ಬಂಟ್ವಾಳ ಶಾಸಕರ ನಿಧಿಯಿಂದ ವಿಶೇಷ ಕೊಡುಗೆ: ರೇಷ್ಮಾ ಶಂಕರಿ ಬಲಿಪಗುಳಿ
ವಿಟ್ಲ: ಸಣ್ಣ ನೀರಾವರಿ ಇಲಾಖೆ ಮೂಲಕ 45 ಲಕ್ಷ ವೆಚ್ಚದಲ್ಲಿ ಬಂಟ್ವಾಳ ಶಾಸಕರ ವಿಶೇಷ ಪ್ರಯತ್ನದ ಮೂಲಕ ನಿರ್ಮಾಣವಾದ ವಿಟ್ಲ ಪಡ್ನೂರು ಗ್ರಾಮದ ಮೂರ್ಕಜೆ ಕೊಡಂಗಾಯಿ ಪಂಚತೀರ್ಥದಲ್ಲಿ ಪಂಚಲಿಂಗೇಶ್ವರ ದೇವರ ಅವಭೃತ ಸ್ನಾನ ಘಟ್ಟ ಲೋಕಾರ್ಪಣೆಗೊಂಡಿತು.
ಬೆಳಗ್ಗೆ ಸ್ನಾನಘಟ್ಟದಲ್ಲಿ ಗಂಗಾ ಪೂಜೆ ಹಾಗೂ ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ ಬಲ್ಲಾಳ್ ದೀಪ ಬೆಳಗಿಸುವ ಮೂಲಕ ಸ್ನಾನಘಟ್ಟ ಲೋಕಾರ್ಪಣೆ ಗೊಂಡಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಶಂಕರಿ ಬಲಿಪಗುಳಿರವರು ಮಾತನಾಡಿ ವಿಟ್ಲ ಸೀಮೆಗೆ ಸಂಬಂಧಿಸಿದ ಕೊಡಂಗಾಯಿ ನದಿಯ ನೀರು ಕಸಕಡ್ಡಿಗಳಿಂದ ಕಲುಷಿತಗೊಂಡಿದ್ದು, ಶಾಸಕರ ವಿಶೇಷ ಪ್ರಯತ್ನದ ಫಲವಾಗಿ ತಡೆಗೋಡೆ ನಿರ್ಮಾಣ ಹಾಗೂ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ನದಿಯಲ್ಲಿ ಸ್ನಾನಘಟ್ಟವನ್ನು ನಿರ್ಮಾಣ ಮಾಡಲಾಗಿದೆ. ಈ ಭಾಗದ ಜನರಿಗೆ ಅನುಕೂಲವಾಗುವಂತೆ ಇದೇ ನದಿಗೆ ಶಾಸಕರ ಅನುದಾನದ ಮೂಲಕ ಕೃಷಿ ಹಾಗೂ ಜಲವೃದ್ದಿಗಾಗಿ ಕಿಂಡಿ ಅಣೆಕಟ್ಟು ನಿರ್ಮಾಣದ ಕಾರ್ಯ ಅಂತಿಮವಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿಕರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೀತಾರಾಮ ಕೆದಿಲಾಯ, ಅಜಯ ಟ್ರಸ್ಟಿನ ಸದಸ್ಯರಾದ ರವೀಂದ್ರ ಪುಣಚ, ಕಟ್ಟೆ ಸಮಿತಿಯ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವೀಶ ಶೆಟ್ಟಿ ಕರ್ಕಳ ಮೊದಲಾದವರು ಉಪಸ್ಥಿತರಿದ್ದರು.