ಜ.24: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಸಂಭ್ರಮ

0

ಕ್ಷೀರ ವಾರಿಧಿ ವಿಸ್ತೃತ ಕಟ್ಟಡದ ಪ್ರವೇಶೋತ್ಸವ, ಸಾಂದ್ರಶೀತಲೀಕರಣ ಘಟಕ ಉದ್ಘಾಟನೆ

ಪುತ್ತೂರು: 50 ಸಂವತ್ಸರಗಳನ್ನು ಪೂರೈಸಿರುವ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಸಂಭ್ರಮ, ಕ್ಷೀರ ವಾರಿಧಿ ವಿಸ್ತೃತ ಕಟ್ಟಡದ ಪ್ರವೇಶೋತ್ಸವ ಹಾಗೂ ಸಂಘದಲ್ಲಿ ನೂತನವಾಗಿ ಅಳವಡಿಸಲಾಗಿರುವ ಸಾಂದ್ರಶೀತಲೀಕರಣ ಘಟಕದ ಉದ್ಘಾಟನೆ ಜ.24ರಂದು ನಡೆಯಲಿದೆ ಎಂದು ಸುವರ್ಣ ಸಂಭ್ರಮದ ಸಲಹಾ ಸಮಿತಿ ಸದಸ್ಯರಾಗಿರುವ ದ.ಕ.ಜಿ.ಪಂ.ಮಾಜಿ ಅಧ್ಯಕ್ಷ ಕೆ.ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ ಹೇಳಿದರು.

ಸಂಘದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 50 ವರ್ಷಗಳು ತುಂಬಿದ್ದು ಸಾಕಷ್ಟು ಬೆಳವಣಿಗೆಗಳನ್ನು ಹೊಂದಿದೆ. ಇದೀಗ ಸಾಂದ್ರ ಶೀಥಲೀಕರಣ ಘಟಕದ ಉದ್ಘಾಟನೆಯ ಜೊತೆಗೆ ನವೀಕೃತ ಕಟ್ಟದ ಉದ್ಘಾಟನೆ ಹಾಗೂ ಸಂಘದ ಸುವರ್ಣ ಮಹೋತ್ಸವ ಎಲ್ಲಾ ಸದಸ್ಯರ, ಊರ, ಪರವೂರ ದಾನಿಗಳ ಸಹಕಾರದೊಂದಿಗೆ ನಡೆಯಲಿದೆ ಎಂದರು. ಈ ಸಂಘ ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಆಧಾರ ಸ್ಥಂಭವಾಗಿ ಕಳೆದ 50 ವರ್ಷಗಳಿಂದ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದೆ. ರವಿರಾಜ ಆರಿಗ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಸಂಸ್ಥೆ ಬೆಳೆದು ಇಂದು ಊರಿನ ಹೈನುಗಾರರ ಆಧಾರ ಸ್ಥಂಭವಾಗಿದೆ. ಸಂಘದ ಚಟುವಟಿಕೆಗಳು ಮುಂದೆಯೂ ನಿತ್ಯ ನೂತನವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿದೆ ಎಂದ ಅವರು ಸುವರ್ಣ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮರ್ ಕಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ವಿಸ್ತೃತ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಸಾಂದ್ರ ಶೀತಲೀಕರಣ ಘಟಕವನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷೆ ರೇವತಿ ವಿ.ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ಖ್ಯಾತ ನ್ಯಾಯವಾದಿ ಅಶೋಕ ಆರಿಗ ಬಾರಿಕೆ ಹಾಗೂ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೆ.ಎಸ್. ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಿರ್ದೇಶಕರಾದ ನಿರಂಜನ್ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್, ಸವಿತಾ ಎನ್. ಶೆಟ್ಟಿ, ವ್ಯವಸ್ಥಾಪಕಾ ನಿರ್ದೇಶಕ ಡಿ.ಅಶೋಕ್, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಆನಂದ ಕೆ., ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದ.ಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಾ.ನಿತಾನಂದ ಭಕ್ತ, ಉಪವ್ಯವಸ್ಥಾಪಕಾ ಡಾ. ಡಿ.ಆರ್ ಸತೀಶ್ ರಾವ್, ಬಿ.ಎಂ.ಸಿ. ಉಪವ್ಯವಸ್ಥಾಪಕ ಡಾ.ಕೇಶವ ಸುಳಿ, ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ಗೌರವ ಉಪಸ್ಥಿತಿಯಿರುವರು ಎಂದು ತಿಳಿಸಿದರು.

ಎಲ್ಲರ ಸಹಕಾರ, ಪ್ರೋತ್ಸಾಹ ಸಿಕ್ಕಿದೆ-ರೇವತಿ ವೀರಪ್ಪ ಪೂಜಾರಿ:

ಸಂಘದ ಅಧ್ಯಕ್ಷರಾಗಿರುವ ಗ್ರಾ.ಪಂ.ಮಾಜಿ ಅಧ್ಯಕ್ಷೆ ರೇವತಿ ವಿ.ಪೂಜಾರಿ ಡೆಕ್ಕಾಜೆ ಅವರು ಮಾತನಾಡಿ, ಸಂಘವು 1972ರಲ್ಲಿ ಪ್ರಾರಂಭಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಅಭಿವೃದ್ಧಿ ಹೊಂದುತ್ತಾ ಇಂದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಕಟ್ಟಡ ನವೀಕರಣಗೊಳಿಸುವ ಬಗ್ಗೆ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಾಂದ್ರಶೀಥಲೀಕರಣ ಘಟಕ ಪ್ರಾರಂಭಿಸುವಂತೆ ಒಕ್ಕೂಟದಿಂದ ನಿರ್ದೇಶನ ಬಂದಿದ್ದು ಸುಮಾರು ರೂ.12 ಲಕ್ಷ ವೆಚ್ಚದಲ್ಲಿ ಕಟ್ಟಡದ ನವೀಕರಣ ಹಾಗೂ ಸಾಂದ್ರಶೀಥಲೀಕರಣ ಘಟಕ ನಿರ್ಮಿಸಲಾಗಿದೆ. ಇದು ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಸಾಧ್ಯವಾಗಿದೆ ಎಂದರು. ಹಿರಿಯರು ಹಂತ ಹಂತವಾಗಿ ಮಾರ್ಗದರ್ಶನ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿಯೇ ಪ್ರಥಮ ಸಂಘ-ಕೆ.ಜಯಾನಂದ:

ಸಲಹಾ ಸಮಿತಿ ಸದಸ್ಯರಾಗಿರುವ ತಾ.ಪಂ.ಮಾಜಿ ಅಧ್ಯಕ್ಷ ಕೆ. ಜಯಾನಂದ ಕೋಡಿಂಬಾಡಿ ಮಾತನಾಡಿ, 1972ರಲ್ಲಿ ದ.ಕ ಜಿಲ್ಲೆಯಲ್ಲಿಯೇ ಕೋಡಿಂಬಾಡಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಥಮವಾಗಿ ಪ್ರಾರಂಭಗೊಂಡಿದೆ. ರವಿರಾಜ ಆರಿಗ, ಪದ್ಮಪ್ಪ ಪೂಜಾರಿ, ಲಕ್ಷ್ಮೀನಾರಾಯಣ ನಾಯ್ಕ, ಗಣಪತಿ ನಾಯಕ್ ಅವರು ಕ್ಷೀರ ಉದ್ಯಮವನ್ನು ವ್ಯಾವಹಾರಿಕವಾಗಿ ಯಾವ ರೀತಿ ಬಳಸಬಹುದು ಎಂದು ಪರಿಚಯಿಸಿದ್ದರು. ಜೀವನ ನಿರ್ವಹಣೆಗೆ ಆರ್ಥಿಕ ಸಂಪನ್ಮೂಲವಾಗಿ ಬಳಸಿಕೊಳ್ಳಲು ಸಹಕಾರಿಯಾಗುವ ಮುಂದಾಲೋಚನೆಯಲ್ಲಿ ಸಂಘ ಪ್ರಾರಂಭಿಸಿದ್ದರು. ನಂತರ ಹಂತ ಹಂತವಾಗಿ ಸಂಘ ಬೆಳೆದಿದೆ. ಇದರ ಸುವರ್ಣ ಸಂಭ್ರಮವು ಸಲಹಾ ಸಮಿತಿ ರಚಿಸಿಕೊಂಡು ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು, ನಿರ್ದೆಶಕರು, ಸದಸ್ಯರನ್ನು ಗೌರವಿಸಲಾಗುವುದು. ಜೊತೆಗೆ ಬೆಳವಣಿಗೆಗೆ ಸಹಕರಿಸಿದ ಸದಸ್ಯರನ್ನು ಗೌರವಿಸಲಾಗುವುದು ಎಂದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ಕಲ್ಯಾಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ ಅವರು ಕೋಡಿಂಬಾಡಿ ಗ್ರಾಮದ ಪ್ರತಿಯೊಬ್ಬರನ್ನೂ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಹಬ್ಬದ ವಾತಾವರಣ ನಿರ್ಮಾಣ- ಜಗನ್ನಾಥ ಶೆಟ್ಟಿ:

ಸಂಘದ ನಿರ್ದೇಶಕರಾದ ಗ್ರಾ.ಪಂ. ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ ಮಾತನಾಡಿ ಹಲವಾರು ಪ್ರಥಮಗಳಿಗೆ ಕಾರಣವಾದ ಕೋಡಿಂಬಾಡಿ ಗ್ರಾಮಕ್ಕೆ ಹಾಲು ಉತ್ಪಾದಕರ ಸಂಘ ಒಂದು ಗರಿಯಾಗಿದೆ. ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟೇ ಸಂಘಗಳು 50 ವರ್ಷ ಪೂರೈಸುತ್ತಿದೆ. ಅದರಲ್ಲಿಯೂ ಸುವರ್ಣ ಸಂಭ್ರಮದ ನಡೆಸುವುದು ಕೋಡಿಂಬಾಡಿ ಸಂಘವೇ ಪ್ರಥಮವಾಗಿದೆ. ಸುವರ್ಣ ಸಂಭ್ರಮದಲ್ಲಿ ಇಡೀ ಗ್ರಾಮವೇ ಸೇರಿಕೊಂಡು ಹಬ್ಬದ ರೀತಿಯಲ್ಲಿ ಆಚರಿಸುವ ಯೋಜನೆಯಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರನ್ನು ಗೌರವಿಸುವುದು, ಹಿರಿಯರನ್ನು ಸ್ಮರಿಸುವ ಮೂಲಕ ಹಬ್ಬದ ವಾತಾವರಣ ನಿರ್ಮಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಚಂದ್ರಶೇಖರ ಗೌಡ ಬದಿನಾರು, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಶೇಖರ ಪೂಜಾರಿ ಡೆಕ್ಕಾಜೆ, ದೇವದಾಸ ಗೌಡ ಉಳಿತ್ತಡ್ಕ, ರತ್ನವರ್ಮ ಆಳ್ವ ಮಿತ್ತಳಿಕೆ, ಚೆನ್ನಪ್ಪ ಗೌಡ ನಿಡ್ಯ, ಕೇಶವ ಗೌಡ ಬರೆಮೇಲು, ರಾಧಿಕಾ ಆರ್ ಸಾಮಂತ್ ನೆಕ್ಕರಾಜೆ, ಹರಿಣಾಕ್ಷಿ ಆರ್ ಭಂಡಾರಿ ಮರ್ದನಳಿಕೆ, ಲೀಲಾವತಿ ಪರಬಪಾಲು, ಸಲಹಾ ಸಮಿತಿ ಸದಸ್ಯರಾದ ಪ್ರದೀಪ್ ಕುಮಾರ್ ಶೆಟ್ಟಿ ಪನಿಪಾಲು, ಸುಭಾಸ್ ನಾಯಕ್ ನೆಕ್ಕರಾಜೆ, ವಾರಿಸೇನ ಜೈನ್ ಕೋಡಿಯಾಡಿ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಲೀಲಾವತಿ ಲಕ್ಷ್ಮಣ ಗೌಡ ಮೇಲಿನಹಿತ್ತಿಲು, ಲೀಲಾಧರ ಗೌಡ ಉಳಿತ್ತಡ್ಕ, ಸುಬ್ರಹ್ಮಣ್ಯ ಗೌಡ ಬಾರ್ತಿಕುಮೇರು, ಬಾಬು ಗೌಡ ಭಂಡಾರದಮನೆ, ಕಾರ್ಯನಿರ್ವಹಣಾಧಿಕಾರಿ ರಮೇಶ್ ರಾಜಪಲ್ಕೆ, ಹಾಲು ಪರೀಕ್ಷಕ ನಾರಾಯಣ ಪೂಜಾರಿ ಮತ್ತು ಸಹಾಯಕಿ ಕವಿತಾ ಉಪಸ್ಥಿತರಿದ್ದರು.

ಸುದ್ದಿಯಲ್ಲಿ ನೇರಪ್ರಸಾರ

ಜ.24ರಂದು ನಡೆಯಲಿರುವ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಸುದ್ದಿ ಯೂ ಟ್ಯೂಬ್ ಚಾನೆಲ್ ಮತ್ತು ಸುದ್ದಿ ಬಿಡುಗಡೆ ಫೇಸ್ಬುಕ್ ಪೇಜಿನಲ್ಲಿ ನೇರಪ್ರಸಾರಗೊಳ್ಳಲಿದೆ.

LEAVE A REPLY

Please enter your comment!
Please enter your name here