ಸಾಲ ಮನ್ನಾದಿಂದ ವಂಚಿತಗೊಂಡ ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಹಲವು ಸದಸ್ಯರು; ಸಂಘದ ಅಧ್ಯಕ್ಷ ಬಾಬು ಶೆಟ್ಟಿಯವರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

0

ಪುತ್ತೂರು: ಸಾಲ ಮನ್ನಾದಿಂದ ವಂಚಿತರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನಿಯಮಾನುಸಾರ 650 ಸದಸ್ಯರು ಸಾಲ ಮನ್ನಾ ಯೋಜನೆಗೆ ಅರ್ಹರಿದ್ದು 401 ಸದಸ್ಯರಿಗೆ ಸಾಲ ಮನ್ನಾ ಯೋಜನೆಯ ಸೌಲಭ್ಯವು ಸಿಕ್ಕಿರುತ್ತದೆ. ಆ ಬಳಿಕ 169 ಜನ ಸದಸ್ಯರ ಹೆಸರು ಹಸಿರು ಪಟ್ಟಿಗೆ ಸೇರಿದ್ದು ಹಣ ಬಿಡುಗಡೆಗೆ ಬಾಕಿ ಇರುತ್ತದೆ. ಇನ್ನೂ 80 ಜನ ಸದಸ್ಯರ ಹೆಸರು ಹಸಿರುಪಟ್ಟಿಗೆ ಸೇರಲು ಬಾಕಿ ಇದೆ. ಅವರ ಹೆಸರನ್ನು ತಕ್ಷಣ ಹಸಿರುಪಟ್ಟಿಗೆ ಸೇರಿಸಿ ಸಾಲ ಮನ್ನಾ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವ ವಿಚಾರವಾಗಿ ಬಾಬು ಶೆಟ್ಟಿಯವರು ಖ್ಯಾತ ವಕೀಲರಾದ ಪಿ.ಪಿ ಹೆಗ್ಡೆ ಮುಖಾಂತರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಸದಸ್ಯರ ಸಾಲ ಮನ್ನಾ ವಿಚಾರವಾಗಿ ಅನೇಕ ಹೋರಾಟ, ಪ್ರತಿಭಟನೆ ನಡೆದಿತ್ತು. ಮಾತ್ರವಲ್ಲದೇ ಸಂಘದ ಅಧ್ಯಕ್ಷ ಬಾಬು ಶೆಟ್ಟಿಯವರ ನೇತೃತ್ವದಲ್ಲಿ ಶಾಸಕ ಸಂಜೀವ ಮಠಂದೂರು ಮುಖಾಂತರ ಸಹಕಾರ ಸಚಿವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.

ಸಂಘದ ಸದಸ್ಯರ ಸಾಲ ಮನ್ನಾ ವಿಚಾರದಲ್ಲಿ ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳು ಮಾಡುತ್ತಾ ಬಂದಿದ್ದೇವೆ. ಆದರೂ ಸಾಲ ಮನ್ನಾದ ಪ್ರಯೋಜನ ಅನೇಕ ಸದಸ್ಯರಿಗೆ ಇನ್ನೂ ಸಿಗದ ಕಾರಣ ಇದೀಗ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ನರಿಮೊಗರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಬಾಬು ಶೆಟ್ಟಿ ತಿಳಿಸಿದ್ದಾರೆ. ಸಂಘದ ಸದಸ್ಯರಿಗೆ ಯಾರಿಗೂ ಅನ್ಯಾಯವಾಗಬಾರದು, ಸಾಲ ಮನ್ನಾ ಪ್ರಯೋಜನ ಅರ್ಹರಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here