ಉಪ್ಪಿನಂಗಡಿ: ಇಲ್ಲಿನ ಕೂಟೇಲು ಸೇತುವೆಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರೊಂದು ಬೈಕ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ವಿದ್ಯಾರ್ಥಿಗಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅ.14ರಂದು ನಡೆದಿದೆ.
ಹಿರೇಬಂಡಾಡಿ ಗ್ರಾಮದ ನಿವಾಸಿ ಯತೀಶ್ (20) ಹಾಗೂ ಉಪ್ಪಿನಂಗಡಿ ಪೇಟೆಯ ನಿವಾಸಿ ಅವನೀಶ್ (20) ಗಾಯಗೊಂಡ ಬೈಕ್ ಸವಾರರು. ಇವರು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮಧ್ಯಾಹ್ನ ಊಟಕ್ಕೆಂದು ಉಪ್ಪಿನಂಗಡಿ ಕಡೆಯಿಂದ ಕೂಟೇಲುನಲ್ಲಿರುವ ಕ್ಯಾಂಟೀನ್‌ಗೆ ತೆರಳುತ್ತಿದ್ದ ಇವರು ಹೆದ್ದಾರಿಯಿಂದ ಬಲ ಪಾರ್ಶ್ವದಲ್ಲಿರುವ ಹೊಟೇಲ್‌ಗೆ ತಿರುವು ಪಡೆಯುತ್ತಿದ್ದ ಸಂದರ್ಭ ಹಿಂಬದಿಯಿಂದ ಅತೀ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಇವರ ಬೈಕ್‌ಗೆ ಢಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಪಾರು: ಸ್ವಲ್ಪದರಲ್ಲೇ ಇವರ ಬೈಕ್ ಟ್ಯಾಂಕರ್‌ನ ಮುಂಭಾಗದ ನಡು ಭಾಗಕ್ಕೆ ಢಿಕ್ಕಿ ಹೊಡೆಯುವುದು ತಪ್ಪಿದ್ದು, ಟ್ಯಾಂಕರ್‌ನ ಮುಂಭಾಗದ ಬಲ ಭಾಗಕ್ಕೆ ಢಿಕ್ಕಿ ಹೊಡೆದಿದ್ದರಿಂದ ಇವರಿದ್ದ ಬೈಕ್ ಡಿವೈಡರ್‌ನ ಮೇಲೆ ಎಸೆಯಲ್ಪಟ್ಟಿದ್ದೆ. ಇಲ್ಲಿ ಮಣ್ಣಿನ ರಾಶಿಯಿದ್ದ ಕಾರಣ ಇವರೂ ಕೂಡಾ ಇದರ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಹೆಲ್ಮೆಟ್ ಎರಡು ಭಾಗವಾಗಿದೆ. ಗಾಯಾಳುಗಳನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಇಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಆದರೆ ಕ್ರಾಸಿಂಗ್ ಲೈನ್ ಆಗಲೀ, ಫಲಕವಾಗಲೀ, ಹಂಪ್ಸ್ ಆಗಲೀ ಇನ್ನೂ ಅಳವಡಿಸಿಲ್ಲ. ಇಲ್ಲಿ ಅತೀ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುತ್ತಿವೆ. ಇಲ್ಲಿ ಟ್ಯಾಂಕರ್ ಕೂಡಾ ಅತೀ ವೇಗದಲ್ಲಿತ್ತು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ಎಂ.ಕೆ. ಮಠ ಪತ್ರಿಕೆಗೆ ತಿಳಿಸಿದ್ದಾರೆ.