ಕಲಿಕೆಗೆ ಆಸಕ್ತಿ, ಪೂರಕ ವಾತಾವರಣ ಅಗತ್ಯ; ಗಂಗಮ್ಮ ಕಲ್ಲುಗುಡ್ಡೆ
ನೂಜಿಬಾಳ್ತಿಲ: ಕಲಿಕೆ ಎಂಬುದು ನಿರಂತರವಾಗಿದ್ದು, ಪಠ್ಯದ ವಿಚಾರ ಮಾತ್ರವಲ್ಲದೇ, ಪಠ್ಯೇತರ ವಿಚಾರದಲ್ಲೂ ಕಲಿಯಬೇಕಿದೆ. ಆದ್ದರಿಂದ ನಾವು ಕಲಿಯುವುದಕ್ಕೆ ಆಸಕ್ತಿ ಹಾಗೂ ಕಲಿಕೆಗೆ ಪೂರಕ ವಾತಾವರಣ ಅಗತ್ಯ ಎಂದು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ನೂಜಿಬಾಳ್ತಿಲ ಹಾಗೂ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೂಜಿಬಾಳ್ತಿಲ ಜಂಟಿ ಆಶ್ರಯದಲ್ಲಿ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರು ಕಲಿಕಾ ಹಬ್ಬವನ್ನು ಜ.31 ಉದ್ಘಾಟಿಸಿದರು.
ಒತ್ತಡದ ಶಿಕ್ಷಣ ಪಡೆಯುವ ಬದಲು ಇಷ್ಟಪಟ್ಟು, ಸಂಭ್ರಮದಿಂದ ಪಡೆಯುವ ಶಿಕ್ಷಣ ಮನಮುಟ್ಟುತ್ತದೆ. ನಮ್ಮಲ್ಲಿರುವ ಪ್ರತಿಭೆಯನ್ನು ನಮಗೆ ಸಿಕ್ಕ ಅವಕಾಶದಲ್ಲಿ ಪ್ರದರ್ಶಿಸುವ ಮೂಲಕ ಅವಕಾಶ ಸದುಪಯೋಗ ಮಾಡಿಕೊಂಡಲ್ಲಿ ಯಶಸ್ಸು ಸಾಧ್ಯ ಎಂದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಲಕೃಷ್ಣ ಗೌಡ ಉಳಿಪ್ಪು ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಗೌಡ ಹಳೆನೂಜಿ, ವಿನಯಕುಮಾರಿ ಬಳಕ್ಕ, ಗ್ರಾಮ ಪಂಚಾಯತ್ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುವ ಎಸ್., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂಜಿಬಾಳ್ತಿಲ ಒಕ್ಕೂಟ ಅಧ್ಯಕ್ಷ ಸುಧೀಶ್, ಕಲಿಕಾ ಹಬ್ಬದ ನೋಡೆಲ್ ಅಧಿಕಾರಿ, ಪಡುಬೆಟ್ಟು ಶಾಲಾ ಶಿಕ್ಷಕಿ ಕಮಲಾ, ಕಡಬ ಕ್ಲಸ್ಟರ್ ಸಿ.ಆರ್ಪಿ. ಹಮೀದ್, ನೂಜಿಬಾಳ್ತಿಲ ಸಿ.ಆರ್.ಪಿ. ಗೋವಿಂದ ನಾಯಕ್, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕರಾದ ಗಿರೀಶ್, ಸುವರ್ಣಲತಾ, ಸುಜಾತ, ಗೀತಾ, ಗಣೇಶ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುಂದರಿ ಸ್ವಾಗತಿಸಿದರು. ಸಿ.ಆರ್.ಪಿ.ಗೋವಿಂದ ನಾಯಕಗ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲು ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:
ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಇಚ್ಲಂಪಾಡಿ ನೇರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಗಿರೀಶ್ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು.
ಮೆರವಣಿಗೆಯಲ್ಲಿ ಸಂಭ್ರಮಿಸಿದ ಮಕ್ಕಳು
ಕಾರ್ಯಕ್ರಮದ ಆರಂಭದಲ್ಲಿ ಕಲಿಕಾ ಹಬ್ಬದ ಮೆರವಣಿಗೆ ಜಾಥವನ್ನು ಗ್ರಾ.ಪಂ. ಸದಸ್ಯೆ ವಿನಯಕುಮಾರಿ ಬಳಕ್ಕ ಚಾಲನೆ ನೀಡಿದರು. ಕಲ್ಲುಗುಡ್ಡೆ ಪೇಟೆಯಲ್ಲಿ ಕಲಿಕಾ ಹಬ್ಬದ ಮೆರವಣಿಗೆ ಜಾಥ ಸಾಗಿತು. ಮೆರವಣಿಗೆಯಲ್ಲಿ ಕಲಿಕಾ ಹಬ್ಬದ ಘೋಷಣೆಗಳನ್ನು ಕೂಗಲಾಯಿತು. ಬ್ಯಾಂಡ್ ವಾದನದ ಸದ್ದಿಗೆ ಮಕ್ಕಳು ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು.