ಫೆ.27: ವಿವೇಕಾನಂದ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆಯಲ್ಲಿ ‘ಪ್ರತಿಭಾ ಅನ್ವೇಷಣೆ’ ಸ್ಕಾಲರ್‌ಶಿಪ್ ಪರೀಕ್ಷೆ

0

ಪುತ್ತೂರು: ನೂರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ 70ನೇ ವಿದ್ಯಾಸಂಸ್ಥೆಯಾಗಿರುವ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ 8ನೇ ತರಗತಿಯಲ್ಲಿ ಯಾವುದೇ ಶಾಲೆಯ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಅನ್ವೇಷಣೆ’ ಎನ್ನುವ ಸ್ಕಾಲರ್‌ಶಿಪ್ ಪರೀಕ್ಷೆಯನ್ನು ಫೆ.27ರಂದು ಆಯೋಜಿಸಲಾಗಿದೆ.

ಈ ಬಗ್ಗೆ ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿವೇಕಾನಂದ ಇಂಗ್ಲೀಷ್ ಮೀಡಿಯಂ (ಸಿಬಿಎಸ್‌ಇ) ಸ್ಕೂಲ್‌ನ ಸಂಚಾಲಕ ಭರತ್ ಪೈ, ಸಾಮಾಜಿಕ ಕಳಕಳಿಯ ಉದ್ದೇಶವನ್ನಿಟ್ಟುಕೊಂಡು ಶಾಲೆಯಲ್ಲಿ ಪ್ರತಿಭಾನ್ವೇಷಣೆ ಎನ್ನುವ ಸ್ಕಾಲರ್‌ಶಿಪ್ ಪರೀಕ್ಷೆಯನ್ನು ಏರ್ಪಡಿಸಿದ್ದೇವೆ. ಗ್ರಾಮ ವಿಕಾಸ ಯೋಜನೆಯಲ್ಲಿ, ಕರ್ನಾಟಕ ಬ್ಯಾಂಕ್ ಸಿಎಸ್‌ಆರ್ ನಿಧಿಯ ಸಹಯೋಗದಲ್ಲಿ ಕುರಿಯ ಗ್ರಾಮದಲ್ಲಿ ಅಜಲಾಡಿ ಕೆರೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ 9ನೇ ತರಗತಿಗೆ ಬರುವ ವಿದ್ಯಾರ್ಥಿಗಳಿಗಾಗಿ ಸ್ಕಾಲರ್‌ಶಿಪ್ ಪರೀಕ್ಷೆಯನ್ನು ಇಟ್ಟಿದ್ದೇವೆ. ವಿವೇಕಾನಂದ ಸಿಬಿಎಸ್‌ಇ ಶಾಲೆಯು ಡಿಜಿಟಲ್ ಕ್ಲಾಸ್‌ರೂಮ್, ಸುಸಜ್ಜಿತ ಗಣಿತ, ವಿಜ್ಞಾನ ಪ್ರಯೋಗಾಲಯಗಳು, 3ಡಿ ವಿಜ್ಞಾನ ಮಾದರಿ ಹೊಂದಿರುವ ಸೈನ್ಸ್ ಪಾರ್ಕ್, ಆಂಫಿಥಿಯೇಟರ್ ಇತ್ಯಾದಿಗಳನ್ನು ಹೊಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಈ ವ್ಯವಸ್ಥೆಗಳನ್ನು ತಲುಪಿಸಬೇಕೆನ್ನುವ ಉದ್ದೇಶದಲ್ಲಿ ಸ್ಕಾಲರ್‌ಶಿಪ್ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಟಾಪ್ 2 ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ 100 ಶೇ. ಸ್ಕಾಲರ್‌ಶಿಪ್ ನೀಡಲಿದ್ದೇವೆ. ಎಲ್ಲಾ ವಿದ್ಯಾರ್ಥಿಗಳೂ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ವಿವೇಕಾನಂದ ಇಂಗ್ಲೀಷ್ ಮೀಡಿಯಂ (ಸಿಬಿಎಸ್‌ಇ) ಸ್ಕೂಲ್‌ನ ಪ್ರಾಂಶುಪಾಲೆ ಸಿಂಧೂ ವಿ.ಜಿ. ಮಾತನಾಡಿ, ಫೆ.27ರಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ನೆಹರೂನಗರದಲ್ಲಿರುವ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಪರೀಕ್ಷೆ ನಡೆಯಲಿದೆ. ಎಂಸಿಕ್ಯೂ ಮಾದರಿಯಲ್ಲಿ ಒಂದೇ ಪೇಪರ್‌ನಲ್ಲಿ ಪರೀಕ್ಷೆ ನಡೆಯಲಿದೆ. 8ನೇ ತರಗತಿಯ ಗಣಿತ, ವಿಜ್ಞಾನ, ಇಂಗ್ಲೀಷ್, ಸಾಮಾನ್ಯ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯವನ್ನು ಒಳಗೊಂಡ 90 ಪ್ರಶ್ನೆಗಳು ಇರಲಿವೆ ಎಂದು ಮಾಹಿತಿ ನೀಡಿದರು.

ವಿವೇಕಾನಂದ ಇಂಗ್ಲೀಷ್ ಮೀಡಿಯಂ (ಸಿಬಿಎಸ್‌ಇ) ಸ್ಕೂಲ್‌ನ ಅಧ್ಯಕ್ಷೆ ವಸಂತಿ ಕೆದಿಲ ಮಾತನಾಡಿ, ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ನಮ್ಮ ಸಿಬಿಎಸ್‌ಇ ಶಾಲೆಗೆ ಬರಬೇಕೆಂದಿರುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಅಂತಹ ಮಕ್ಕಳಿಗೂ ಒಂದು ಅವಕಾಶ ನೀಡಬೇಕೆನ್ನುವ ಉದ್ದೇಶದಿಂದ ಈ ಸ್ಪರ್ಧಾತ್ಮಕ ಪರೀಕ್ಷೆ ಮಾಡುತ್ತಿದ್ದೇವೆ. ಯಾವುದೇ ಸರ್ಕಾರಿ, ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದ್ದು, ಪರೀಕ್ಷೆ ಬರೆಯಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿಜ್ಞಾನ ಶಿಕ್ಷಕಿ ಸಹನಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here