ಅನಧಿಕೃತ ಬ್ಯಾನರ್, ಬಂಟಿಂಗ್ಸ್, ಜಾಹೀರಾತು ಫಲಕಗಳ ತೆರವು: ರಾಜಕೀಯ ಪಕ್ಷಗಳ ಅನಧಿಕೃತ ಔತಣಕೂಟಗಳ ಮೇಲೆ ನಿಗಾ-ದ.ಕ.ಜಿಲ್ಲಾಧಿಕಾರಿ ಆದೇಶ

0

ಪುತ್ತೂರು:ಅನುಮತಿ ರಹಿತವಾಗಿ ಹಾಕಲಾಗಿರುವ ಬ್ಯಾನರ್, ಬಂಟಿಂಗ್ಸ್‌ಗಳ ತೆರವು, ಇಲಾಖಾ ಅನುಮತಿ ಪಡೆಯದೆ ರಾಜಕೀಯ ಪಕ್ಷಗಳು, ಮುಖಂಡರು ಯಾವುದೇ ಸಾರ್ವಜನಿಕ ಔತಣಕೂಟಗಳನ್ನು ನಡೆಸದಂತೆ ನಿಗಾಇರಿಸುವುದು ಸೇರಿದಂತೆ, ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ದ.ಕ.ಜಿಲ್ಲಾಧಿಕಾರಿಯವರು ಕೆಲವೊಂದು ಸೂಚನೆಗಳನ್ನು ನೀಡಿ ಸುತ್ತೋಲೆ ಹೊರಡಿಸಿದ್ದು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಾಗಿ ಪಾಲಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.


ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ.ಚುನಾವಣೆ ಘೋಷಣೆ ಪೂರ್ವದಲ್ಲಿ ಜಿಲ್ಲಾಡಳಿತವು ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಜ್ಜಾಗಬೇಕಾಗಿರುತ್ತದೆ.ಜಿಲ್ಲೆಯಾದ್ಯಂತ ಅನೇಕ ಸಾರ್ವಜನಿಕ ಸಭೆ-ಸಮಾರಂಭಗಳು, ಹಬ್ಬ-ಹರಿದಿನಗಳು, ಸಾರ್ವಜನಿಕ ಔತಣಕೂಟಗಳು ಇತ್ಯಾದಿ ಕಾರ್ಯಕ್ರಮಗಳನ್ನು ಅನೇಕ ಸಂಘ-ಸಂಸ್ಥೆಗಳು, ರಾಜಕೀಯ ಸಂಘಟನೆಗಳು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನು ಪಡೆಯದೆ ನಡೆಸುತ್ತಿರುವುದು ಗಮನಕ್ಕೆ ಬಂದಿರುತ್ತದೆ.ಅಲ್ಲದೇ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಇಲ್ಲದೇ ಅನೇಕ ಬ್ಯಾನರ್-ಬಂಟಿಂಗ್ಸ್‌ಗಳು, ಫ್ಲೆಕ್ಸ್‌ಗಳನ್ನು ನಿಯಮ ಬಾಹಿರವಾಗಿ ಹಾಕಿರುವುದು ಕಂಡುಬರುತ್ತವೆ.ಇದು ಕರ್ನಾಟಕ ತೆರೆದ ಸ್ಥಳಗಳು (ವಿರೂಪಗೊಳಿಸುವಿಕೆ ತಡೆಗಟ್ಟುವ)ಕಾಯ್ದೆ 1981ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.ಈ ಕಾಯ್ದೆಯು ಎಲ್ಲಾ ಸಂಧರ್ಭದಲ್ಲಿಯೂ ಜಾರಿಯಲ್ಲಿದ್ದಾಗಿಯೂ ಸಹಿತ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಸರಿಯಾದ ಕ್ರಮವನ್ನು ಕೈಗೊಳ್ಳದೆ ಇರುವುದು ಜಿಲ್ಲಾಡಳಿತದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.ಅನುಮತಿ ಇಲ್ಲದೆ ಸಾರ್ವಜನಿಕ ಔತಣಕೂಟಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಹಾಗೂ ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಯಿರುವುರಿಂದ ಈ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಆದೇಶಿಸಿದ್ದಾರೆ.


ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನುಮತಿಯನ್ನು ಪಡೆಯದೆ ಹಾಕಲಾಗಿರುವ ಬ್ಯಾನರ್-ಬಂಟಿಂಗ್ಸ್‌ಗಳು ಮತ್ತು ಫ್ಲೆಕ್ಸ್‌ಗಳು, ಗೋಡೆ ಬರಹಗಳು ಮತ್ತು ಇತರ ಜಾಹೀರಾತುಗಳನ್ನು ತೆರವುಗೊಳಿಸಲು ಕರ್ನಾಟಕ ತೆರೆದ ಸ್ಥಳಗಳು (ವಿರೂಪಗೊಳಿಸುವಿಕೆ ತಡೆಗಟ್ಟುವ) ಕಾಯ್ದೆ-1981ರಂತೆ ಪ್ರತಿದಿನ ಕ್ರಮಕೈಗೊಂಡು ವರದಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅನುಮತಿಯನ್ನು ಪಡೆಯದ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ವ್ಯಕ್ತಿಗಳು ಸಾರ್ವಜನಿಕ ಔತಣಕೂಟಗಳನ್ನು ಏರ್ಪಡಿಸುವಂತಿಲ್ಲ.ಒಂದುವೇಳೆ ಉಲ್ಲಂಸಿದಲ್ಲಿ ಸ್ಥಳೀಯ ಪ್ರಾಧೀಕಾರಗಳು ಮತ್ತು ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಐಪಿಸಿ ಕಲಂ 171ರಡಿಯಲ್ಲಿ ಹಾಗೂ ಸಂಬಂಧಪಟ್ಟ ಇತರೆ ಕಾಯ್ದೆಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಅನುಮತಿಯನ್ನು ನೀಡುವಾಗ, ಬಳಸುವ ಬ್ಯಾನರ್-ಬಂಟಿಂಗ್ಸ್‌ಗಳನ್ನು ಸಭೆ ಮುಕ್ತಾಯವಾದ ನಂತರ ತೆರವುಗೊಳಿಸಲು ಸೂಚಿಸಬೇಕು. ಕಾನೂನು ಸುವ್ಯವಸ್ಥೆ, ಸಾಮಾಜಿಕ ಅಶಾಂತಿ ಹಾಗೂ ಶಬ್ದಮಾಲಿನ್ಯವನ್ನು ಉಂಟುಮಾಡುವ ಯಾವುದೇ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡು, ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ಈ ವಿಷಯದ ಬಗ್ಗೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತಿದಿನ ತಮ್ಮ ನೇತೃತ್ವದಲ್ಲಿ ಮೇಲು ಉಸ್ತುವಾರಿಯನ್ನು ನಡೆಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿ, ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಪ್ರತಿ ದಿನ ಮತ್ತು ಒಟ್ಟಾರೆ ಮಾಹಿತಿಯನ್ನು ಪ್ರತಿ ಶನಿವಾರ ಪೂರ್ವಾಹ್ನ 11 ಗಂಟೆ ಒಳಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಸಲ್ಲಿಸತಕ್ಕದ್ದು ಎಂದು ದ.ಕ.ಜಿಲ್ಲಾಧಿಕಾರಿಯವರು ಸುತ್ತೋಲೆ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here