ಪುತ್ತೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಫೆ.17ರಂದು ಸದನದಲ್ಲಿ ಮಂಡಿಸಿರುವ 2023-24ನೇ ಸಾಲಿನ ರಾಜ್ಯ ಬಜೆಟ್ ರಾಜ್ಯದ ಭವಿಷ್ಯದ ಸರ್ವತೋಮುಖ ಅಭಿವದ್ಧಿಗೆ ಹೊಸ ಭಾಷ್ಯ ಬರೆದ ಬಜೆಟ್ ಆಗಿದೆ. ಇದೊಂದು ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಹಿತಕಾಯುವ ಅತ್ತ್ಯುತ್ತಮ ಬಜೆಟ್ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ. ಎಸ್.ಅಂಗಾರ ಹರ್ಷ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆಗೆ ಪ್ರಥಮ ಬಾರಿಗೆ ದೊಡ್ಡ ಪ್ರಮಾಣ ಅನುದಾನ ಘೋಷಿಸಲಾಗಿದೆ. ಮೀನುಗಾರಿಕೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ, ಕರಾವಳಿಯ ವಿವಿಧ ಸ್ಥಳಗಳಲ್ಲಿ ಕೃತಕ ಬಂಡೆ ಸಾಲುಗಳ ನಿರ್ಮಾಣಕ್ಕೆ ಕ್ರಮ, ಉತ್ತಮ ತಳಿಯ ಮೀನು ಮರಿಗಳ ದಾಸ್ತಾನು ಪ್ರೋತ್ಸಾಹಿಸಲು 20 ಕೋಟಿ ಅನುದಾನ ಮೀಸಲು, ಉತ್ತರ ಕನ್ನಡದಲ್ಲಿ ಮೀನು ಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ, ಮೀನುಗಾರರಿಗೆ ವಸತಿ ಸೌಕರ್ಯ ನೀಡಲು ಕ್ರಮ ಸೇರಿದಂತೆ ಮೀನುಗಾರಿಕಾ ವಲಯಕ್ಕೆ ಹತ್ತು ಹಲವು ಯೋಜನೆಗಳನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಸಂತಸ ತಂದಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲದ ಮೊತ್ತವನ್ನು ರೂ.3 ಲಕ್ಷದಿಂದ ರೂ.5 ಲಕ್ಷಕ್ಕೆ ಏರಿಕೆ. ಕಾರ್ಮಿಕರು, ಅವಿದ್ಯಾವಂತರಿಗೆ, ವಿದ್ಯಾವಂತರಿಗೆ, ಮಹಿಳೆಯರಿಗೆ ಬಜೆಟ್‌ನಲ್ಲಿ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ಮಠ, ಮಂದಿರ ಹಾಗೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ರೂ.1 ಸಾವಿರ ಕೋಟಿ, ಗೋಹತ್ಯೆ ನಿಷೇಧ ಕಾನೂನು ಜಾರಿಯಂತಹ ಉತ್ತಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರಾವಳಿ ನಿಯಂತ್ರಣ ವಲಯ ನಿರ್ಬಂಧಗಳನ್ನು ಸಡಿಲಿಸಿ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ, ರಾಷ್ಟ್ರೀಯ ಹೆದ್ದಾರಿ ಬಂದರು, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.