ಕಡಬ: ರೆಂಜಿಲಾಡಿ ಗ್ರಾಮದ ಸಾಕೋಟೆ ಜಾಲು ಪ್ರದೇಶದಲ್ಲಿ ಏಳು ಕಾಡಾನೆಗಳು ಕಂಡುಬಂದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ಸಂಜೆ ವೇಳೆ ಕಾಡಾನೆ ಹಿಂಡು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನಾಲ್ಕು ದೊಡ್ಡ ಆನೆಗಳು ಹಾಗೂ ಮೂರು ಮರಿ ಆನೆಗಳು ಹಿಂಡಿನಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಘಟನೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮುಂಜಾಗ್ರತೆ ಹಿನ್ನೆಲೆಯಲ್ಲಿ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಆನೆಗಳ ಇರುವಿಕೆ ಬಗ್ಗೆ ಮಾಹಿತಿ ನೀಡಿ, ಜನರು ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.ಇನ್ನೊಂದೆಡೆ ರೆಂಜಿಲಾಡಿ ಗ್ರಾಮದ ಖಂಡಿಗ ಎಂಬಲ್ಲಿಯೂ ಒಂಟಿ ಕಾಡಾನೆ ಇತ್ತು ಎಂದು ಮಾಹಿತಿ ಲಭ್ಯವಾಗಿದೆ.
ರೆಂಜಿಲಾಡಿ ಸಮೀಪ ಕಾಡಾನೆಯೊಂದು ದಾಳಿ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡ ಬಳಿಕ ಸಾಕಾನೆಗಳನ್ನು ಕರೆಸಿ ನರಹಂತಕ ಕಾಡಾನೆಯ ಸೆರೆ ಹಿಡಿದ ಬಳಿಕ ಇದೀಗ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಡುವೆ ಇದೀಗ ಮತ್ತೆ ಕಾಡಾನೆಗಳು ಕಾಣಿಸಿಕೊಂಡು ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.