ಕಡಬ: ಮದುವೆಯಾಗಲು ಹುಡುಗಿ ನೋಡುವ ನೆಪದಲ್ಲಿ ಬಂದು ಹೋದ ಯುವಕನೋರ್ವ ಸುಳ್ಳು ಹೇಳಿ ಯುವತಿಯ ಮನೆಯಿಂದ ಹಣ ಪಡೆದು ವಂಚಿಸಿದ್ದು ಯುವತಿ ಸಂಬಂಧಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಜ.31 ರಂದು ಆಲಂಕಾರಿನಲ್ಲಿ ನಡೆದಿದೆ.
ಮೂಡಬಿದಿರೆ ಮೂಲದ ಯುವಕ ತನ್ನ ಪರಿಚಯಸ್ಥರ ಮೂಲಕ ಆಲಂಕಾರು ಕುಂಡಾಜೆಯ ಮನೆಯೊಂದಕ್ಕೆ ಹುಡುಗಿ ನೋಡುವ ನೆಪದಲ್ಲಿ ಬಂದಿದ್ದ ಎನ್ನಲಾಗಿದೆ. ಯುವತಿ ಹುಡುಗನನ್ನು ಮದುವೆಯಾಗಲು ನಿರಾಕರಿಸಿದರೂ ಕೆಲ ದಿನಗಳ ನಂತರ ಮತ್ತೆ ಮನೆಗೆ ಬಂದು ಮೆಡಿಸಿನ್ ಮಾಡುವ ಸ್ವ ಉದ್ಯೋಗವಿದ್ದು ರೂ.35 ಸಾವಿರ ಆದಾಯ ಬರಲಿದೆ ಎಂದು ನಂಬಿಸಿ ಯುವತಿಯ ನಂಬರ್ ಪಡೆದಿದ್ದ.ಕೆಲ ದಿನಗಳ ನಂತರ ಸರ್ಕಾರದ ಯೋಜನೆಯಿಂದ ಹಣ ಬಂದಿರುವುದಾಗಿ ನಂಬಿಸಿ ಅದನ್ನು ಪಡೆಯಲು 5 ಸಾವಿರ ರೂ. ನೀಡುವಂತೆ ಯುವತಿಯ ಮನೆಯವರಿಗೆ ತಿಳಿಸಿದ್ದ ಎನ್ನಲಾಗಿದೆ. ಹೀಗೆ ಯುವತಿ ಮನೆಯವರಿಂದ ಒಟ್ಟು 11 ಸಾವಿರ ರೂ ಪಡೆದಿರುವುದಾಗಿ ತಿಳಿದು ಬಂದಿದೆ. ಮಂಗಳವಾರದಂದು ಚೆಕ್ ಪಡೆಯಲು ರೂ.3 ಸಾವಿರದೊಂದಿಗೆ ಉಪ್ಪಿನಂಗಡಿಗೆ ಬರುವಂತೆ ಯುವಕ ಪೋನ್ ಮೂಲಕ ಯುವತಿಗೆ ತಿಳಿಸಿದ್ದು ಸಂಶಯಗೊಂಡ ಯುವತಿಯು ಆಲಂಕಾರಿಗೆ ಬರಲು ತಿಳಿಸಿದ್ದಳು. ಈ ನಡುವೆ ಯುವತಿಯು ತಮ್ಮ ಮನೆಮಂದಿ ಸಹಿತ ಸಂಬಂಧಿಕರಿಗೆ ಮಾಹಿತಿ ನೀಡಿ ಆಲಂಕಾರಿನಲ್ಲಿ ಸೇರುವಂತೆ ತಿಳಿಸಿದ್ದಳು. ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಬಂದ ವೇಳೆ ಆತನನ್ನು ತರಾಟೆಗೆ ತೆಗೆದುಕೊಂಡು ಬಳಿಕ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ಸಹಿತ ಆತನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಈತ ಕೊಲೆ ಪ್ರಕರಣವೊಂದರಲ್ಲಿ ಹಲವು ವರ್ಷ ಜೈಲು ಸೇರಿ ಬಿಡುಗಡೆಗೊಂಡಿದ್ದ. ಅಲ್ಲದೆ ಇತ್ತೀಚೆಗೆ ಜುಗಾರಿ ಅಡ್ಡೆ ದಾಳಿಯ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಎಂಬ ಅಂಶ ತಿಳಿದು ಬಂದಿದೆ. ಪ್ರಕರಣ ದಾಖಲಾಗಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಬಂದಿಲ್ಲ.