ಪುತ್ತೂರು: ರಾಜ್ಯ ಬಜೆಟ್‌ನಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅನುದಾನ ಘೋಷಿಸಬೇಕೆಂಬ ಅಪೇಕ್ಷೆ ಕ್ಯಾಂಪ್ಕೊ ಹೊಂದಿತ್ತು.ತೀರ್ಥಹಳ್ಳಿಯ ತೋಟಗಾರಿಕಾ ಇಲಾಖೆಗೆ, ಹಳದಿ ಎಲೆ ಮತ್ತು ಎಲೆಚುಕ್ಕಿ ರೋಗದ ಬಗ್ಗೆ ಸಂಶೋಧನೆ ನಡೆಸಲು ಬಜೆಟ್ ನಲ್ಲಿ 10 ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಲಾಗಿದೆ. ಇದನ್ನು ಕ್ಯಾಂಪ್ಕೊ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಈ ಘೋಷಣೆಯಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ರೈತರ ಹಿತರಕ್ಷಣೆಗೆ ಸರಕಾರಕ್ಕೆ ಇರುವ ಬದ್ಧತೆಯನ್ನು ತೋರಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತಿಗೆ ಒತ್ತು ನೀಡುವ ಮೂಲಕ ಸಮಗ್ರ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಜೆಟ್ ನಲ್ಲಿ ಪ್ರೋತ್ಸಾಹ ನೀಡಲಾಗಿದೆ.3ಲಕ್ಷದಿಂದ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ,ಉತ್ತರ ಕರ್ನಾಟಕದ ರೈತರಿಗೆ ಸಹಾಯ ಧನ,ನೀರಾವರಿಗೆ ಅತೀ ಹೆಚ್ಚಿನ ಹಣ ಮಂಜೂರು,ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ.ಮುಂತಾದ ಯೋಜನೆಗಳ ಮೂಲಕ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.ಪಶುಸಂಗೋಪನೆಗೆ ಅನುದಾನದಲ್ಲಿ ಹೆಚ್ಚಳ,ಶಿಕ್ಷಣ,ವೈದ್ಯಕೀಯ ಮತ್ತು ಆಡಳಿತ ಸುಧಾರಣೆಗೆ ಒತ್ತು ನೀಡಿ ಸಾಮಾನ್ಯ ಜನರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗಿದೆ.ಒಟ್ಟಾರೆ ನೇಗಿಲ ಯೋಗಿಯ ನೆರವಿಗೆ ಒತ್ತು ನೀಡಿಲಾಗಿದೆ.
ಕೃಷಿ ಮತ್ತು ಉಳಿದ ಎಲ್ಲಾ ರಂಗಗಳಿಗೂ ಅನುದಾನ ನೀಡುವುದರ ಮೂಲಕ ಸಮತೋಲನ ಹೊಂದಿರುವ ಅತ್ಯುತ್ತಮ ಬಜೆಟ್ ಎಂಬುದು ನನ್ನ ಭಾವನೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.