ಪುತ್ತೂರು: ಮರೀಲ್ ದ್ವಿಪಥ ರಸ್ತೆಯಲ್ಲಿ ಯು ಟರ್ನ್ ಮಾಡಿದ ಆಟೋ ರಿಕ್ಷಾ ಮತ್ತು ಪುತ್ತೂರು ಕಡೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.30ರಂದು ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರ ಮತ್ತು ಆಟೋ ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಬಾಳೆಂಬಿ ಚೆಳ್ಳಂಗಾಯ ನಿವಾಸಿ ಅಜಿತ್ ಕುಮಾರ್ ಕೆ.ಆರ್ ಎಂಬವರು ಪುತ್ತೂರು ಕಡೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪುತ್ತೂರಿನಿಂದ ಮರೀಲ್ ಕಡೆ ಹೋಗಿ ಮರೀಲ್‌ನ ದ್ವಿಪಥ ರಸ್ತೆಯಲ್ಲಿ ಯು ಟರ್ನ್ ಮಾಡಿದ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಅಜಿತ್ ಕುಮಾರ್ ಮತ್ತು ಆಟೋ ರಿಕ್ಷಾ ಚಾಲಕ ಖಾಸೀಂ ಅವರು ಗಾಯಗೊಂಡಿದ್ದಾರೆ. ಅಜಿತ್ ಕುಮಾರ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ರಿಕ್ಷಾ ಚಾಲಕ ಖಾಸೀಂ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.