ಪುತ್ತೂರು: ಜಗತ್ತಿನಲ್ಲಿ ಎಲ್ಲವೂ ಹೋದ ನಂತರದಲ್ಲಿ ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗಿರುವ ಒಂದು ಅದಮ್ಯ ಸತ್ಯ ಇದ್ದರೆ ಅದು ಭಾರತೀಯತೆ, ಹಿಂದುತ್ವ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಾಜಿ ಸಚಿವರಾಗಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ಅವರು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಜ.12 ರಂದು ವಿವೇಕಾನಂದ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಸಂಕಲ್ಪದ ವಿಚಾರನ್ನು ಸಭೆಯ ಮುಂದಿಟ್ಟರು.
ಯಾರು ನಮ್ಮನ್ನು ಮೂಡನಂಬಿಕೆಯ ಕಂತೆ ಎಂದು ಬೈದಿದ್ದರೋ, ಯಾರಿಗೆ ಭಾರತೀಯರ ಹೆಸರನ್ನು ಹೇಳಲು ನಾಚಿಕೆಯಾಗುತ್ತಿತ್ತೋ, ಭಾರತೀಯರನ್ನು ಮೂರ್ಖರ ದೇಶ ಎಂದು ಕರೆಯುತ್ತಿದ್ದರೋ ಅದೇ ದೇಶದ ಪ್ರಧಾನಿ ಇವತ್ತು ಭಾರತೀಯನಾಗಿದ್ದಾನೆ. ಯಾಕೆಂದರೆ ಅವರಿಗೆ ಭಾರತೀಯರನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ. ಲ್ಯಾಟಿನ್ ಅಮೇರಿಕಾದ ದೇಶದಲ್ಲಿ ನಮ್ಮ ಭಾರತೀಯರು ಪ್ರಧಾನಿಯಾಗಿದ್ದಾರೆ. ಅಮೇರಿಕಾ ಅವರು ಕೈಯಲ್ಲಿ ಇಲ್ಲ. ಇವತ್ತಲ್ಲ ನಾಳೆ ಅದು ನಮ್ಮದೇ ಆಗುತ್ತದೆ ಎಂದು ಅಭಿಪ್ರಾಯಿಸಿದ ಅವರು ಕೊನೆಗೂ ಕೂಡಾ ಒಪ್ಪಿಕೊಳ್ಳಲೇ ಬೇಕಾದ ಅಮೋಘ ಸತ್ಯ ಇದ್ದರೆ ಅದು ಭಾರತ, ಹಿಂದುತ್ವ ಎಂದ ಅವರು ರಷ್ಯ ಉಕ್ರೇನ್ ಜಗಳ ನಡುವೆ ಅದನ್ನು ತಣಿಸಲು ಭಾರತವೇ ಬರಬೇಕು. ಜಗತ್ತಿನ ದೊಡ್ಡಣ್ಣನಲ್ಲಿ ಆಗುತ್ತಿಲ್ಲ ಎಂದು ಜಗತ್ತೇ ಒಪ್ಪಿಕೊಂಡಿದೆ. ಮುಂದಿನ ದಿನ ಭಾರತ ಆರ್ಥಿಕ ದೈತ್ಯ ಎಂದು ಜಗತ್ತು ಒಪ್ಪಿಕೊಂಡಿದೆ. ವೈಚಾರಿಕತೆ, ಬುದ್ದಿ ಮತೆ, ಒಂದು ಬದುಕಿನ ಆದರ್ಶ ಇರುವುದು ಈ ಮಣ್ಣಿನಲ್ಲಿ ಮಾತ್ರ. ಇದನ್ನು ಜಗತ್ತು ಗುರುತಿಸಿದೆ. ಆದರೆ ಅದಕ್ಕೆ ತಕ್ಕಂತೆ ನಾವು ಎದ್ದು ನಿಲ್ಲಬೇಕಲ್ಲ. ಜಗತ್ತು ಇವತ್ತು ನಮ್ಮನ್ನು ನಿರೀಕ್ಷೆ ಮಾಡುತ್ತಿದೆ. ಅದಕ್ಕೆ ತಕ್ಕಂತೆಬೆಳೆದು ನಿಲ್ಲಬೇಕು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸುವ ಅದ್ಭುತ ಹೊಣಗಾರಿಕೆ ನಮ್ಮ ಶಿಕ್ಷಕರಲ್ಲಿದೆ ಎಂದರು.
ವಿವೇಕಾನಂದರು ಅನೇಕರ ಬದುಕಿಗೆ ಬೆಳಕನ್ನು ಕೊಟ್ಟವರು:
ಮಕ್ಕಳನ್ನು ಕೇವಲ ಕಂಪೆನಿಯ ಸಿಒ, ಮ್ಯಾನೇಜರ್, ವಿಜ್ಞಾನಿಯ ಮಾದರಿಯಲ್ಲಿ ಬೆಳೆಸುವುದಲ್ಲ. ಸ್ವಂತ ಉದ್ಯೋಗ ಮಾಡುವ ಹಂತಕ್ಕೆ ಬೆಳೆಸಬೇಕು. ಅವರಿಂದ ಮತ್ತೊಬ್ಬರ ಬದುಕನ್ನು ಬೆಳೆಸುವ ಯೋಗ್ಯತೆ ಇರುವಂತೆ ಬೆಳೆಸಬೇಕು. ಹಾಗೆ ಬೆಳೆಸಬೇಕಾದರೆ ಬದುಕಿಗೆ ಶಕ್ತಿಯನ್ನು ನೀಡುವ ಯೋಗ್ಯತೆಯನ್ನು ನಾವು ತೆಗೆದು ಕೊಳ್ಳಬೇಕು. ಪರಮಹಸಂಸರಿಂದ ಮಾತ್ರ ವಿವೇಕಾನಂದರು ಬೆಳೆದರು. ಅವರಿಗೆ ಯೋಗ್ಯತೆ ಇತ್ತು ಆ ಯೋಗ್ಯತೆಯನ್ನು ನಾವು ಬೆಳೆಸಿಕೊಳ್ಳಬೇಕು. ಆಗ ಕೊಡುವವರಿಗೆ ಧನ್ಯತೆ ಸಿಗುತ್ತದೆ. ನನ್ನ ಶಿಷ್ಯ ವೃಂದ ನನಗಿಂತಲೂ ದೊಡ್ಡದಾಗಿ ಬೆಳೆದರೆ ಅದರಲ್ಲಿ ಧನ್ಯತೆ ಕಾಣುವ ದೊಡ್ಡತನ ಶಿಕ್ಷಕರಿಗಿರಬೇಕು. ಅವನ ಬದುಕಿಗೆ ನಾನು ನಿನಗೆ ನೆಲೆಯಾಗಿ ನಿಲ್ಲುತೇನೆಂಬ ಮನಸ್ಸು ಇರಬೇಕು. ಇಂತಹ ಗುಣ ಎಷ್ಟು ಮಂದಿಯಲ್ಲಿದೆ ಎಂದು ಪ್ರಶ್ನಿಸಿದ ಅನಂತಕುಮಾರ್ ಹೆಗಡೆಯವರು ಮುಂದಿನ ತಲೆಮಾರು ಬೆಳೆಯಲಿ ಎಂಬ ಧನ್ಯತೆಯೊಂದಿಗೆ ಮಹಾಪುರುಷರು ಬದುಕಿದ್ದಾರೆ. ವಿವೇಕಾನಂದರು ಅವರ ಬದುಕನ್ನು ಅಲ್ಲಿಗೆ ಮುಗಿಸದೆ. ಬದಲಾಗಿ ಅನೇಕರ ಬದುಕಿಗೆ ಬೆಳಕನ್ನು ಕೊಟ್ಟು ಹೋದರು. ನನ್ನ ಇವತ್ತಿನ ಕಾಲಕ್ಕಿಂತ ಮುಂದಿನ ಕಾಲ ಇನ್ನೂ ಉಜ್ವಲವಾಗಿದೆ ಎಂದು ಹೇಳಿದ್ದರು. ಅಂತಹ ಅದ್ಭುತ ವ್ಯಕ್ತಿಯಸ್ಮರಣೆಯೊಂದಿಗೆ ವಿವೇಕಾನಂದ ಜಯಂತಿ ನಮ್ಮ ಬಾಳಿನಲ್ಲೂ ಕೂಡಾ ಏನಾದರು ಸಾಧನೆ ಮಾಡಬೇಕೆಂಬ ಸ್ವಭಾವವನ್ನು ಹೆದ್ದಾಸೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿ ಎಂದರು.
ಗುಲಾಮಗಿರಿ ಮಾನಸಿಕತೆಯಿಂದ ಮೇಲೆ ಬರಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾತನಾಡಿ ನಾವು ವೈಭವದ ಸ್ಥಿತಿಗೆ ಹೋಗುತ್ತೇವೆ ಎಂಬುದ್ನು ಸ್ವಾಮಿ ವಿವೇಕಾನಂದರು ಹಿಂದೆಯೇ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತರುಣ ಜನ ಸಿದ್ದವಾಗುತ್ತಿದ್ದಾರೆ ಆ ಭಾವನೆಯನ್ನು ತುಂಬುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ನಡೆಯುತ್ತೇವೆ, ಇಡಿ ಜಗತ್ತಿಗೆ ಮಾರ್ಗದರ್ಶನ ಮಾಡುವ ಒಂದು ಸ್ಥಿತಿಗೆ ತಲುಪುತ್ತೇವೆ. ಅದಕ್ಕೆ ಸನ್ನದರಾಗುತ್ತಿದ್ದೇವೆ. ಈಗಿನ ಐದಾರು ವರ್ಷ ಬಿಟ್ಟು ಕಳೆದ ೭೫ ವರ್ಷಗಳಲ್ಲಿ ಈ ಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ನಾವು ಮಕಾಲೆ ಶಿಕ್ಷಣದಿಂದ ಗುಲಾಮರಾಗಿಯೇ ಇರುವಂತಹದ್ದಾಗಿದೆ. ಇವತ್ತು ಜಯಂತಿ ಆಚರಣೆ ಮಾಡುವಲ್ಲೂ ಟಿಪ್ಪುವಿನ ಜಯಂತಿ, ಬಾಬರ ಜೀವನ ಸರ್ವಶ್ರೇಷ್ಟ ಅನ್ನುವುದು, ಜಗತ್ತನ್ನೇ ಗೆದ್ದು ಭಾರತವನ್ನು ಗೆಲ್ಲಲಾಗದಿದ್ದ ಅಲೆಗ್ಸಾಡರ್ ಅನ್ನು ಗ್ರೇಟ್ ಅನ್ನುವುದು. ಹೀಗೆ ತಪ್ಪು ಚರಿತ್ರೆಯನ್ನು ಮೂಡಿಸುವ ದೊಡ್ಡ ಪ್ರಯತ್ನ ನಡೆದಿದೆ. ನಾವು ಇನ್ನೂ ಗುಲಾಮ ಮಾನಸಿಕತೆಯಲ್ಲಿ ಇದ್ದೇವೆ ಅದರಿಂದ ಮೇಲೆ ಬರಬೇಕು. ಜಗತ್ತು ನಮ್ಮನ್ನು ಕಾಯುತ್ತಿದೆ ಎಂದು ಭಾರತೀಯ ಚಿಂತನೆಯನ್ನು ಮುಂದಿಟ್ಟರು.
ವಿಶೇಷ ಸಂಚಿಕೆ ಬಿಡುಗಡೆ:
ವಿವೇಕಾನಂದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ವಿಕಸನ ವಿಶೇಷ ಸಂಚಿಕೆ ಮತ್ತು ವಿವೇಕಾನಂದ ಸ್ನಾತಕೋತರ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಂದ ವಿನೂತನ ಎಂಬ ಮಾಸಿಕ ವಿಶೇಷ ಸಂಚಿಕೆಯನ್ನು ಸಂಸದ ಅನಂತಕುಮಾರ್ ಹೆಗಡೆ ಬಿಡುಗಡೆಗೊಳಿಸಿದರು. ಪತ್ರಿಕೆಯ ಪುಟ ವಿನ್ಯಾಸ, ಛಾಯಗ್ರಾಹಣ, ವರದಿಗಳನ್ನು ಪೂರ್ಣ ರೀತಿಯಲ್ಲಿ ವಿದ್ಯಾರ್ಥಿಗಳೇ ಮಾಡಿದ್ದರು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ:
ವಿವೇಕಾನಂದ ಜಯಂತಿ ಅಂಗವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು ೬೫೬೬ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ವಿವೇಕಾನಂದ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಶೋಭಿತಾ ಸತೀಶ್ ರಾವ್ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ವಿವೇಕಾನಂದ ಶಿಶು ಮಂದಿರದ ಸ್ವಾಮಿ ವಿವೇಕಾನಂದರ ವೇಷ ಧರಿಸಿದ ಪುಟಾಣಿಗಳಿಂದ ವಿವೇಕ ವಾಣಿ ನಡೆಯಿತು. ಬಳಿಕ ಅತಿಥಿಗಳು ವೇದಿಕೆಯ ಮುಂಭಾಗದಲ್ಲಿ ಇರಿಸಲಾಗಿದ್ದ ಭಾರತ ಮಾತೆ ಮತ್ತು ಸ್ವಾಮಿ ವಿವೇಕಾನಂದ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ವಿವೇಕಾನಂದ ಪದವಿ ಪೂರ್ವ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಳಿಕ ಪ್ರೇರಣಾ ಗೀತೆ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ವಂದಿಸಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.