ಮದ್ಯ ಖರೀದಿದಾರರ ಕನಿಷ್ಠ ವಯಸ್ಸಿನ ಮಿತಿ 18 ವರ್ಷಕ್ಕಿಳಿಸುವ ಪ್ರಸ್ತಾಪ ಕೈಬಿಟ್ಟ ಸರಕಾರ

0

ಬೆಂಗಳೂರು:ಮದ್ಯ ಖರೀದಿದಾರರ ಕನಿಷ್ಟ ವಯಸ್ಸಿನ ಮಿತಿಯನ್ನು 21 ವರ್ಷದಿಂದ 18 ವರ್ಷಗಳಿಗೆ ಇಳಿಸಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲುದ್ದೇಶಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ಕೈಬಿಟ್ಟಿದೆ ಎಂದು ವರದಿಯಾಗಿದೆ.

ಕರ್ನಾಟಕ ಅಬಕಾರಿ ಪರವಾನಗಿಗಳು(ಸಾಮಾನ್ಯ ಷರತ್ತುಗಳು)ನಿಯಮಗಳು-1967ಕ್ಕೆ ಹಲವು ತಿದ್ದುಪಡಿಗಳನ್ನು ತರಲು ಅಬಕಾರಿ ಇಲಾಖೆಯು ಜ.9ರಂದು ಕರಡು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು.ಅದರಲ್ಲಿ, ಮದ್ಯ ಖರೀದಿದಾರರ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಿರುವ ಸೆಕ್ಷನ್ 10(1)(ಇ) ತಿದ್ದುಪಡಿ ಪ್ರಸ್ತಾವವೂ ಇತ್ತು, ಆದರೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಕಾರಣದಿಂದ ಮದ್ಯ ಖರೀದಿದಾರರ ವಯಸ್ಸಿನ ಮಿತಿಗೆ ಸಂಬಂಧಿಸಿ ಯಾವುದೇ ತಿದ್ದುಪಡಿ ಮಾಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

‘ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಬಕಾರಿ ಕಾಯ್ದೆ ಮತ್ತು ನಿಯಮಗಳಲ್ಲಿ ವ್ಯತ್ಯಾಸಗಳಿವೆ. ಅವುಗಳನ್ನು ಸರಿಪಡಿಸಲು ತಿದ್ದುಪಡಿ ತರುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.ವಯಸ್ಸಿನ ಮಿತಿಯೂ ಅದರಲ್ಲಿ ಸೇರಿತ್ತು. ಆದರೆ, ಜನರಿಂದ ವಿರೋಧ ವ್ಯಕ್ತವಾಗುತ್ತಿರುವುದರಿಂದ ಮದ್ಯ ಖರೀದಿದಾರರ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡದಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ.

ಜನರನ್ನು ಕತ್ತಲೆಯಲ್ಲಿಟ್ಟು ನಿಯಮಗಳಲ್ಲಿ ಬದಲಾವಣೆ ಮಾಡುವ ಪ್ರಯತ್ನವನ್ನು ಇಲಾಖೆ ಮಾಡಿಲ್ಲ. ತಿದ್ದುಪಡಿಗಳ ವಿವರಗಳುಳ್ಳ ಕರಡು ನಿಯಮಗಳನ್ನು ಪ್ರಕಟಿಸಿ, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಆಹ್ವಾನಿಸಲಾಗಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿಯಮ ತಿದ್ದುಪಡಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯತಿಳಿಸಿದರು.

LEAVE A REPLY

Please enter your comment!
Please enter your name here