ಬೀಡಿ ಕಾರ್ಮಿಕರ ದುಡಿಸಿ ವೇತನ ಬಾಕಿ ಮಾಡುವ ಮಾಲಿಕರ ರಕ್ಷಿಸುವ ಸರಕಾರ – ಬಿ.ಎಂ.ಭಟ್
ಪುತ್ತೂರು: ಬೀಡಿ ಕಾರ್ಮಿಕರು ರಾತ್ರೆ ಹಗಲು ದುಡಿದರೂ ತಾವು ಕಟ್ಟಿದ ಬೀಡಿಗೆ ನೀಡಬೇಕಾದ ಕಾನೂನು ಬದ್ದ ವೇತನ ನೀಡದೆ ಪ್ರತಿ ಸಾವಿರ ಬೀಡಿಯಲ್ಲಿ ರೂ.40ರಂತೆ ಕಡತ ಮಾಡಿ ವೇತನ ನೀಡುತ್ತಾ 5 ವರ್ಷದಿಂದ ವಂಚಿಸುತ್ತಿರುವ ಮಾಲಕರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಮಾಲಕರ ರಕ್ಷಣೆಗೆ ನಿಂತ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಬೀಡಿ ಕಾರ್ಮಿಕರು ಸಿದ್ದರಾಗಬೇಕಿದೆ ಎಂದು ಪುತ್ತೂರು ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಅವರು ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ನೇತೃತ್ವದಲ್ಲಿ ಪುತ್ತೂರು ಮಿನಿ ವಿಧಾನ ಸೌಧದ ಎದುರು ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಇದುವರಗೆ ಕನಿಷ್ಟ ವರ್ಷದಲ್ಲಿ 1ಲಕ್ಷ ಬೀಡಿ ಕಟ್ಟಿದ್ದರೂ ತಲಾ ರೂ.2೦,೦೦೦ ವೇತನ ಬಾಕಿ ಮಾಡಿದ ಮಾಲಕರು ಮೂರು ವರ್ಷದ ತುಟ್ಟಿ ಭತ್ತೆ ಬಾಕಿ ತಲಾ ರೂ 12,೦೦೦ ವನ್ನೂ ನೀಡಿಲ್ಲ ಎಂದು ಟೀಕಿಸಿದರು. ಬೀಡಿ ಕಾರ್ಮಿಕರು ಕೆಲಸ ಬಿಡುವಾಗ ಕಾನೂನು ಬದ್ದವಾಗಿ ನೀಡಬೇಕಾದ ಗ್ರಾಚ್ಯುವಿಟಿಯನ್ನು ನೀಡದೆ ಸತಾಯಿಸುವ ಬೀಡಿ ಮಾಲಕರ ವಿರುದ್ದ ಹಲವು ಹೋರಾಟಗಳಾದರೂ ಸರಕಾರ ಮಾಲಕರ ವಿರುದ್ದ ಯಾವ ಕ್ರಮವನ್ನೂ ಕೈಗೊಳ್ಳದೆ ಬೀಡಿ ಕಾರ್ಮಿಕರಿಗೆ ವಂಚನೆ ಮಾಡುತ್ತಿದೆ ಎಂದು ಟೀಕಿಸಿದರು. ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಪ್ರತಿ ಸಾವಿರ ಬೀಡಿಗೆ ರೂ 395 ವೇತನ ನಿಗದಿ ಪಡಿಸಬೇಕು ಎಂಬುದೂ ನಮ್ಮ ಒತ್ತಾಯವಾಗಿದೆ ಎಂದರು. ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೀಡಬೇಕಾದ ಸಾವಿರ ಬೀಡಿಗೆ ರೂ.2 ಸೆಸ್‌ನ್ನು ಜಿ.ಎಸ್.ಟಿ. ಮೂಲಕ ಪಡೆಯುವ ಕೇಂದ್ರ ಸರಕಾರ, ಅದನ್ನು ಕಲ್ಯಾಣ ಮಂಡಳಿಗೆ ನೀಡದೆ ಕಾರ್ಮಿಕರ ಸವಲತ್ತುಗಳನ್ನು ಸಿಗದಂತೆ ಮಾಡಿದೆ. ಈ ಎಲ್ಲಾ ವಂಚನೆಗಳ ವಿರುದ್ದ ಬೀಡಿ ಕಾರ್ಮಿಕರು ಒಂದು ತಿಂಗಳು ನಿರಂತರ ಹೋರಾಟ ನಡೆಸಿ ಮಾರ್ಚು 28 ರಂದು ಜಿಲ್ಲಾ ಮಟ್ಟದ ಹೋರಾಟ ನಡೆಸಿ ಸರಕಾರಕ್ಕೆ ಕೊನೆಯ ಎಚ್ಚರಿಕೆ ನೀಡಲಿದ್ದಾರೆ ಎಂದವರು ಹೇಳಿದರು.
ಈಶ್ವರಿ ಸ್ವಾಗತಿಸಿ ವಂದಿಸಿದರು. ಸಹಾಯಕ ಕಮೀಶನರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.
ಪುತ್ತೂರು ಸಿಪಿಐ(ಎಂ) ಮುಖಂಡರಾದ ಪಿಕೆ ಸತೀಶನ್, ಸಂಘದ ಅದ್ಯಕ್ಷರಾದ ಗುಡ್ಡಪ್ಪ ಗೌಡ, ಸವಿತ ಪೆರಿಗೇರಿ, ಪುಷ್ಪ ಪಾಲ್ತಾಡಿ, ಯಶೋದ ಪಾಲ್ತಾಡಿ, ಸುಮಯ ಕಬಕ, ಪವಿತ್ರ ಗೆಜ್ಜೆಗಿರಿ ಮೊದಲಾದವರು ಉಪಸ್ಥಿತರಿದ್ದರು.