ಪಾಣಾಜೆ: ಪುತ್ತೂರು ತಾಲೂಕು ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ವಿವಾದಕ್ಕೆ ತೆರೆ ಬಿದ್ದಿದೆ. ಎಸ್‌ಡಿಎಂಸಿ ಪುನರ್‌ರಚನೆ ಸಭೆಯನ್ನು ಪ್ರಶ್ನಿಸಿ ಎಸ್‌ಡಿಎಂಸಿ ಅಧ್ಯಕ್ಷೆ ಸೀತಾ ಭಟ್ ರವರು ಹೈಕೋರ್ಟ್ ನಲ್ಲಿ ಹೂಡಿದ್ದ ದಾವೆಯನ್ನು ಒಪ್ಪಂದದ ಮೇರೆಗೆ ಹಿಂಪಡೆದ ಪರಿಣಾಮ ಹೈಕೋರ್ಟ್ ತಡೆಯಾಜ್ಞೆ ತೆರವಾಗಿ ಸೀತಾ ಭಟ್ ರವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಪಾಣಾಜೆ ದ ಕ ಹಿ ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯ ಬಗ್ಗೆ ವಿದ್ಯಾರ್ಥಿಗಳ ಪೋಷಕರ ಸಭೆಯು 2021 ರ ಅಕ್ಟೋಬರ್ 30 ರಂದು ಪಾಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಸೇರಿದ್ದ ಪೋಷಕರು ನಿಯಮದಂತೆ ಒಟ್ಟು 18 ಜನರನ್ನು ಎಸ್ ಡಿ ಎಂ ಸಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. ಆ ಬಳಿಕ ನಡೆದ ಎಸ್ ಡಿ ಎಂ ಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಇಳಿದ ಕಾರಣ ಚುನಾವಣೆ ನಡೆಸಲಾಗಿತ್ತು. ಈ ಪೈಕಿ ಸೀತಾ ಉದಯ ಶಂಕರ್ ಭಟ್ ಹಾಗೂ ಹಿಂದಿನ ಅಧ್ಯಕ್ಷ ಅಬೂಬಕ್ಕರ್ ಆರ್ಲಪದವು ರವರಿಗೆ ಸಮಾನ ಮತಗಳು ಬಂದ ಕಾರಣ ಚೀಟಿ ಎತ್ತುವ ಪ್ರಕ್ರಿಯೆ ನಡೆಸಲಾಗಿತ್ತು. ಇದರಲ್ಲಿ ಸೀತಾ ಉದಯ ಶಂಕರ್ ಭಟ್‌ರವರನ್ನು ಶಾಲೆಯ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಸಭೆಯ ನಡಾವಳಿಯಲ್ಲಿ ದಾಖಲಿಸಲಾಗಿತ್ತು.
ಆದರೆ ತದನಂತರ, ಎಸ್‌ಡಿಎಂಸಿ ರಚನೆಯಲ್ಲಿ ಲೋಪ ಉಂಟಾಗಿದೆ ಎಂದು ನೂತನ ಎಸ್ ಡಿ ಎಂ ಸಿ ರಚನೆ ಮಾಡಬೇಕೆಂದು ಶಾಲಾ ಮುಖ್ಯಗುರು ಶೀಲಾವತಿಯವರು ಹೊಸ ಎಸ್ ಡಿ ಎಂ ಸಿ ರಚನೆ ಮಾಡುವ ಕುರಿತು 2022 ಜ.14 ರಂದು ಪೋಷಕರ ಸಭೆ ಕರೆದಿದ್ದರು. ’ಎಸ್ ಡಿ ಎಂ ಸಿ ರಚನೆಯಾಗಿ ಅಧ್ಯಕ್ಷರಾಗಿ ನೇಮಕಗೊಂಡು ಎಸ್ ಡಿ ಎಂ ಸಿ ಸಮಿತಿ ಊರ್ಜಿತದಲ್ಲಿರುವಾಗಲೇ ನಿಯಮ ಬಾಹಿರವಾಗಿ ಪುನ: ಎಸ್ ಡಿ ಎಂ ಸಿ ರಚನೆಯ ಬಗ್ಗೆ ಕರೆದಿರುವ ಸಭೆಯು ಕಾನೂನು ಬಾಹಿರವೆಂದು ಈ ಸಭೆಯನ್ನು ರದ್ದುಪಡಿಸಬೇಕೆಂದು, ಈ ರೀತಿ ಕಾನೂನು ಬಾಹಿರವಾಗಿ ಸಭೆ ಕರೆದಿರುವ ಮುಖ್ಯಗುರುಗಳ ವಿರುದ್ಧ ಹಾಗೂ ಇದಕ್ಕೆ ಪ್ರೇರೇಪಣೆ ನೀಡುತ್ತಿರುವ ಪಂಚಾಯತ್ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೀತಾ ಉದಯ ಶಂಕರ್ ಭಟ್‌ರವರು ಹೈಕೋರ್ಟ್‌ನಲ್ಲಿ ವಕೀಲರಾದ ಲತೀಫ್ ಬಡಗನ್ನೂರು ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿ ಜ.14 ರ ಎಸ್ ಡಿ ಎಂ ಸಿ ರಚನೆ ಸಭೆಗೆ ತಡೆಯಾಜ್ಞೆ ತಂದಿದ್ದರು.
ಇದರಿಂದ ಶಾಲಾ ಎಸ್ ಡಿ ಎಂ ಸಿ ಸಭೆ ನಡೆಯದೆ ಶಾಲಾ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿತ್ತು ಹಾಗೂ ಶಾಲೆಗೆ ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಲೂ ತೊಂದರೆಯಾಗಿತ್ತು. ಶಾಲೆಯ ಮಕ್ಕಳಿಗೆ ತೊಂದರೆಯಾಗುತ್ತಿರುವುದು ಮನಗಂಡ ಶಾಲಾ ಪೋಷಕರು ದ. 8 ರಂದು ಸಭೆ ಸೇರಿ ಸೀತಾ ಭಟ್‌ರವರು ಹೈ ಕೋರ್ಟ್ ನಲ್ಲಿ ಹೂಡಿರುವ ದಾವೆಯನ್ನು ಹಿಂಪಡೆದಲ್ಲಿ ಮತ್ತೆ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದೆಂದು ನಿರ್ಣಯ ಕೈಗೊಂಡಿದ್ದರು. ಬಳಿಕ ಬೆಳವಣಿಗೆಯಲ್ಲಿ, ಸೀತಾ ಉದಯ ಶಂಕರ್ ಭಟ್‌ರವರು ಹೈ ಕೋರ್ಟ್‌ನಲ್ಲಿರುವ ದಾವೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿ ದಾವೆಯನ್ನು ಹಿಂಪಡೆದ ಬಳಿಕ ಫೆ.23 ರಂದು ಎಸ್ ಡಿ ಎಂ ಸಿ ಅಧ್ಯಕ್ಷೆ ಸೀತಾ ಉದಯ ಶಂಕರ್ ಭಟ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆಯಲಾಯಿತು ಎಂದು ತಿಳಿದು ಬಂದಿದೆ.
ಹೈಕೋರ್ಟ್‌ನಲ್ಲಿದ್ದ ದಾವೆ ಹಿಂದಕ್ಕೆ ಸುದೀರ್ಘ 13 ತಿಂಗಳ ವಿವಾದಕ್ಕೆ ತೆರೆ
ಎಸ್‌ಡಿಎಂಸಿ ವಿವಾದವು ಇಡೀ ಶೈಕ್ಷಣಿಕ ವರ್ಷ ಮುಂದುವರಿದಿತ್ತು. 13 ತಿಂಗಳ ಕಾಲ ಮುಂದುವರಿದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.
ಶಾಲಾ ಪೋಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೋರಿಕೆಯಂತೆ ಹೈಕೋರ್ಟ್ ನಲ್ಲಿ ಹೂಡಿದ್ದ ದಾವೆಯನ್ನು ಹಿಂಪಡೆದಿದ್ದೇನೆ
ಸೀತಾ ಭಟ್