ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಸರಕಾರಿ ಪ್ರೌಢಶಾಲೆಯ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ 16 ಹಳೆಯ ಬ್ಯಾಟರಿಗಳನ್ನು ಕಳವುಗೈದಿರುವ ಘಟನೆ ವರದಿಯಾಗಿದೆ.
ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಒದಗಿಸಲಾದ ಕಂಪ್ಯೂಟರ್ಗೆ ಸಂಬಂಧಿತ 16 ಹಳೆಯ ಬ್ಯಾಟರಿಗಳನ್ನು ಕಳಚಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ಬಾಗಿಲು ಮುಚ್ಚಿ ಬೀಗ ಹಾಕಿ ಭದ್ರಪಡಿಸಲಾಗಿತ್ತು. ಜ.27ರಂದು ಸಂಜೆ 4.20ರ ವೇಳೆಗೆ ಸದ್ರಿ ಬ್ಯಾಟರಿಗಳನ್ನು ಇರಿಸಿದ ಕೊಠಡಿ ಹಾಗೂ ಶಾಲಾ ಕೊಠಡಿಗಳಿಗೆ ಬಾಗಿಲು ಮುಚ್ಚಿ ಬೀಗ ಹಾಕಿ ಭದ್ರಪಡಿಸಿ ಹೋಗಲಾಗಿದ್ದು ಜ.30ರಂದು ಬೆಳಿಗ್ಗೆ 10.30ಕ್ಕೆ ಬ್ಯಾಟರಿಗಳನ್ನು ಇರಿಸಿದ ಕೊಠಡಿಗೆ ಅಗತ್ಯ ಕೆಲಸ ನಿಮಿತ್ತ ಬಾಗಿಲು ತೆರೆಯಲೆಂದು ಹೋದಾಗ ಬಾಗಿಲಿಗೆ ಹಾಕಿದ್ದ ಬೀಗ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಬಾಗಿಲು ತೆರೆದು ಒಳ ಹೋಗಿ ನೋಡಲಾಗಿ ಒಳಗೆ ಇರಿಸಿದ್ದ 16 ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಬ್ಯಾಟರಿಗಳ ಮೌಲ್ಯ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಲಾ ಪ್ರಭಾರ ಮುಖ್ಯಶಿಕ್ಷಕ ಚಕ್ರಪಾಣಿ ಎ.ವಿ. ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಪದ್ಮುಂಜ ಹಾಗೂ ಕರಾಯ ಸರಕಾರಿ ಪ್ರೌಢಶಾಲೆಯಲ್ಲೂ ಬ್ಯಾಟರಿಗಳು ಕಳ್ಳತನಗೊಂಡಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು.