ಬೆಂಗಳೂರು:ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ ) ಕಾಯ್ದೆ-೨೦೧೨ರಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ನೀಡುವ ಮೊದಲು ಸಂತ್ರಸ್ತರಿಗೆ ಮಾಹಿತಿ ಕೊಡುವುದು ಕಡ್ಡಾಯ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಪೊಕ್ಸೋ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ಮೊದಲು ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.ಈ ಕುರಿತಂತೆ ಬೆಂಗಳೂರುನ ಮೂವರು ಸಂತ್ರಸ್ತ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸಂತ್ರಸ್ತ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಹಲವು ನಿರ್ದೇಶನಗಳನ್ನು ನೀಡಿದೆ. ಪೀಠ ತನ್ನ ಆದೇಶದಲ್ಲಿ, ಪೊಕ್ಸೊ ಪ್ರಕರಣಗಳಲ್ಲಿ ಆರೋಪ ಸಾಬೀತು ಮಾಡುವುದು ಸರಕಾರದ ಹೊಣೆಗಾರಿಕೆಯಾಗಿದೆ.ಹಾಗೆಯೇ, ಸಂತ್ರಸ್ತ ಮಗು ಹಾಗೂ ದೂರುದಾರರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಭಿಯೋಜಕರಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.ಆದರೆ ಅಭಿಯೋಜನಾ ವ್ಯವಸ್ಥೆ ಈಗಾಗಲೇ ಅಧಿಕ ಭಾರದಿಂದ ನಲುಗುತ್ತಿದೆ. ಪ್ರಕರಣದ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಸಂತ್ರಸ್ತರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ, ಹೀಗಾಗಿ, ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ವಿಶೇಷ ನ್ಯಾಯಾಲಯಗಳು ಸಂತ್ರಸ್ತ ಕುಟುಂಬಕ್ಕೆ, ಪೋಷಕರಿಗೆ ಅಥವಾ ಅವರ ವಕೀಲರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ನಿರ್ದೇಶಿಸಿದೆ.
ಹೈಕೋರ್ಟ್
ನಿರ್ದೇಶನಗಳೇನು?:
ಪೊಕ್ಸೊ ಪ್ರಕರಣದಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ತನಿಖಾಧಿಕಾರಿಯು ಸಂತ್ರಸ್ತರ ಪೋಷಕರು ಅಥವಾ ಪಾಲಕರು ಹಾಗೂ ಅಭಿಯೋಜಕರಿಗೆ ಮಾಹಿತಿ ನೀಡಬೇಕು, ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ತಕ್ಷಣವೇ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು.ಈ ವೇಳೆ ಅಭಿಯೋಜಕರಿಗೆ ತನಿಖಾಧಿಕಾರಿ ಹಾಗೂ ಸಂತ್ರಸ್ತರ ಕುಟುಂಬದವರು ಅಗತ್ಯ ಸಹಕಾರ ಹಾಗೂ ಮಾಹಿತಿ ನೀಡಬೇಕು.
ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ತನಿಖಾಧಿಕಾರಿಯ ಸಹಾಯ ಪಡೆಯಬೇಕು, ದೊರಕದಿದ್ದರೆ ಆ ಬಗ್ಗೆ ಸೂಕ್ತ ಲಿಖಿತ ಕಾರಣಗಳೊಂದಿಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಇಂತಹ ಪ್ರಕರಣದ ಆರೋಪಿ ಸಂತ್ರಸ್ತ ಕುಟುಂಬಕ್ಕೆ ಪರಿಚಯಸ್ಥ ಆಗಿದ್ದರೆ ಜಾಮೀನಿಗೆ ಸಲ್ಲಿಸಿರುವ ಆಕ್ಷೇಪಣೆ ದಾಖಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ)ಗಳಿಗೂ ಸಲ್ಲಿಸಬೇಕು.
ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಸಂಬಂಧಿಸಿದ ನ್ಯಾಯಾಲಯ, ಸಂತ್ರಸ್ತರ ಕುಟುಂಬಕ್ಕೆ ನೋಟಿಸ್ ಜಾರಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ಸಂತ್ರಸ್ತರ ವಾದ ಆಲಿಸಬೇಕು. ಒಂದು ವೇಳೆ ನೋಟೀಸ್ ಜಾರಿಯಾದ ನಂತರವೂ ಸಂತ್ರಸ್ತರ ಕಡೆಯಿಂದ ಯಾರೂ ಹಾಜರಾಗದಿದ್ದರೆ ವಿಶೇಷ ನ್ಯಾಯಾಲಯ ತನ್ನ ವಿಚಾರಣಾ ಪ್ರಕ್ರಿಯೆ ಮುಂದುವರಿಸಬಹುದು.ಸಂತ್ರಸ್ತರು/ದೂರುದಾರರು/ಮಾಹಿತಿದಾರರು ಸ್ವಂತ ವಕೀಲರ ಮೂಲಕ ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ವಕೀಲರಿಂದ ಪ್ರತಿನಿಧಿಸಬಹುದು.ಹೀಗೆ ನೇಮಕಗೊಂಡ ವಕೀಲರಿಗೆ ಸೇವಾ ಶುಲ್ಕ ಪಾವತಿಸಲು ಸರಕಾರ ಅಗತ್ಯ ಹಣಕಾಸು ಸೌಲಭ್ಯ ನೀಡಬೇಕು.
ಸಾಕ್ಷಿ ಸಂರಕ್ಷಣೆ ಯೋಜನೆ-೨೦೧೮ರ ಅಡಿಯಲ್ಲಿ ಲಭ್ಯವಿರುವ ರಕ್ಷಣೆ ಬಗ್ಗೆ ತಿಳಿಸಬೇಕು. ಒಂದು ವೇಳೆ ರಕ್ಷಣೆ ಅಗತ್ಯವಿದ್ದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು, ವಿಸ್ಲ್ ಬ್ಲೋವರ್ನಿಂದ ಮಾಹಿತಿ ಪಡೆದ ಸಂದರ್ಭದಲ್ಲಿ ವಿಸ್ಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್-೨೦೧೪ರ ಪ್ರಕಾರ ಅಗತ್ಯ ರಕ್ಷಣೆ ಒದಗಿಸಬೇಕು.ಹೈಕೋರ್ಟ್ ನ ಈ ಆದೇಶದ ಪ್ರತಿಯನ್ನು ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸಬೇಕು.ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.