ಪುತ್ತೂರು: ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರನೇ ಆರೋಪಿಯಾಗಿ ಬಂಧಿತನಾಗಿರುವ ಕಡಬದ ದಯಾನಂದ ಎಂಬಾತನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕಡಬ ತಾಲೂಕಿನ ರಮೇಶ್ ಎಂಬಾತ ಅಪ್ರಾಪ್ತ ಕನ್ಯೆಯೋರ್ವಳನ್ನು ಆಕೆ ೫ನೇ ತರಗತಿ ಓದುತ್ತಿದ್ದ ಸಮಯದಲ್ಲಿ ಅತ್ಯಾಚಾರ ಎಸಗಿದ್ದ. ಅಪ್ರಾಪ್ತೆಯ ಅತ್ತಿಗೆ ಅಲಂಗಾರು ನಿವಾಸಿ ವೇದಾವತಿ ಎಂಬಾಕೆ ಅಪ್ರಾಪ್ತೆಯನ್ನು ಸಲಿಂಗ ಕಾಮಕ್ಕೆ ಒಳಪಡಿಸಿದ್ದಳು. ನಂತರ ಇತರ ೧೩ ಜನರು ದಿನಾಂಕ ೦೧/೦೧/೨೦೧೫ ರಿಂದ ೩೦/೦೫/೨೦೨೨ರ ನಡುವೆ ವಿವಿಧ ಕಡೆಗಳಲ್ಲಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದು ಈ ವಿಚಾರವನ್ನು ಯಾರೊಂದಿಗೂ ಹೇಳಬಾರದಾಗಿ ನನಗೆ ಬೆದರಿಕೆ ಒಡ್ಡಲಾಗಿದೆ ಎಂದು ಕಳೆದ ಒಂದು ತಿಂಗಳಿನಿಂದ ಮೂಡಬಿದಿರೆಯ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಪಡೆಯುತ್ತಿದ್ದ ನೊಂದ ಬಾಲಕಿ ಅಲ್ಲಿಯ ಅಧೀಕ್ಷಕರಿಗೆ ತಿಳಿಸಿದ್ದಳು. ಬಳಿಕ ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ನಂತರ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿ ಪೊಕ್ಸೋ ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದರು. ಬಳಿಕ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ಇದೀಗ ಬಂಧಿತ ಆರನೇ ಆರೋಪಿ ದಯಾನಂದ ತನ್ನ ಪರ ವಕೀಲರಾದ ಮಹೇಶ್ ಕಜೆಯವರ ಮುಖಾಂತರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ. ಈ ಮೇಲೆ ತಿಳಿಸಿದ ಆರೋಪಿಯು ಆಕೆಯನ್ನು ಅತ್ಯಾಚಾರವೆಸಗಿರುತ್ತಾರೆ. ಎಂಬುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕವಾದ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ ಎಂಬಿತ್ಯಾದಿ ಅಂಶಗಳ ಮೇಲೆ ಮಹೇಶ್ ಕಜೆ ವಾದ ಮಂಡಿಸಿದ್ದರು. ಸರಕಾರಿ ಅಭಿಯೋಜಕರು ಮತ್ತು ಬಾಲಕಿ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ.ರವರು ಆರೋಪಿ ದಯಾನಂದರಿಗೆ ಜಾಮೀನು ಮಂಜೂರು ಮಾಡಿದ್ದಾರೆ.