ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ

0

ಪುತ್ತೂರು:ರಾಜ್ಯದಲ್ಲಿರುವ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೂತನವಾಗಿ ವಿದ್ಯಾನಿಧಿ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳು ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿನ ಹಳದಿ ಬಣ್ಣ(ಯಲ್ಲೋ ಬೋರ್ಡ್) ಟ್ಯಾಕ್ಷಿ, ಆಟೋ ರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸದಾಗಿ ‘ವಿದ್ಯಾನಿಧಿ’ ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು 2022-23ನೇ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಪಾವತಿಸಲಾಗುತ್ತಿದ್ದು ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆಯಾಗಲಿದೆ.

ಯಾವ ಕೋರ್ಸ್‌ಗೆ ಎಷ್ಟು ವಿದ್ಯಾರ್ಥಿ ವೇತನ?
ವಿವಿಧ ಹಂತ ವಿದ್ಯಾಭ್ಯಾಸಕ್ಕೆ ವಿವಿಧ ರೂಪದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಪದವಿ ಪೂರ್ವ, ಪಿಯುಸಿ, ಐಟಿಐ, ಡಿಪ್ಲೊಮ ಹುಡುಗರಿಗೆ ರೂ. 2,500 ಸಾವಿರ ರೂ., ಹುಡುಗಿಯರಿಗೆ ರೂ. 3,೦೦೦, ಬಿ.ಎ., ಬಿ.ಎಸ್.ಸಿ ಹಾಗೂ ಬಿ.ಕಾಂ ಪದವಿ ಹಂತದ ಹುಡುಗರಿಗೆ ರೂ.5೦೦೦, ಹುಡುಗಿಯರಿಗೆ ರೂ.5,5೦೦, ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್‌ನಲ್ಲಿ ಹುಡುಗರಿಗೆ ರೂ.7,5೦೦, ಹುಡುಗಿಯರಿಗೆ ರೂ.8೦೦೦, ಎಂಬಿಬಿಎಸ್, ಬಿಇ, ಬಿ.ಟೆಕ್ ಹಂತದಲ್ಲಿ ಹುಡುಗರಿಗೆ ರೂ.10,೦೦೦ ಹಾಗೂ ಹುಡುಗಿಯರಿಗೆ ರೂ.೧೧11,೦೦೦ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಅರ್ಹತೆಗಳೇನು:
ಚಾಲಕರು, ಕರ್ನಾಟಕದ ನಿವಾಸಿಯಾಗಿರಬೇಕು. ರಾಜ್ಯದ ಯಾವುದೇ ಪ್ರಾದೇಶಿಕ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ಕ್ಯಾಬ್/ ಆಟೋರಿಕ್ಷಾ ಕ್ಯಾಬ್ ವರ್ಗಗಳ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರ ಹೊಂದಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರಾಗಿರಬೇಕು. ಚಾಲಕರ ಕುಟುಂಬದ ಎಲ್ಲಾ ಮಕ್ಕಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ ಕುಟುಂಬ ತಂತ್ರಾಂಶದಲ್ಲಿ ದಾಖಲಾಗಿರಬೇಕು. ಚಾಲಕರ ಮಕ್ಕಳು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳ/ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶ ಪಡೆದಿರಬೇಕು.

ಷರತ್ತು, ನಿಬಂಧನೆಗಳು:
ಚಾಲಕರ ಕುಟುಂಬದ ಎಲ್ಲಾ ಮಕ್ಕಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಮಕ್ಕಳ ತಂದೆ-ತಾಯಿ ಇಬ್ಬರೂ ಚಾಲಕರಾಗಿದ್ದು ‘ಸಾರಥಿ’ ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿದ್ದಲ್ಲಿ ಈ ಯೋಜನೆಯಲ್ಲಿ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಚಾಲಕರ ಮಕ್ಕಳು ಅರ್ಹರಾಗಿರುತ್ತಾರೆ. ರೈತ ವಿದ್ಯಾನಿಧಿ ಮತ್ತು ನೇಕಾರ ಮಕ್ಕಳ ವಿದ್ಯಾರ್ಥಿ ವೇತನ ಪಡೆದುಕೊಂಡಿರುವ ಮಕ್ಕಳನ್ನು ಹೊರತುಪಡಿಸಿ ಇತರ ವಿದ್ಯಾರ್ಥಿ ವೇತನ ಪಡೆಯುತ್ತಿರುವ ಚಾಲಕರ ಕುಟುಂಬದ ಮಕ್ಕಳು ವಿದ್ಯಾನಿಧಿ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುತ್ತಾರೆ.

ಹೀಗೆ ಅರ್ಜಿ ಸಲ್ಲಿಸಿ:
ಈ ಯೋಜನೆಯನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in/  ಹಾಗು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್‌ನಲ್ಲಿಅಗತ್ಯ ದಾಖಲೆ ಸಲ್ಲಿಸುವ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here