ಕಡಬ: ಸೋಮವಾರ ಬೆಳಿಗ್ಗೆ ಕಡಬ ತಾಲೂಕಿನ ಮರ್ದಾಳ ಸಮೀಪದ ನೈಲ ಎಂಬಲ್ಲಿ ಕಾಡಾನೆಯು ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಮಂಗಳವಾರ ಬೆಳಗಿನ ಜಾವ ಕಡಬ ತಾಲೂಕಿನ ಕೊಂಬಾರು ಗ್ರಾಮದ ಪೆರುಂದೋಡಿ ಎಂಬಲ್ಲಿ ಕೃಷಿಕರೋರ್ವರನ್ನು ಕಾಡಾನೆಯೊಂದು ಬೆನ್ನಟ್ಟಿದ ಘಟನೆ ಬೆಳಕಿಗೆ ಬಂದಿದೆ.
ಕೊಂಬಾರು ಪರಿಸರದಲ್ಲಿ ಕಾಡಾನೆಯು ಕೃಷಿ ತೋಟಗಳಿಗೆ ಲಗ್ಗೆ ಇಟ್ಟಿದ್ದು, ಅಪಾರ ಕೃಷಿಯನ್ನು ಹಾನಿ ಮಾಡಿದೆ. ಪೆರುಂದೋಡಿ ನಿವಾಸಿ ಮೋಹನ್ ಎಂಬವರು ಮಂಗಳವಾರ ಬೆಳಿಗ್ಗೆ 3.30ರ ಸುಮಾರಿಗೆ ನೀರು ಹಾಯಿಸಲೆಂದು ತನ್ನ ತೋಟಕ್ಕೆ ತೆರಳಿದ್ದ ವೇಳೆ ಕಾಡಾನೆಯೊಂದು ಬೆನ್ನಟ್ಟಿದ್ದು, ಅದೃಷ್ಟವಶಾತ್ ಓಡಿ ತಪ್ಪಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದ ಮಣಿಬಾಂಡ ಕಟ್ಟೆ ನಿವಾಸಿ ದೇವರಾಜ್ ಎಂಬವರ ಕೃಷಿ ತೋಟಕ್ಕೆ ಭಾಗಶಃ ಹಾನಿಯಾಗಿದ್ದು, ಕಟ್ಟೆ, ಪೆರುಂದೋಡಿ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕೊಣಾಜೆಯಲ್ಲಿಯೂ ಕೃಷಿ ನಾಶ
ಕಡ್ಯ ಕೊಣಾಜೆಯಲ್ಲಿಯೂ ಕಾಡಾನೆಗಳು ದಾಳಿ ನಡೆಸಿ ರುವ ಬಗ್ಗೆ ವರದಿಯಾಗಿದೆ. ಮಧು ಭಟ್ ಕಡ್ಯ ಅವರ ಅಡಿಕೆ ತೋಟವನ್ನು ನಾಶಪಡಿಸಿದೆ ಎಂದು ತಿಳಿದು ಬಂದಿದೆ.