ಡಾ. ದೀಪಕ್ ರೈಯವರಿಂದ ಪೊಲೀಸರಿಗೆ ದೂರು; ಕೇಸು ದಾಖಲು
ಪುತ್ತೂರು: ಚಲಿಸುತ್ತಿದ್ದ ಕಾರಿನಿಂದ ಕಸವನ್ನು ರಸ್ತೆ ಬದಿಗೆ ಎಸೆದು ಹೋಗುತ್ತಿರುವುದನ್ನು ಗಮನಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಅದನ್ನು ಹೆಕ್ಕಲು ಹೇಳಿದಕ್ಕೆ ಕಾರಿನಲ್ಲಿದ್ದ ಯುವಕ ನಿರಾಕರಿಸಿ ಪರಾರಿಯಾದ ಮತ್ತು ಪೊಲೀಸರು ಕಾರನ್ನು ತಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ಮಾ.1 ರಂದು ದರ್ಬೆಯಲ್ಲಿ ನಡೆದಿದೆ.
ಮಡಿಕೇರಿ ನೋಂದಾವಣೆಯ ಡಸ್ಟರ್ ಕಾರೊಂದು ಮಡಿಕೇರಿ ಕಡೆ ಹೋಗುತ್ತಿದ್ದಾಗ ದರ್ಬೆ ಸಮೀಪ ಕಸದ ಕಟ್ಟನ್ನು ರಸ್ತೆ ಬದಿಗೆ ಎಸೆದು ಹೋಗುತ್ತಿರುವುದನ್ನು ಅದೇ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಗಮನಿಸಿದರು. ತಕ್ಷಣ ಅವರು ಕಾರನ್ನು ನಿಲ್ಲಿಸಿ ರಸ್ತೆ ಬದಿ ಎಸೆದ ಕಸವನ್ನು ಹೆಕ್ಕುವಂತೆ ತಿಳಿಸಿದರು. ಕಾರಿನಲ್ಲಿದ್ದ ಹಿರಿಯ ಚಾಲಕರೊಬ್ಬರು ಕಸ ಹೆಕ್ಕುತ್ತೇನೆಂದು ಮುಂದಾದರೂ ಕಾರಿನ ಮತ್ತೊಂದು ಸೀಟ್‌ನಲ್ಲಿ ಕೂತಿದ್ದ ಯುವಕ ನಾವು ಕಸ ಹೆಕ್ಕುವುದಿಲ್ಲ, ನೀವು ಏನು ಬೇಕಾದರು ಮಾಡಿ ಎಂದು ಹೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೆರಳಿದರು. ಡಾ. ದೀಪಕ್ ರೈ ಅವರು ಘಟನೆ ಕುರಿತು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದರು.
ಸಂಪ್ಯ ಪೊಲೀಸರು ಕಾರನ್ನು ತಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊಂದು ಕಡೆ ನಗರಸಭೆ ವ್ಯಾಪ್ತಿಯಲ್ಲಿ ಕಸ ಎಸೆದ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾಯ್ದೆಯನ್ವಯ ನಗರಸಭೆಯಿಂದಲೂ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿರುವುದಾಗಿ ಡಾ.ದೀಪಕ್ ರೈ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಈ ಘಟನೆ ಪಾಠವಾಗಿದೆ.