ರಾಮಕುಂಜ: ಸರಕಾರಿ ಹಿ.ಪ್ರಾ.ಶಾಲೆ ರಾಮಕುಂಜ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಶಾಲೆಯ 4 ರಿಂದ 7ನೇ ತರಗತಿಯ ತನಕದ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿಜ್ಞಾನ ಪ್ರಯೋಗಗಳನ್ನು ಈ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಮಾಡಿದರು.
ಬಿಆರ್ಪಿ ಒಬಳೇಶ್ ಮತ್ತು ಎಸ್ಡಿಎಂಸಿ ಸದಸ್ಯ ಝಕಾರಿಯಾರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಿಆರ್ಪಿ ಒಬಳೇಶ್ರವರು ಮಕ್ಕಳಿಗೆ ನಮ್ಮ ದೇಶದ ವಿಜ್ಞಾನಗಳ ಪರಿಚಯಿಸಿ, ಸಿ.ವಿ.ರಾಮನ್ ಹಾಗೂ ಇನ್ನಿತರ ಸಾಧಕರ ಸಾಧನೆಗಳ ಬಗ್ಗೆ ವಿವರಿಸಿದರು.
ಆಲಂಕಾರು ಕ್ಲಸ್ಟರ್ ಸಿಆರ್ಪಿ ಪ್ರಕಾಶ್ ಮಾತನಾಡಿ, ಮಕ್ಕಳಲ್ಲಿ ಸಣ್ಣ ಸಣ್ಣ ಪ್ರಯೋಗಗಳು ಮುಂದೆ ಉತ್ತಮ ಸಾಧನೆಗೆ ದಾರಿದೀಪವಾಗುತ್ತದೆ ಎಂದರು. ಮುಖ್ಯಗುರು ಮಹೇಶ್ ಎಂ.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನದ ಜ್ಞಾನದಿಂದ ದೇಶದ ಪ್ರಗತಿ ಸಾಧ್ಯ, ಹಾಗಾಗಿ ಮಕ್ಕಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವಂತೆ ಹೇಳಿದರು. ವಿಜ್ಞಾನ ಶಿಕ್ಷಕ ಮಲ್ಲೇಶಯ್ಯ ನಿರೂಪಿಸಿದರು. ಶಿಕ್ಷಕ ಅರುಣ್ ಶೇಟ್ರವರು ವಂದಿಸಿದರು. ಶಾಲೆಯ ಶಿಕ್ಷಕಿಯರಾದ ಗುಲಾಬಿ ಎಸ್., ಜಾನಕಿ, ರಾಧಿಕಾ ಎಸ್., ಉಷಾ, ಝಾಹೀದ ಉಪಸ್ಥಿತರಿದ್ದರು.