ನೆಲ್ಯಾಡಿ: ಹದಗೆಟ್ಟ ಕಿರು ಸೇತುವೆ, ಸಂಚಾರಕ್ಕೆ ಅಯೋಗ್ಯವಾದ ರಸ್ತೆ
ಮತದಾನ ಬಹಿಷ್ಕಾರಕ್ಕೆ ನಿರ್ಧಾರ; ಬ್ಯಾನರ್ ಅಳವಡಿಕೆ

0

ನೆಲ್ಯಾಡಿ: 10 ವರ್ಷದ ಹಿಂದೆ ಡಾಮರೀಕರಣಗೊಂಡ, ನೆಲ್ಯಾಡಿ ಪೇಟೆಯಿಂದ ಪಡುಬೆಟ್ಟು ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ ಹಾಗೂ ಈ ರಸ್ತೆಯಲ್ಲಿ ಬರುವ ಕಿರು ಸೇತುವೆ ಹದಗೆಟ್ಟು ಕುಸಿಯುವ ಸ್ಥಿತಿಯಲ್ಲಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪಡುಬೆಟ್ಟು ಗ್ರಾಮದ ಗ್ರಾಮಸ್ಥರು ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡು ಬ್ಯಾನರ್ ಅಳವಡಿಸಿದ್ದಾರೆ.

ನೆಲ್ಯಾಡಿ ಪೇಟೆಯಿಂದ ಕಲ್ಲಚಡವು, ಪಡುಬೆಟ್ಟು ಸಂಪರ್ಕಿಸುವ ಒಳರಸ್ತೆಯು 10 ವರ್ಷದ ಹಿಂದೆ ಡಾಮರೀಕರಣ ಆದರೂ ಈಗ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಚಲಿಸುವ ಸ್ಥಿತಿಯಲ್ಲಿಲ್ಲ. ಹಾಗೆಯೇ ಈ ರಸ್ತೆಯಲ್ಲಿ ಬರುವ ಕಿರು ಸೇತುವೆ 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ತೀರಾ ಹದಗೆಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಈ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯರಿಗೆ, ಅಧ್ಯಕ್ಷರಿಗೆ, ಅಧಿಕಾರಿಗಳಿಗೆ, ತಾಲೂಕು ಪಂಚಾಯತ್ ಸದಸ್ಯರಿಗೆ, ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮತ್ತು ಶಾಸಕರಿಗೆ ಹಲವು ಸಲ ಮನವಿ ಮಾಡಿದರೂ ಯಾರು ಸ್ಪಂದಿಸದೇ ಇರುವುದರಿಂದ ಈ ಭಾಗದ ಸುಮಾರು 150 ಮನೆಯ ಮತದಾರರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಕಿರು ಸೇತುವೆ ಸಮೀಪ ಗ್ರಾಮಸ್ಥರು ಬ್ಯಾನರ್ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here