- ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಬಹಳ ಮುಖ್ಯ ಘಟ್ಟ – ಸತೀಶ್ ಕೆಡೆಂಜಿ
- ವಿದ್ಯಾರ್ಥಿಗಳು ದೇಶದ ಉತ್ತಮ ನಾಗರಿಕರಾಗಬೇಕು – ಉದಯ ಅಮೀನ್
- ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು -ಅನುಪ್
ಪುತ್ತೂರು: ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಸಹಕಾರದೊಂದಿಗೆ ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮತ್ತು ಪರೀಕ್ಷೆ ಎದುರಿಸುವ ಕುರಿತು ತರಬೇತಿ ಕಾರ್ಯಕ್ರಮ ‘ಯುವವಾಹಿನಿ ಶಿಕ್ಷಣ ಸ್ಪೂರ್ತಿ-2022’ ಫೆ.8ರಂದು ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ನಡೆಯಿತು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ. ಬಹಳ ಮುಖ್ಯವಾದ ಘಟ್ಟ. ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಪುತ್ತೂರು ಯುವವಾಹಿನಿ ಘಟಕ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯುತ್ತಮವಾದುದು. ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಆತಂಕ ಇರಬಹುದು, ಆತಂಕ ಪಟ್ಟರೆ ಉತ್ತಮ ಅಂಕ ಪಡೆಯಲು ಸಾಧ್ಯವಿಲ್ಲ. ಆತ್ಮಸ್ಥೈರ್ಯದಿಂದ ಪರೀಕ್ಷೆಗೆ ತಯಾರಿ ನಡೆಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಮಾತನಾಡಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬುದು ಯುವವಾಹಿನಿಯ ಧ್ಯೇಯವಾಗಿದೆ, ಇದರ ಅನ್ವಯ ಇವತ್ತು ಯುವವಾಹಿನಿ ಪುತ್ತೂರು ಘಟಕದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪರೀಕ್ಷೆಗೆ ಬೇಕಾಗಿರುವ ತಯಾರಿ ಹಾಗೂ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಕಾರ್ಯಾಗಾರ ನಡೆಸುವುದರ ಮೂಲಕ ಅವರ ಜೀವನದ ಗುರಿಯನ್ನು ಸಾಧಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸಿ ಬೇರೆ ಬೇರ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ತಂದೆ-ತಾಯಿ ಹಾಗೂ ಬದುಕನ್ನು ರೂಪಿಸುವ ಗುರುಗಳನ್ನು ಜೀವನ ಪೂರ್ತಿ ನೆನಪಿಟ್ಟುಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ದೇಶದ ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅನುಪ್ ಕುಮಾರ್ ಮಾತನಾಡಿ, ಎಸ್. ಎಸ್. ಎಲ್. ಸಿ. ಶಿಕ್ಷಣ ವಿದ್ಯಾರ್ಥಿಗಳಿಗೆ ಜೀವನದ ಪ್ರಥಮ ಮೈಲಿಗಲ್ಲು. ಜೀವನದ ಪ್ರತಿಯೊಂದು ಘಟ್ಟದಲ್ಲೂ ಎಸ್. ಎಸ್. ಎಸ್.ಎಲ್. ಸಿ. ಪರೀಕ್ಷಾ ಫಲಿತಾಂಶ ಅತೀ ಹೆಚ್ಚು ಪಾತ್ರ ವಹಿಸುತ್ತದೆ. ಹಾಗಾಗಿ ಇವತ್ತಿನ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ತಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಸಮಾಜದ ಆಸ್ತಿ. ಮಾತ್ರವಲ್ಲದೆ ದೇಶದ ಭವಿಷ್ಯ. ವಿದ್ಯಾರ್ಥಿಗಳ ಜೀವನ ಉಜ್ವಲವಾಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಜೆಸಿಐ ಅಂತರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಿಯೋನಿಲ್ಲ ವೇಗಸ್, ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಬಾಬು ಪೂಜಾರಿ, ಯುವವಾಹಿನಿ ಪುತ್ತೂರು ಘಟಕದ ಕಾರ್ಯದರ್ಶಿ ಜಯರಾಮ್ ಬಿ. ಎನ್. ಮತ್ತು ವಿದ್ಯಾನಿಧಿ ನಿರ್ದೇಶಕ ಉಮೇಶ್ ಪಾಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾದ ಉದಯ ಕೋಲಾಡಿ, ಪ್ರಭಾಕರ ಸಾಲ್ಯಾನ್, ನಿರ್ದೇಶಕರಾದ ಅಣ್ಣಿ ಪೂಜಾರಿ ಅನಂತಿಮಾರ್, ಮೋಹನ್ ಎಸ್, ಭವಿತ್, ಶಿವಪ್ರಸಾದ್, ಅದೀಕ್ಷಾ ಸಾಲ್ಯಾನ್, ಶ್ರೀವರ್ಷ, ಲಾವಣ್ಯ, ಶ್ರೇಯಾ, ಇಶ, ನಿರೀಷ್ಮಾ ಸಹಿತ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ರವರು ಮಧ್ಯಾಹ್ನ ಆಗಮಿಸಿ ಶುಭ ಹಾರೈಸಿದರು.
ಯುವವಾಹಿನಿ ಪುತ್ತೂರು ಘಟಕದ ಸದಸ್ಯೆ ಪೂರ್ಣಿಮಾ ಪ್ರಾರ್ಥಿಸಿದರು. ಕೋಶಾಧಿಕಾರಿ ಶಮಿತ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಜಯರಾಮ್ ಬಿ. ಎನ್. ವಂದಿಸಿದರು. ಅವಿನಾಶ್ ಮತ್ತು ಪ್ರಿಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.
ಗೌರವ ಸ್ಮರಣಿಕೆ: ಫಿಲೋಮಿನಾ ಪ್ರೌಢ ಶಾಲೆಯಲ್ಲಿ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಡಲು ಅವಕಾಶ ಮಾಡಿಕೊಟ್ಟ ಮುಖ್ಯೋಪಾಧ್ಯಾಯಿನಿ ಲಿಯೋನಿಲ್ಲ ವೇಗಸ್‌ರವರಿಗೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಮಟ್ಟುರವರು ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತರಬೇತುದಾರರಾಗಿದ್ದ ಜೆಸಿಐ ಅಂತರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್‌ರವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.
ಭೋಜನ ವ್ಯವಸ್ಥೆ: ಸರಕಾರದ ಕೋವಿಡ್ ನಿಯಮಾವಳಿಯಂತೆ ಕಾರ್ಯಕ್ರಮ ನಡೆಸಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಪ್ರತೀ ಶಾಲೆಯ ವಿದ್ಯಾರ್ಥಿಗಳ ಹೆಸರು ನೋಂದಾವಣೆ ಮಾಡಲಾಯಿತು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
15 ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಜೆಸಿಐ ಅಂತರಾಷ್ಟ್ರೀಯ ತರಬೇತುದಾರ ಕಾರ್ಕಳದ ರಾಜೇಂದ್ರ ಭಟ್ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡುವ ಮತ್ತು ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಾಗಾರವನ್ನು ಎರಡು ವಿಭಾಗದಲ್ಲಿ ಮಾಡಲಾಗಿತ್ತು. ಬೆಳಿಗೆ 10ರಿಂದ 12.30ರವರೆಗೆ ಒಂದು ವಿಭಾಗ ಮತ್ತು ಮಧ್ಯಾಹ್ನ 1.30ರಿಂದ 4 ಗಂಟೆಯವರೆಗೆ ಎರಡನೇ ವಿಭಾಗದವರಿಗೆ ತರಬೇತಿ ನೀಡಲಾಯಿತು.
ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆ, ಸಂತ ಫಿಲೋಮಿನಾ ಕಾಲೇಜು, ಸುಭೋಧ ಪ್ರೌಢಶಾಲೆ ಪಾಣಾಜೆ, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಸರಕಾರಿ ಪ್ರೌಢ ಶಾಲೆ ಕಬಕ, ಎಸ್.ಜಿ.ಎಂ. ಪ್ರೌಢಶಾಲೆ ಸರ್ವೆ ಭಕ್ತಕೋಡಿ, ಬೆಳಿಯೂರುಕಟ್ಟೆ ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ಕಲ್ಪಣೆ, ಸರಕಾರಿ ಪ್ರೌಢಶಾಲೆ ಶಾಂತಿನಗರ, ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ, ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢ ಶಾಲೆ ಪುತ್ತೂರು, ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇರ್ದೆ ಬೆಟ್ಟಂಪಾಡಿ ಮತ್ತು ಕುಂಬ್ರ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
[box type=”info” bg=”#” color=”#” border=”#” radius=”2″]ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ ಘೋಷಣೆ
ಕಾರ್ಯಕ್ರಮದಲ್ಲಿ ‘ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ’ ಘೋಷಣೆ ಕೂಗಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸುದ್ದಿ ಜನಾಂದೋಲನ ವೇದಿಕೆ ಮೂಲಕ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಬೆಂಬಲ ಸೂಚಿಸಿ ಘೋಷಣೆ ಕೂಗಿದರಲ್ಲದೆ ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ, ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಸುದ್ದಿ ಚಾನೆಲ್ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವವಾಹಿನಿ ಘಟಕದ ಅಧ್ಯಕ್ಷ ಅನುಪ್ ಕುಮಾರ್, ಮಾಜಿ ಅಧ್ಯಕ್ಷ ಉದಯ ಕೋಲಾಡಿ, ನಿರ್ದೇಶಕ ಅವಿನಾಶ್ ಪಾಣೆ, ಸುದ್ದಿ ಬಿಡುಗಡೆ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ಜನಾಂದೋಲನ ವೇದಿಕೆಯ ಮುಖ್ಯಸ್ಥ ಗಣೇಶ್ ಕಲ್ಲರ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದ್ದಿ ಬಳಗದ ವಸಂತ ಸಾಮೆತ್ತಡ್ಕ ಮತ್ತು ಫಾರೂಕ್ ಶೇಖ್ ಮುಕ್ವೆ ಸಹಕರಿಸಿದರು.[/box]