್ಯದ ಅಶ್ರಫ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು,ಕಳವು ಮಾಡಲಾಗಿದ್ದ ತಲಾ 60 ಕೆಜಿ ತೂಕದ ಕಾಫಿ ಬೀಜ ತುಂಬಿದ್ದ 80 ಚೀಲ ಕಾಫಿ ಬೀಜ,ಕೃತ್ಯಕ್ಕೆ ಬಳಸಿದ ಗೂಡ್ಸ್ ಟೆಂಪೊ ಮತ್ತು ಎರಡು ಆಟೋ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಳಿಕ ಆರೋಪಿಗಳಿಗೆ ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿದೆ.


ಘಟನೆ ವಿವರ:
ಕೆ.ಎ.19 ಎಬಿ 2258ನೇ ಲಾರಿ ಮಾಲಕ ಮತ್ತು ಚಾಲಕರಾಗಿದ್ದ ನೆಹರುನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸಿಯಿಂದ ಡಿ.3ರಂದು ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯೊಂದರಿಂದ ತಲಾ 60 ಕೆಜಿ ತೂಕದ 320 ಗೋಣಿ ಚೀಲ ಬ್ಯಾಗ್‌ಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿನ ಬಂದರಿಗೆ ಬರುತ್ತಿದ್ದವರು ರಾತ್ರಿ ನೆಹರುನಗರ ಬಳಿ ಲಾರಿಯನ್ನು ನಿಲ್ಲಿಸಿ ಡೋರ್‌ಲಾಕ್ ಮಾಡಿ ತನ್ನ ಮನೆಗೆ ಹೋಗಿದ್ದರು.ಡಿ.4ರಂದು ಬೆಳಗ್ಗೆ ಬಂದು ಮಧ್ಯಾಹ್ನದ ವೇಳೆಗೆ ಲಾರಿಯೊಂದಿಗೆ ಮಂಗಳೂರು ಬಂದರಿಗೆ ತಲುಪಿದ್ದರು.ಈ ವೇಳೆ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಲು ಬಂದಾಗ ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡುಬಂದಿದ್ದು ಬಳಿಕ ಕಂಪೆನಿಯ ಮೇಲ್ವಿಚಾರಕರು ಲಾರಿಯ ಹಿಂಬದಿಯ ಬಾಗಿಲು ತೆರೆದು ಲೋಡನ್ನು ಪರಿಶೀಲಿಸಿದಾಗ ಲಾರಿಯಲ್ಲಿದ್ದ 320 ಗೋಣಿ ಕಾಫಿ ಬೀಜಗಳ ಪೈಕಿ ರೂ.21.44 ಲಕ್ಷ ಮೌಲ್ಯದ 80 ಗೋಣಿ ಕಾಫಿ ಬೀಜಗಳು ಕಳವಾಗಿರುವುದು ಕಂಡುಬಂದಿತ್ತು. ಈ ಕುರಿತು ತೃತೇಶ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಕಲಂ 303(2)ಬಿಎನ್‌ಎಸ್ 2023ರಂತೆ ಪ್ರಕರಣ(ಅ.ಕ್ರ.120/2025)ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡರು.ಸಿಸಿ ಕ್ಯಾಮರಾ ಆಧರಿಸಿ ಕಳ್ಳರ ಜಾಡು ಹಿಡಿದ ಪೊಲೀಸರು, ಕಳವಾಗಿದ್ದ ಕಾಫಿ ಬೀಜಗಳನ್ನು ಗೋಣಿಕೊಪ್ಪದಲ್ಲಿ ನಾಸೀರ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆಶ್ಲೇಷ್ ಭಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಆಟೋ ರಿಕ್ಷಾಗಳನ್ನು ಬಾಡಿಗೆಗೆ ಗೊತ್ತುಪಡಿಸಿ ಕಾಫಿ ಬೀಜಗಳನ್ನು ಕಳವು ಮಾಡಿಸಿಕೊಂಡಿದ್ದು ನಾರಾಯಣ್ ಶೆಟ್ಟಿಗಾರ್ ಮತ್ತು ಮಿಥುನ್ ಕುಮಾರ್ ಆಟೋ ಚಾಲಕರಾಗಿ ಬಂದಿದ್ದರು. ಇವರ ಜೊತೆಗೆ ಪಿಕಪ್ ಜೀಪಿನಲ್ಲಿ ಬದಲಿ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ ಸುಳ್ಯದ ಆಶ್ರಫ್ ಸಹಾಯಕನಾಗಿ ಬಂದಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌

ವಿಚಾರಣೆಗೆ ಹಾಜರಾಗದಿದ್ದರೆ ಮಾತ್ರ ಬಂಧನ
ಡಿ.9ರಂದು ಮಹಜರು ಪ್ರಕ್ರಿಯೆ ಮುಗಿಸಿರುವ ಪೊಲೀಸರು ಪ್ರಕರಣದ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ.ಆರೋಪಿಗಳ ವಿರುದ್ಧ ಕಲಂ 303(2) ಬಿಎನ್‌ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಬಿಎನ್‌ಎಸ್ ಕಾಯ್ದೆಯಲ್ಲಿ, 7 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲಿ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಬಹುದು ಹೊರತು ನೇರವಾಗಿ ಬಂಧನ ಮಾಡಲು ಅವಕಾಶವಿಲ್ಲ.ಒಂದು ವೇಳೆ ಅವರು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡರೆ ಬಂಧಿಸಲಾಗುತ್ತದೆ.ಈ ಪ್ರಕರಣದಲ್ಲಿ ಆರೋಪಿಗಳೆಲ್ಲರೂ ವಿಚಾರಣೆಗೆ ಹಾಜರಾಗಿದ್ದು ಮಹಜರು ನಡೆಸಲಾಗಿದೆ.ಎಲ್ಲಾ ವರದಿಗಳನ್ನು ವೀಡಿಯೋ ಸಹಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.ನ್ಯಾಯಾಲಯ ಮುಂದಿನ ವಿಚಾರಣೆ ನಡೆಸುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here