“ಗೌರಿ ಹೊಳೆಯ ತಟದಲ್ಲಿ, ದ್ವಾಪರ ಯುಗದಲ್ಲಿ ಪಾಂಡವರು ಪ್ರತಿಷ್ಠಾಪಿಸಿದ ಶಿವಲಿಂಗ”

0

  • ನೂಜಿಬಾಳ್ತಿಲ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ-ಭರದ ಸಿದ್ದತೆ

ಕಡಬ: ಗೌರಿ ಹೊಳೆಯ ತಟದಲ್ಲಿರುವ, ಹಿಂದೆ ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ನಿತ್ಯ ಪೂಜೆಗಾಗಿ ಪ್ರಕೃತಿಯಲ್ಲಿನ ಐದು ಶಿಲೆಗಳನ್ನು ಶಿವಲಿಂಗವಾಗಿ ಪ್ರತಿಷ್ಠಾಪಿಸಿ, ಪೂಜಿಸಿರುವ ಐತಿಹಾಸಿಕ ಹಿನ್ನಲೆ ಇರುವ ಪುಣ್ಯ ಕ್ಷೇತ್ರ, ಪ್ರಕೃತಿ ಸೌಂದರ್‍ಯದ ನಡುವೆ ಕಂಗೋಳಿಸುವ ನೂಜಿಬಾಳ್ತಿಲ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.೯ರಿಂದ ಫೆ.14ರವರೆಗೆ ನಡೆಯಲಿದೆ. ಈಗಾಗಲೇ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ.


ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ವೈದಿಕ ತಾಂತ್ರಿಕ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 6 ದಿನಗಳ ಕಾಲ ನಡೆಯಲಿದೆ.

ಕೊರೋನಾ ನಿಯಮಗಳ ಹಿನ್ನಲೆಯಲ್ಲಿ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿ ಕಾರ್ಯಕ್ರಮಗಳು ನಡೆಯಲಿದೆ. ಫೆ.೧೪ರಂದು ಶ್ರೀ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಅದೇ ದಿನ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಸ.ಅಂಗಾರ, ಶಾಸಕರುಗಳಾದ ಹರೀಶ್ ಪೂಂಜ, ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರ ಆಶೀರ್ವಚನ ನಡೆಯಲಿದೆ. ರಾತ್ರಿ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ. ಬ್ರಹ್ಮಕಲಶೋತ್ಸವಕ್ಕೆ ವಿವಿಧ ಸಮಿತಿಗಳನ್ನು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.

ಕ್ಷೇತ್ರ ಪರಿಚಯ

ದ.ಕ ಜಿಲ್ಲೆಯ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಒಂದು ಪುಣ್ಯಕ್ಷೇತ್ರ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ ಎಂಜಿರ ಎಂಬಲ್ಲಿರುವ ೩೦೦ಮೀ. ದೂರದಲ್ಲಿರುವ ತೂಗು ಸೇತುವೆಯ ಮೂಲಕ ಹಾದು ಸರ್ವಕಾಲಿಕ ಜೀವನದಿ ಗೌರಿ ಹೊಳೆಯ ದಂಡೆಯಲ್ಲಿ ನೆಲೆಸಿರುವ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವರುಗಳ ಪರಮಪಾವನ ಪುಣ್ಯಕ್ಷೇತ್ರವಿದು.

ಈ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಧ್ಯಭಾಗದಲ್ಲಿ ಕಂಗೊಳಿಸುವ ಈ ಕ್ಷೇತ್ರಕ್ಕೆ ಪೌರಾಣಿಕ ಹಿನ್ನಲೆ ಕೂಡಾ ಇದೆ. ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದು ನಿತ್ಯ ಪೂಜಾ ವಿಧಿವಿಧಾನಗಳನ್ನು ಪೂರೈಸಲು ಪ್ರಕೃತಿಯಲ್ಲಿ ಸಿಕ್ಕ ಐದು ಶಿಲೆಗಳನ್ನು ನದಿಯಿಂದ ತಂದು ಶಿವಲಿಂಗವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು ಎಂಬ ಪ್ರತೀತಿ ಇದೆ ನಂತರದ ದಿನಗಳಲ್ಲಿ ಜೈನ ರಾಜರುಗಳು ಆಡಳಿತಾವಧಿಯಲ್ಲಿ ಶಿವದೇವಾಲಯವನ್ನಾಗಿ ಮಾಡಿ ಈ ಪ್ರದೇಶದ ಭಕ್ತಾದಿಗಳಿಗೆ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದರು ಎಂಬ ಪ್ರತೀತಿ ಇದೆ

.
ಈ ಪುಣ್ಯ ಕ್ಷೇತ್ರದ ಸಮೀಪ ಶಿವನ ಶಿರದಿಂದ ಹರಿದ ಗಂಗೆಯಂತೆ ಪಾವನವಾದ ಗುಂಡ್ಯ ನದಿಯು ಹರಿಯುತ್ತಿದ್ದು ಇಲ್ಲಿ ಸ್ನಾನ ಮಾಡಿ ಅಂತಃಕರಣ ಶುದ್ಧಿಯಿಂದ ಪ್ರಾರ್ಥಿಸಿಕೊಂಡರೆ ದೇಹ ಸಂಬಂಧಿ ಖಾಯಿಲೆಗಳು, ಸಂತಾನಪ್ರಾಪ್ತಿ, ಲಗ್ನಕಾರ್ಯ ಇನ್ನಿತರ ಇಷ್ಟಾರ್ಥ ಸಿದ್ಧಿಗಳು ನೆರವೇರುತ್ತವೆ ಎಂದು ದೈವಜ್ಞರ ಪ್ರಶ್ನೆಮುಖೇನ ತಿಳಿದು ಬಂದಿರುತ್ತದೆ. ಅಲ್ಲದೆ ಈ ಕ್ಷೇತ್ರದಲ್ಲಿ ಶಾಸ್ತಾವು, ದುರ್ಗೆ, ನಾಗಬ್ರಹ್ಮ ದೇವರು ಅಲ್ಲದೆ ರಕ್ತೇಶ್ವರಿ, ಮಹಿಷಂತ್ತಾಯ, ಶಿರಾಡಿ, ಬಚ್ಚನಾಯಕ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ಗುಳಿಗ, ಮಲೆ ದೈವಗಳ ಸಾನಿಧ್ಯವಿರುತ್ತದೆ.

ಶ್ರೀ ಕ್ಷೇತ್ರದ ಸ್ಥಳ ಸಾನಿಧ್ಯದ ಬಗ್ಗೆ ದೈವಜ್ಞರಾದ ಶಿಶಿಲ ಸೀತಾರಾಮ ಕೆದಿಲಾಯರು ಹಾಗೂ ಅವರ ನಂತರ ಸುಬ್ರಹ್ಮಣ್ಯ ಭಟ್ ಕೂಟೂರು ಇವರುಗಳ ಮಾರ್ಗದರ್ಶನ ಹಾಗೂ ವಾಸ್ತುಶಿಲ್ಪಿ ಬೆದ್ರಡ್ಕ ಕಾಸರಗೊಡು ಶ್ರೀಧರ ಕಾರಂತರು ಹಾಗೂ ಅವರ ನಂತರ ರಮೇಶ್ ಕಾರಂತರು ಸಲಹೆಗಳನ್ನು ನೀಡಿರುತ್ತಾರೆ. ಶ್ರೀ ಕ್ಷೇತ್ರವು ಈ ಹಿಂದೆ ೧೯೬೭ನೇ ಇಸವಿಯಲ್ಲಿ ಜನರ ಕಷ್ಟ ಕಾಲದಲ್ಲಿ ಆಗಿನ ಅನುವಂಶಿಕ ಮೊಕ್ತೇಸರರಾದ ಸಾಂತ್ಯಡ್ಕ ಅಡೆಂಜ ರಾಮಣ್ಣ ಗೌಡರ ಮುಂದಾಳತ್ವ, ಕೈಕುರೆ ರಾಮಣ್ಣ ಗೌಡರ ಮಾರ್ಗದರ್ಶನ ಹಾಗೂ ಕೆಮ್ಮಿಂಜೆ ಕೇಶವ ತಂತ್ರಿಗಳ ವೈದಿಕ ಮುಂದಾಳತ್ವದಲ್ಲಿ ಹಾಗೂ ಊರವರ ಸಹಕಾರದೊಂದಿಗೆ ಪ್ರತಿಷ್ಠಾಬ್ರಹ್ಮಕಲಶವು ನಡೆದಿರುತ್ತದೆ. ಕಳೆದ ೯-೩-೨೦೦೯ ರಿಂದ ೧೩-೦೩-೨೦೦೯ರ ವರೆಗೆ ನಡೆದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾದ ಪರಮಪೂಜ್ಯ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಇವರ ಪೂರ್ಣಾನುಗ್ರಹದೊದಿಗೆ, ಅನುವಂಶಿಕ ಮೊಕ್ತೇಸರರಾದ ಸಾಂತ್ಯಡ್ಕ ಅಡೆಂಜ ರಾಮಣ್ಣ ಗೌಡ, ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಕೈಕುರೆ ವೆಂಕಟ್ರಮಣ ಗೌಡ ಹಾಗೂ ಊರ-ಪರವೂರ ಭಕ್ತರ ಸಹಕಾರ, ದಾನಿಗಳ ನೆರವಿನಿಂದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೈಭವದಿಂದ ನಡೆದಿದೆ. ನಂತರ ಶ್ರೀ ದೇವರಿಗೆ ಹಾಗೂ ಕ್ಷೇತ್ರದ ಎಲ್ಲಾ ದೈವಗಳಿಗೆ ಆಯಾಯ ಕಾಲಕ್ಕೆ ಸರಿಯಾಗಿ ನಿತ್ಯ ಪೂಜೆ ,ವಾರ್ಷಿಕ ಜಾತ್ರೆ ಮತ್ತು ಇನ್ನಿತರ ಎಲ್ಲಾ ವಿಧಿವಿಧಾನಗಳ ಪ್ರಕಾರ ಕಾರ್ಯಕ್ರಮಗಳೂ ಎಲ್ಲಾ ಭಕ್ತರ ಸಹಭಾಗಿತ್ವದಲ್ಲಿ ನಡೆದು ಇದೀಗ ೧೨ನೇಯ ವರ್ಷದ ಬಳಿಕ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.

LEAVE A REPLY

Please enter your comment!
Please enter your name here