ಕಡಬ: ವಿಶ್ರಾಂತಿಯಲ್ಲಿ ಶಿಬಿರದ ಮೂರು ಸಾಕಾನೆ-ಕಾಡಾನೆ ಪತ್ತೆ ಕಾರ್ಯ ಮುಂದುವರಿಕೆ Copy

0

ಕಡಬ: ಅಮಾಯಕರಿಬ್ಬರನ್ನು ಬಲಿ ಪಡೆದ ಒಂಟಿ ಸಲಗನ ಸೆರೆ ಹಿಡಿಯಲಾಗಿದ್ದರೂ ಇತರ ಕಾಡಾನೆಗಳ ಪತ್ತೆ ಕಾರ್ಯ ಶುಕ್ರವಾರವೂ ಮುಂದುವರಿದಿದೆ. ಆದರೆ ಸಾಕಾನೆಗಳಿಗೆ ವಿರಾಮ ನೀಡಲಾಗಿತ್ತು.

ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದ ಬಳಿಕ ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು, ಮಂಗಳವಾರ ಕಾರ್ಯಾಚರಣೆ ಆರಂಭಗೊಂಡಿದ್ದು ಮೂರನೇ ದಿನದ ಕಾರ್ಯಾಚರಣೆಯಲ್ಲಿ ಕೊಂಬಾರು ಬಳಿಯ ಮಂಡೆಕರ ಎಂಬಲ್ಲಿ ನರ ಹಂತಕ ಕಾಡಾನೆಯನ್ನು ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸೆರೆ ಹಿಡಿಯಲ್ಪಟ್ಟ ಆನೆಯನ್ನು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಯಿತು. ಇದರ ಜೊತೆ ಮುಂಜಾಗ್ರತಾ ಹಿನ್ನಲೆಯಲ್ಲಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನೂ ಕರೆದೊಯ್ಯಲಾಗಿದೆ.

ಶಿಬಿರದಲ್ಲಿದ್ದ ಕಾರ್ಯಾಚರಣೆಯ ಮೂರು ಆನೆಗಳಿಗೆ ಶುಕ್ರವಾರ ವಿರಾಮ ನೀಡಲಾಗಿತ್ತು. ಬೆಳಗ್ಗೆ ಮೂರು ಸಾಕಾನೆಗಳನ್ನು ಪೇರಡ್ಕ ಬಳಿಯ ಶಿಬಿರದಿಂದ ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣ ಘಟಕಕ್ಕೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಾರ್ಯಾಚರಣೆ ಸಿಬ್ಬಂದಿಗಳು ಇತರ ಕಾಡಾನೆಗಳ ಪತ್ತೆ ಕಾರ್ಯ ಮುಂದುವರಿಸಿದ್ದರು. ಗುರುವಾರ ರಾತ್ರಿ ಕಾಡಾನೆ ಲಗ್ಗೆ ಇಟ್ಟ ಪ್ರದೇಶದ ಮಾಹಿತಿ ಪಡೆದ, ಆ ಭಾಗದಲ್ಲಿ ಪತ್ತೆ ಕಾರ್ಯಾಚರಣೆ ತಂಡ ತನ್ನ ಕೆಲಸ ಮುಂದುವರಿಸಿ ಕಾಡಾನೆಯ ಇರುವಿಕೆ ಕಂಡುಕೊಳ್ಳುವತ್ತ ಕಾರ್ಯ ಮಾಡಿದೆ ಎಂದು ತಿಳಿದುಬಂದಿದೆ. ಗುರುವಾರ ರಾತ್ರಿ ಗುಂಡ್ಯದ ಅರಣ್ಯ ಇಲಾಖೆಯ ನರ್ಸರಿಗೆ ಲಗ್ಗೆ ಇಟ್ಟ ಕಾಡಾನೆಗಳು ಅಲ್ಲಿ ಹಾನಿಗೈದಿದೆ ಎಂದು ತಿಳಿದುಬಂದಿದೆ, ಅಲ್ಲೂ ಕಾಡಾನೆ ಪತ್ತೆ ಕಾರ್ಯ ನಡೆಸಲಾಗಿದೆ. ಆದರೆ ಕಾಡಾನೆ ಆ ಭಾಗದಿಂದ ಹೊರಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here