ನಾಳೆ (ಮಾ.05) ಸಂಟ್ಯಾರು ಕಲ್ಲಕಟ್ಟದಲ್ಲಿ ಶ್ರೀ ರಾಜಗುಳಿಗ ದೈವದ ಕೋಲ

0

ಪುತ್ತೂರು: ವಿಶೇಷ ಕಾರಣಿಕತೆಯನ್ನು ಹೊಂದಿರುವ ಭಕ್ತಿಯಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸಂಟ್ಯಾರು ಕಲ್ಲಕಟ್ಟದಲ್ಲಿ ನೆಲೆಯಾಗಿರುವ ಶ್ರೀ ರಾಜಗುಳಿಗ ದೈವದ ಕೋಲ ಮಾ.05ರಂದು ನಡೆಯಲಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಟ್ಯಾರು ಜಂಕ್ಷನ್‌ನ ಕಲ್ಲಕಟ್ಟ ಎಂಬಲ್ಲಿ ಶ್ರೀ ರಾಜಗುಳಿಗ ಸಾನಿಧ್ಯ ಇದ್ದು ಈ ಸಾನಿಧ್ಯವು ಸಂಪೂರ್ಣ ಜೀರ್ಣೋದ್ಧಾರಗೊಂಡು ಕಟ್ಟೆ ನಿರ್ಮಾಣ, ಶ್ರೀ ದೈವದ ಪ್ರತಿಷ್ಠೆ, ಕೋಲ ಇತ್ಯಾದಿ ಕಾರ್ಯಕ್ರಮಗಳು ಕಳೆದ ವರ್ಷ ಬಹಳ ವಿಜೃಂಭಣೆಯಿಂದ ನಡೆದಿದೆ.

ಎರಡನೇ ವರ್ಷದ ನೇಮೋತ್ಸವವು ಮಾ.05 ರಂದು ನಡೆಯುತ್ತಿದೆ. ಬೆಳಿಗ್ಗೆ ಗಣಪತಿ ಹೋಮ, ಶುದ್ಧಕಲಶ, ತಂಬಿಲ ಸೇವೆ ಇತ್ಯಾದಿ ವೈದಿಕ ಕಾರ್ಯಕ್ರಮಗಳು ನಡೆದು ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1.30 ಕ್ಕೆ ಶ್ರೀ ರಾಜಗುಳಿಗ ದೈವದ ಕೋಲ ನಡೆಯಲಿದೆ. ಕೋಲದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗುವ ಮೂಲಕ ದೈವದ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸುವಂತೆ ಆಡಳಿತ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕಾರ್ಯದರ್ಶಿ ನವೀನ್ ಸಾಲ್ಯಾನ್ ಕಿನ್ನಿಮಜಲು ಮತ್ತು ಸರ್ವ ಸದಸ್ಯರ ಹಾಗೂ ಊರಿನ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.

ಕಾರಣಿಕದ ಗುಳಿಗ
ಕಲ್ಲಕಟ್ಟ ಪ್ರದೇಶವು ವಿಶೇಷವಾಗಿ ಆರ್ಯಾಪು ಮತ್ತು ಕುರಿಯ ಗ್ರಾಮಕ್ಕೆ ಒಳಪಟ್ಟಿದೆ. ರಾಜಗುಳಿಗನ ಸಾನಿಧ್ಯವು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರು ಸೇತುವೆಯ ಬಳಿಯಿಂದ ನೂರು ಮೀಟರ್ ದೂರದಲ್ಲಿದೆ. ಇಲ್ಲಿ ನೆಲೆಯಾಗಿರುವ ರಾಜಗುಳಿಗ ದೈವ ಅಪಾರ ಕಾರಣಿಕತೆಯನ್ನು ಹೊಂದಿರುವ ದೈವವಾಗಿದೆ. ಭಕ್ತಿಯಿಂದ ಬೇಡಿಕೊಳ್ಳುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿರುವ ದೈವವಾಗಿದ್ದು ಇದಕ್ಕೆ ಹಲವು ನಿದರ್ಶನಗಳನ್ನು ಕೂಡ ಕಾಣಬಹುದಾಗಿದೆ.

LEAVE A REPLY

Please enter your comment!
Please enter your name here