ಪುತ್ತೂರು: ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರದ್ದು ಧೀಮಂತ ವ್ಯಕ್ತಿತ್ವ. ಓರ್ವ ದಂಡಾಧಿಕಾರಿಯಾಗಿ ಸರಕಾರದ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಮೂಲಕ ಕಣ್ಣೀರೊರೆಸುವ ಕಾರ್ಯವನ್ನು ಮಾಡಿರುವ ಬಡವರ ಪಾಲಿನ ಆಶಾಕಿರಣ. ಜೊತೆಗೆ ಆಧುನಿಕ ಜೀವನದಲ್ಲಿ ಅಧಿಕಾರಿಗಳು ಭ್ರಷ್ಟಾಚಾರರಹಿತವಾಗಿ ಹೇಗೆ ಕೆಲಸ ಮಾಡಬೇಕೆಂದು ತೋರಿಸಿಕೊಟ್ಟವರು ಕೂಡ ಕೋಚಣ್ಣ ರೈಯವರು ಆಗಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಎ.8 ರಂದು ದರ್ಬೆ ಬೈಪಾಸ್ ರಸ್ತೆಯ ಬಳಿಯ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಇತ್ತೀಚೆಗೆ ಅಗಲಿದ ನಿವೃತ್ತ ತಹಶೀಲ್ದಾರ್ ಹಾಗೂ ಗಾಂಧೀವಾದಿ ಚಿಲ್ಮೆತ್ತಾರು ಕೋಚಣ್ಣ ರೈಯವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ದಿ.ಕೋಚಣ್ಣ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತ ಎಂಬಂತೆ ಓರ್ವ ವ್ಯಕ್ತಿಯ ಹುಟ್ಟು-ಸಾವು ನಡುವಿನ ಪಯಣದಲ್ಲಿ ವ್ಯಕ್ತಿ ಸಮಾಜದಲ್ಲಿ ಹೇಗೆ ಜೀವಿಸಬೇಕು ಎನ್ನುವುದಕ್ಕೆ ಕೋಚಣ್ಣ ರೈಯವರು ಸಾಕ್ಷಿಯಾಗಿದ್ದಾರೆ. ವ್ಯಕ್ತಿಯು ಸಮಾಜದಲ್ಲಿ ಯಾವ ರೀತಿಯ ಕೊಡುಗೆ ನೀಡಬಹುದು, ಏನೆಲ್ಲಾ ನಿರ್ಮಾಣ ಮಾಡಬಹುದು ಮತ್ತು ಊರಿಗೆ ಹೇಗೆ ಹೆಸರನ್ನು ತರಬಹುದು ಎಂಬುದಕ್ಕೆ ಕೋಚಣ್ಣ ರೈಯವರು ನೆನಪಿಗೆ ಬರುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವ ಕಮ್ಮ ಕಣ್ಮುಂದೆ ಮರೆಮಾಚಿದೆ. ೩೦ ವರುಷದ ಹಿಂದೆ ಬೈಪಾಸ್ ರಸ್ತೆ ನಿರ್ಮಿಸುವಲ್ಲಿನ ಅವರ ಕಾರ್ಯತತ್ಪರತೆ, ಪುತ್ತೂರನ್ನು ಪ್ರವಾಸಿತಾಣವನ್ನಾಗಿ ಮಾಡಬೇಕೆನ್ನುವ ಅವರಲ್ಲಿನ ಹಂಬಲ ಅಲ್ಲದೆ ಅನೇಕ ಅವರ ಜನಪರ ಯೋಜನೆಗಳು ನಮ್ಮ ಕಣ್ಣ ಮುಂದೆ ಸೆಳೆಯುತ್ತವೆ. ಅವರ ಆದರ್ಶ ಹಾಗೂ ಕೊಡುಗೆಗಳು ಮುಂದಿನ ಪೀಳಿಗೆಗೆ ಪ್ರಸ್ತುತಪಡಿಸಬೇಕಾಗಿದೆ ಎಂದು ಹೇಳಿ ಅಗಲಿದ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಕೋಚಣ್ಣ ರೈಯವರು ಬಂಟ ಸಮಾಜಕ್ಕೆ ಕಲಶಪ್ರಾಯರಂತಿದ್ದರು-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಕೋಚಣ್ಣ ರೈಯವರ ಸೇವಾವಧಿಯಲ್ಲಿ ಅವರು ಹಾಕಿಕೊಟ್ಟ ಕ್ರಾಂತಿಕಾರಕ ಹೆಜ್ಜೆ ಗುರುತುಗಳು ಮನಮುಟ್ಟುವಂತಹುದು. ಸದಾ ಹಸನ್ಮುಖಿ, ಸಮಾಜಸೇವೆಯಲ್ಲಿ ಅವರು ತೋರಿಸುವ ಉತ್ಸಾಹಿ ಮನೋಭಾವ ಜೊತೆಗೆ ಅವರ ಕಾಲಾವಧಿಯಲ್ಲಿ ಅಧಿಕಾರಿಗಳು ಉತ್ಸುಕರಾಗಿ ಕೆಲಸ ಮಾಡಲು ಹೆಚ್ಚಿನ ಸ್ವಾತಂತ್ರ್ಯವನ್ನು ಕೊಡುತ್ತಿದ್ದರು. ಕೋಚಣ್ಣ ರೈಯವರು ಬಂಟ ಸಮಾಜಕ್ಕೆ ಕಲಶಪ್ರಾಯರಂತಿದ್ದರು. ನುಡಿದಂತೆ ನಡೆಯುವ ಕ್ರಿಯಾಶೀಲ ವ್ಯಕ್ತಿತ್ವ ಅವರದಾಗಿತ್ತು. ಕೋಚಣ್ಣ ರೈಯವರು ರಚಿಸಿದ ಗಾಂಧಿಯುಗ ಕ್ಯಾಲೆಂಡರ್, ಬೀರಮಲೆ ಅಭಿವೃದ್ದಿ ಪ್ರಾಜೆಕ್ಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಮೀನು, ಮೊಟ್ಟೆತ್ತಡ್ಕದಲ್ಲಿ ಎನ್ಆರ್ಸಿಸಿ ಸ್ಥಾಪನೆ ಹೀಗೆ ಅನೇಕ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಂದ ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಇದೀಗ ನಮ್ಮನ್ನಗಲಿದ ಕೋಚಣ್ಣ ರೈಯವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.
ಪುತ್ತೂರಿನ ಅಭಿವೃದ್ದಿಯ ಹರಿಕಾರ, ಸಮಾಜಮುಖಿ ಚಿಂತಕ, ಗಾಂಧೀವಾದಿ ಕೋಚಣ್ಣ ರೈ-ಜಗನ್ನಾಥ ರೈ:
ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರ ಬದುಕಿನ ಬಗ್ಗೆ ಪುಸ್ತಕ ಬರೆದ ಲೇಖಕ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಜಗನ್ನಾಥ ರೈ ಬಾಲ್ಯೊಟ್ಟುಗುತ್ತುರವರು ಮಾತನಾಡಿ, ಸೂರ್ಯನ ಪ್ರಭೆ ಕನ್ನಡಿಯಲ್ಲಿ ಹಿಡಿದೆ ಎಂಬಂತೆ ಕೋಚಣ್ಣ ರೈಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಪುತ್ತೂರಿನ ಅಭಿವೃದ್ದಿಯ ಹರಿಕಾರ, ಸಮಾಜಮುಖಿ ಚಿಂತಕ, ಗಾಂಧೀವಾದಿ ಸಿ.ಎಚ್ ಕೋಚಣ್ಣ ರೈ ಎಂಬ ಹೆಸರಿನಲ್ಲಿ ಪುಸ್ತಕವನ್ನು ರಚಿಸಲಾಗಿದೆ. ಭ್ರಷ್ಟಾಚಾರರಹಿತವಾಗಿ ಅವರ ಜೀವನ, ಅವರು ತೆಗೆದುಕೊಳ್ಳುವ ದೃಢ ನಿರ್ಧಾರಗಳು, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯನ್ನು ಮಾಡದ ವ್ಯಕ್ತಿತ್ವ ಮಾತ್ರವಲ್ಲದೆ ಜಿಲ್ಲಾಧಿಕಾರಿಯವರ ಮುಂದೆ ಧೈರ್ಯದಿಂದ ಮಾತನಾಡುವ ಏಕೈಕ ವ್ಯಕ್ತಿ ಎಂದರೆ ಅದು ಕೋಚಣ್ಣ ರೈಗಳು ಆಗಿದ್ದಾರೆ ಎಂದು ಹೇಳಿ ಅಗಲಿದ ಕೋಚಣ್ಣ ರೈಗಳ ಆತ್ಮಕ್ಕೆ ಚಿರಶಾಂತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಕಾಯಕಲ್ಪ ಒದಗಿಸಿದ್ದಾರೆ-ಕೇಶವಪ್ರಸಾದ್ ಮುಳಿಯ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಮಾತನಾಡಿ, ತಾನು ಚಿಕ್ಕದಿರುವಾಗ ಅಪ್ಪನ ಜೊತೆ ಬಿರುಮಲೆ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕೋಚಣ್ಣ ರೈಯವರನ್ನು ಬಲ್ಲವನಾಗಿದ್ದೇನೆ. ಕೋಚಣ್ಣ ರೈಯವರು ತಹಶೀಲ್ದಾರ್ ಆಗಿದ್ದಂತಹ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾಗದ್ದೆ, ರಥಬೀದಿ ಜಮೀನು ಭೂಸ್ವಾಧೀನ ಮಾಡಿಸಿ ದೇವಸ್ಥಾನದ ಅಭಿವೃದ್ಧಿಗೆ ಕಾಯಕಲ್ಪ ಒದಗಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಮ್ಮ ಕಣ್ಮುಂದೆ ಇದೆ ಎಂದು ಹೇಳಿ ಅಗಲಿದ ಕೋಚಣ್ಣ ರೈಯವರ ಆತ್ಮಕ್ಕೆ ಶ್ರೀ ಮಹಾಲಿಂಗೇಶ್ವರ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕೋಚಣ್ಣ ರೈಯವರ ಯೋಚನೆ, ಯೋಜನೆಗಳು ಮನಮುಟ್ಟುವಂತಿತ್ತು-ಪ್ರೊ|ಎ.ವಿ ನಾರಾಯಣ:
ಬಿರುಮಲೆ ಬೆಟ್ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಹಾಗೂ ಕೋಚಣ್ಣ ರೈಯವರ ಒಡನಾಡಿಯಾಗಿರುವ ಪ್ರೊ|ಎ.ವಿ ನಾರಾಯಣರವರು ಮಾತನಾಡಿ, ಚಿಲ್ಮೆತ್ತಾರು ಕೋಚಣ್ಣ ರೈಯವರ ಪರಿಚಯ ನನಗೆ ಅವರು ಪುತ್ತೂರಿನಲ್ಲಿ ತಹಶೀಲ್ದಾರರಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಇತ್ತು. ಆದರೆ ಅವರೊಂದಿಗಿನ ಒಡನಾಟ ಪ್ರಾರಂಭವಾದದ್ದು ನನ್ನ ನಿವೃತ್ತಿಯ ನಂತರ. ಕೋಚಣ್ಣ ರೈಯವರ ಯೋಚನೆ ಹಾಗೂ ಯೋಜನೆಗಳು ಮನಮುಟ್ಟುವಂತಿತ್ತು ಮತ್ತು ಅವರೊಡನೆ ನಮಗೆ ಸಹಕಾರ ಮಾಡುವ ಅವಕಾಶನೂ ಲಭಿಸಿತ್ತು. ಅವರ ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ, ಕೆಲಸದ ಬಗ್ಗೆ ಕಾಳಜಿ ಈ ಎಲ್ಲ ಗುಣಗಳನ್ನು ಬಹಳ ಸಮೀಪದಿಂದ ಕಂಡವ ಮತ್ತು ಮೆಚ್ಚಿಕೊಂಡವನಾಗಿದ್ದೇನೆ ಮತ್ತು ಅವರು ಹಾಕಿಕೊಂಡ ಯೋಜನೆಗಳಿಂದ ಜೀವನವನ್ನು ಸಾರ್ಥಕಗೊಳಿಸಿದ್ದಾರೆ ಎಂದು ಹೇಳಿ ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಜನಸಾಮಾನ್ಯರೊಂದಿಗೆ ಹೇಗೆ ಕರ್ತವ್ಯ ನಿರ್ವಹಿಸಬಹುದು ಎಂದು ತೋರಿಸಿಕೊಟ್ಟವರು-ಜಗನ್ನೀವಾಸ್ ರಾವ್:
ನ್ಯಾಯವಾದಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎನ್.ಕೆ ಜಗನ್ನೀವಾಸ್ ರಾವ್ ಮಾತನಾಡಿ, ಓರ್ವ ಅಧಿಕಾರಿಯು ಜನಸಾಮಾನ್ಯರ ನಡುವೆ ಹೇಗೆ ಕರ್ತವ್ಯ ನಿರ್ವಹಿಸಬಹುದು ಎಂದು ಕೋಚಣ್ಣ ರೈಯವರು ತೋರಿಸಿಕೊಟ್ಟಿದ್ದಾರೆ. ತನ್ನ ಅವಧಿಯಲ್ಲಿ ದೇವಸ್ಥಾನದ ರಥಬೀದಿ, ಕಲ್ಯಾಣ ಮಂಟಪವಾಗಲು ಕೋಚಣ್ಣ ರೈಯವರು ಕಾರಣರಾಗಿದ್ದಾರೆ. ಅಭಿವೃಧ್ದಿ ವಿಚಾರದಲ್ಲಿ ಕೋಚಣ್ಣ ರೈಯವರು ಬಹಳ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅಂತಹ ಸ್ನೇಹಿತನನ್ನು ನಾವಿಂದು ಕಳಕೊಂಡಿದ್ದೇವೆ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.
ಸರಳ, ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿದ್ದರು ಕೋಚಣ್ಣ ರೈಯವರು-ಕಡಮಜಲು ಸುಭಾಷ್ ರೈ:
ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರು ಮಾತನಾಡಿ, ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುವವರು ಕೋಚಣ್ಣ ರೈಯವರು. ಇಂತಹ ಅಪರೂಪದ ಸರಳ, ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಕೋಚಣ್ಣ ರೈಯವರು ನಮ್ಮ ನಿಮ್ಮ ನಡುವೆ ಇದ್ದರು ಎಂಬುದನ್ನು ಈ ಸಮಾಜ ಮರೆಯಬಾರದು ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ್ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಲೇಖಕ ನರೇಂದ್ರ ರೈ ದೇರ್ಲ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಕ್, ಬಿಜೆಪಿ ಗ್ರಾಮಾಂತರ ಮಂಡಳಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ, ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ, ಉದ್ಯಮಿ ಶಿವರಾಂ ಆಳ್ವ ಸಹಿತ ಹಲವರು ಆಗಮಿಸಿ ಅಗಲಿದ ಕೋಚಣ್ಣ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರ ಪುತ್ರಿಯರಾದ ಶ್ರೀಮತಿ ವಿಜಯ ಆರ್.ಅಡ್ಯಂತಾಯ, ಶ್ರೀಮತಿ ಸುಜಯ ವಿ.ರೈ, ಪುತ್ರ ಡಾ.ಮಂಜುನಾಥ್ ರೈ, ಅಳಿಯ ರಾಮಕೃಷ್ಣ ಅಡ್ಯಂತಾಯ, ಸೊಸೆ ಶ್ರೀಮತಿ ಅರ್ಪಣಾ ಎಂ.ರೈ ಹಾಗೂ ಚಿಲ್ಮೆತ್ತಾರು ಮತ್ತು ಮುಂಡಾಳಗುತ್ತು ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎ.ಜೆ ರೈ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರ ಪುತ್ರ ಡಾ.ಮಂಜುನಾಥ್ ರೈ ವಂದಿಸಿದರು.
ಜನರಿದ್ದಲ್ಲೇ ಕೆಲಸಗಳನ್ನು ಮಾಡಿಕೊಟ್ಟ ಕೀರ್ತಿ…
ಸರಕಾರಿ ಸೇವಾವಧಿಯಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಕಂದಾಯ ಕಛೇರಿಯನ್ನು ಹೋಬಳಿ ಮಟ್ಟಕ್ಕೆ ಕೊಂಡೋಗಿ ಆ ಭಾಗದ ಜನರಿಗೆ ಅವರಿದ್ದಲ್ಲೇ ಅವರವರ ಕೆಲಸಗಳನ್ನು ಮಾಡಿಕೊಟ್ಟ ಕೀರ್ತಿ ಕೋಚಣ್ಣ ರೈಯವರಿಗೆ ಸಲ್ಲುತ್ತದೆ. ಅಂದಿನ ಕಾಲದಲ್ಲಿ ಜನಪ್ರತಿನಿಧಿಗಳಿಂದಲೂ ಮಿಗಿಲಾಗಿ ಅವರಿಗೆ ಉತ್ತಮ ಹೆಸರನ್ನು ನೀಡಿದ್ದಲ್ಲದೆ ಸರಕಾರಿ ಸೇವೆಗಳನ್ನು ಭ್ರಷ್ಟಾಚಾರ ಇಲ್ಲದೆ ಜನ ಮೆಚ್ಚುವಂತೆ ಮಾಡಿಕೊಟ್ಟ ಸಾರ್ವಕಾಲಿಕ ಸಾಧನೆಯಾಗಿ ಕೀರ್ತಿ ತಂದಿರುವುದು ಸತ್ಯ. ಸರಕಾರಿ ಸೇವೆಯಲ್ಲಿ ಜನರಿಗೆ ಸಲ್ಲಬೇಕಾದ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದೆ ಪಾರದರ್ಶಕವಾಗಿ ನಿರ್ವಹಿಸಿದ ಕೋಚಣ್ಣ ರೈಯವರ ಪ್ರಯತ್ನಕ್ಕೆ ಸಾಟಿಯಿಲ್ಲವೆಂದರೆ ತಪ್ಪಾಗಲಾರದು.
-ಬಿ.ಐತ್ತಪ್ಪ ನಾಯ್ಕ್, ದಿ.ಕೋಚಣ್ಣ ರೈಯವರ ಪುಸ್ತಕದಲ್ಲಿ ಮುನ್ನುಡಿ ಬರೆದವರು
ಸಾಕ್ಷ್ಯಚಿತ್ರ..ಮೌನ ಪ್ರಾರ್ಥನೆ..
ಅಗಲಿದ ನಿವೃತ್ತ ತಹಶೀಲ್ದಾರ್ ಹಾಗೂ ಗಾಂಧೀವಾದಿ ಕೋಚಣ್ಣ ರೈಯವರ ಜೀವನ ವೃತ್ತಾಂತದ ಕುರಿತಾದ ಸಾಕ್ಷ್ಯಚಿತ್ರವನ್ನು ಸಭಾಂಗಣದಲ್ಲಿ ಎಲ್ಇಡಿ ಮುಖೇನ ಪ್ರಸ್ತುಪಡಿಸಲಾಯಿತು. ಈ ಸಾಕ್ಷ್ಯಚಿತ್ರವನ್ನು ಸಂಸದ ನಳಿನ್ ಕುಮಾರ್ ಕಟೀಲುರವರು ದಿ.ಕೋಚಣ್ಣ ರೈಯವರ ಭವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಅನಾವರಣಗೊಳಿಸಿದರು. ಅಲ್ಲದೆ ಅಗಲಿದ ದಿ.ಕೋಚಣ್ಣ ರೈ ಹಾಗೂ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಮಾಲಕ ಬೆಳ್ಳಾರೆ ಸಂಜೀವ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಪ್ರಮುಖ ಯೋಜನೆಗಳು
-ಪುತ್ತೂರು ಬೈಪಾಸು ರಸ್ತೆ ನಿರ್ಮಾಣ
-ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಗದ್ದೆ ಮತ್ತು ರಥಬೀದಿಗೆ ಭೂ ಸ್ವಾಧೀನ ಪ್ರಕ್ರಿಯೆ
-ಕೇಂದ್ರ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಮೊಟ್ಟೆತ್ತಡ್ಕ ಎಂಬಲ್ಲಿ ನೂರಾರು ಎಕ್ರೆ ಜಮೀನು ಮಂಜೂರಾತಿ
-ಬಿರುಮಲೆ ಬೆಟ್ಟದ ಅಭಿವೃದ್ಧಿ ಯೋಜನೆಗಳು
-ಬಳ್ಳೇರಿ ರಕ್ಷಿತಾರಣ್ಯ ಅಭಿವೃದ್ಧಿಗೆ ಚಾಲನೆ
-ಬೇಂದ್ರ್ತೀರ್ಥ ಅಭಿವೃದ್ದಿಗೆ ಯೋಜನೆಯ ಕಾರ್ಯಚಟುವಟಿಕೆ