ಎನ್ಹೆಚ್ಎ ಯೋಜನಾ ನಿರ್ದೇಶಕರ ಆಗಮನ; ಬೇಡಿಕೆ ಈಡೇರಿಕೆ ಭರವಸೆ
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಶಿರಾಡಿ ಹಾಗೂ ಅಡ್ಡಹೊಳೆ ಪೇಟೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ಹೆದ್ದಾರಿಯ ಹಲವು ಕಡೆಗಳಲ್ಲಿ ತಡೆಗೋಡೆ ರಚನೆ, ಸಂಪರ್ಕ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.16ರಂದು ಬೆಳಿಗ್ಗೆ ಗ್ರಾಮಸ್ಥರು ಶಿರಾಡಿ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡರವರು ಬಹುತೇಕ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.
ಬೆಳಿಗ್ಗೆ ಶಿರಾಡಿ ಪೇಟೆಯಲ್ಲಿ ಜನಾಗ್ರಹ ಸಭೆ ನಡೆಸಿದ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಬಳಿಕ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಉಪ್ಪಿನಂಗಡಿ ಎಸ್.ಐ.ರಾಜೇಶ್ ಕೆ.ವಿ., ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನಾಧಿಕಾರಿ ಮಂಜುನಾಥ್ ಹಾಗೂ ಇತರೇ ಅಧಿಕಾರಿಗಳು ರಸ್ತೆ ತಡೆ ನಡೆಸಲು ಮುಂದಾದ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳನ್ನು ತಡೆದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೂ ಬರುತ್ತಿದ್ದು ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ ಎಂದು ಹೇಳಿ ಮನವೊಲಿಸಿದರು. ಈ ವೇಳೆ ಗ್ರಾಮಸ್ಥರು ಘೋಷಣೆ ಕೂಗಲಾರಂಭಿಸಿದರು. ಮಧ್ಯಾಹ್ನ ಸುಮಾರು 12.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡರವರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿ, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೊದಲೇ ಅಂದಾಜುಪಟ್ಟಿ ಮಾಡಲಾಗಿದ್ದು ಅದನ್ನು ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸರಕಾರದಿಂದ ದೊರೆತ ಅನುಮೋದನೆಯಾದಂತೆ ರಸ್ತೆ ನಿರ್ಮಾಣ ಕೆಲಸ ಆಗುತ್ತಿದೆ. ಅಲ್ಲದೆ ಸದ್ರಿ ರಸ್ತೆ ಪಶ್ಚಿಮಘಾಟ್ನಲ್ಲಿ ಹಾದುಹೋಗುತ್ತಿದೆ. ಇಲ್ಲಿ ರಸ್ತೆಗೆ 30 ಮೀ. ಜಾಗ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಅದರೊಳಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಆದರೂ ಗ್ರಾಮಸ್ಥರ ಬೇಡಿಕೆಯಂತೆ ಸಂಪರ್ಕ ರಸ್ತೆ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಡಲು ಬದ್ಧರಾಗಿದ್ದೇವೆ ಎಂದರು. ಜನರ ಬೇಡಿಕೆಯಂತೆ ಶಿರಾಡಿ ಪೇಟೆಯ ಎರಡೂ ಬದಿ ಸರ್ವೀಸ್ ರಸ್ತೆ ಸಾಧ್ಯವಿಲ್ಲ. ಆಸ್ಪತ್ರೆ, ಚರ್ಚ್ ಸಂಪರ್ಕಿಸುವ ಬದಿಯಲ್ಲಿ ಸರ್ವೀಸ್ ರಸ್ತೆ ಮಾಡಿಕೊಡುತ್ತೇವೆ. ಇದಕ್ಕೆ ಬೇಕಾದ ಜಾಗ ಸ್ಥಳೀಯರು ಬಿಟ್ಟುಕೊಡಬೇಕೆಂದು ಹೇಳಿದರು. ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ಆಟದ ಮೈದಾನದ ಮುಂದೆ ಶಾಲೆಯವರ ಬೇಡಿಕೆಯಂತೆ ತಡೆಗೋಡೆ ನಿರ್ಮಿಸುವುದಾಗಿಯೂ ಅವರು ಹೇಳಿದರು. ಬಳಿಕ ಯೋಜನಾ ನಿರ್ದೇಶಕ ಲಿಂಗೇಗೌಡರವರು ಶಿರಾಡಿಯಲ್ಲಿ ಸರ್ವೀಸ್ ರಸ್ತೆಗೆ ಅವಶ್ಯಕವಿರುವ ಜಾಗದ ಪರಿಶೀಲನೆಯೂ ನಡೆಸಿದರು. ನಂತರ ಅವರು ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸುವ ರಸ್ತೆ, ಶಿರಾಡಿ ಚರ್ಚ್, ಅಡ್ಡಹೊಳೆ ಅಯ್ಯಪ್ಪ ದೇವಸ್ಥಾನ, ಅಡ್ಡಹೊಳೆ ಚರ್ಚ್ಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆಗಳ ಪರಿಶೀಲನೆ ನಡೆಸಿ ಇಲಾಖೆಯ ಇಂಜಿನಿಯರ್ಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಈ ವೇಳೆ ಜನಪ್ರತಿನಿಧಿಗಳು, ಗ್ರಾಮಸ್ಥರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಜನಾಗ್ರಹ ಸಭೆ:
ಯೋಜನಾ ನಿರ್ದೇಶಕ ಲಿಂಗೇಗೌಡರ ಭೇಟಿಗೂ ಮೊದಲು ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ಸಂಚಾಲಕರಾದ ರೆ.ಫಾ.ಹನಿ ಜೇಕಬ್ರವರು, ಸರ್ವೀಸ್ ರಸ್ತೆಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಯಾವುದೇ ಸ್ಪಂದನೆ ಸಿಗದೇ ಇದ್ದ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ. ಉದನೆಯಲ್ಲಿ ಹೆದ್ದಾರಿ ಏರಿಕೆಯಿಂದಾಗಿ ಶಿಬಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ಪದೇ ಪದೇ ಅಪಘಾತ ನಡೆಯುತ್ತಿದೆ. ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮೈದಾನಕ್ಕೆ ಸಮಾನಂತರವಾಗಿ ರಸ್ತೆ ಏರಿಕೆಯಾಗಿದೆ. ಇದರಿಂದ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿ ತಡೆಗೋಡೆಗೆ ಹಲವು ಸಲ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಪ್ರತಿಭಟನೆ ನಡೆಸಬೇಕಾಗಿ ಬಂದಿದೆ. ಈ ಹೋರಾಟ ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ, ಶಾಂತಿಯುತ ಪ್ರತಿಭಟನೆ ಮೂಲಕವೇ ಸಮಸ್ಯೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡುತ್ತಿದ್ದೇವೆ. ಆದರೂ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದೆಯೂ ಹೋರಾಟ ನಡೆಸಲಾಗುವುದು ಎಂದರು.
ಬೇಡಿಕೆಗೆ ಸ್ಪಂದನೆ ಇಲ್ಲ-ಚಾಕೋ ವರ್ಗೀಸ್:
ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಚಾಕೋ ವರ್ಗೀಸ್ರವರು ಮಾತನಾಡಿ, ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಸಂಪರ್ಕ ರಸ್ತೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಆದ್ದರಿಂದ ಸುಸಜ್ಜಿತ ಸಂಪರ್ಕ ರಸ್ತೆ ಮಾಡಿಕೊಡಬೇಕು. ಅಗತ್ಯವಿರುವಲ್ಲಿ ಸರ್ವೀಸ್ ರಸ್ತೆ ಆಗಬೇಕೆಂದು ಈ ಹಿಂದೆಯೇ ಮನವಿ ಮಾಡಲಾಗಿದೆ. ಆದರೂ ಸ್ಪಂದನೆ ಸಿಗದೇ ಇರುವುದರಿಂದ ಹೋರಾಟ ಅನಿವಾರ್ಯ ಆಯಿತು ಎಂದರು.
ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯೇ ಇಲ್ಲ-ಸುಧೀಕ್ ಕುಮಾರ್:
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಅವರು ಮಾತನಾಡಿ, ಶಿರಾಡಿ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಶಾಲೆ, ಚರ್ಚ್, ದೇವಸ್ಥಾನ, ಭಜನಾ ಮಂದಿರಗಳಿವೆ. ಆದರೆ ಈ ಭಾಗದಲ್ಲಿ ಸರ್ವಿಸ್ ರಸ್ತೆಗಳಿಲ್ಲ. ಈ ಬಗ್ಗೆ ಸಂಸದರು, ಶಾಸಕರೂ ಸೇರಿದಂತೆ ಜನಪ್ರತಿನಿಧಿಗಳು, ಇಲಾಖೆಯವರಿಗೆ ಮನವಿ ನೀಡಿದರೂ ಪ್ರಯೋಜನವಿಲ್ಲ. ಅವರಿಗೆ ಇಚ್ಛಾಶಕ್ತಿಯೇ ಇಲ್ಲ. ಸಂಸದ ನಳಿನ್ಕುಮಾರ್ ಕಟೀಲ್ರವರು ಜನರ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಈ ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಗದೇ ಇದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.
ಅಧಿಕಾರಿಗಳು ಗಮನಹರಿಸಬೇಕು-ಪಿ.ಪಿ. ವರ್ಗೀಸ್:
ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್ರವರು ಮಾತನಾಡಿ, ಶಿರಾಡಿ ಭಾಗದಲ್ಲಿ ಸರ್ವೀಸ್ ರಸ್ತೆಗಳಿಲ್ಲ. ಗ್ರಾಮೀಣ ರಸ್ತೆಗಳಿಗೆ ಸರಿಯಾದ ರೀತಿಯಲ್ಲಿ ಸಂಪರ್ಕವೇ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ. ಮನವಿಗೆ ಸೂಕ್ತ ಸ್ಪಂದನೆ ನೀಡುತ್ತಿದ್ದಲ್ಲಿ ಪ್ರತಿಭಟನೆ ನಡೆಸಬೇಕಾದ ಅಗತ್ಯವೇ ಇರಲಿಲ್ಲ. ರಸ್ತೆ ದಾಟಲು ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಸೂಕ್ತ ಸ್ಪಂದನೆ ನೀಡಬೇಕು. ಇಲ್ಲದೇ ಇದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನೆಲ್ಯಾಡಿಯಲ್ಲೂ ಕಲ್ಲಡ್ಕ ಮಾದರಿಯಲ್ಲಿ ಫ್ಲೈಓವರ್ ಆಗಬೇಕೆಂಬ ಬೇಡಿಕೆಗೂ ಮನ್ನಣೆ ಸಿಗಲಿಲ್ಲ ಎಂದು ಪಿ.ಪಿ.ವರ್ಗೀಸ್ ಹೇಳಿದರು.
ಹೋರಾಟ ತೀವ್ರಗೊಳಿಸಬೇಕು-ಸರ್ವೋತ್ತಮ ಗೌಡ:
ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಹೆದ್ದಾರಿ ಕಾಮಗಾರಿಯಿಂದಾಗಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಪೇಟೆಗೆ ಮಾರಾಟ ಮಾಡಲು ಸಮಸ್ಯೆಯಾಗುತ್ತಿದೆ. ಚತುಷ್ಪಥ ಕಾಮಗಾರಿಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಎಷ್ಟೇ ಸಲ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಇದು ಒಂದು ರೀತಿಯ ಬೇಜವಾಬ್ದಾರಿಯೂ ಆಗಿದೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದರು.
ಸರ್ವಿಸ್ ರಸ್ತೆ, ಸಂಪರ್ಕ ರಸ್ತೆ ಅಗತ್ಯ-ಆಶಾಲಕ್ಷ್ಮಣ್:
ತಾ.ಪಂ.ಮಾಜಿ ಸದಸ್ಯೆ ಆಶಾಲಕ್ಷ್ಮಣ್ರವರು ಮಾತನಾಡಿ, ಶಿರಾಡಿ, ಅಡ್ಡಹೊಳೆಯಲ್ಲಿ ಜನಸಂಚಾರ ಹೆಚ್ಚಾಗಿದೆ. ಈ ಜಾಗದಲ್ಲಿ ಸರ್ವೀಸ್ ರಸ್ತೆ, ಸಂಪರ್ಕ ರಸ್ತೆಯು ತೀರಾ ಅಗತ್ಯವಿದೆ. ಇದಕ್ಕೆ ಸೂಕ್ತ ಸ್ಪಂದನೆ ಸಿಗಬೇಕೆಂದು ಹೇಳಿದರು.
ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು-ವಿನೀತಾ ತಂಗಚ್ಚನ್:
ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನಿತಾ ತಂಗಚ್ಚನ್ರವರು ಮಾತನಾಡಿ ಶಿರಾಡಿಯಲ್ಲಿ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸರ್ವೀಸ್ ರಸ್ತೆ, ಸಂಪರ್ಕ ರಸ್ತೆಯ ಬೇಡಿಕೆ ಬಗ್ಗೆ ಪಂಚಾಯತ್ನಲ್ಲಿ ನಿರ್ಣಯಿಸಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಶಿರಾಡಿಯಲ್ಲಿ ಪಡಿತರ ವಿತರಣೆ ಇದೆ. ಅಲ್ಲಿಗೆ ಬರಲು ಜನರಿಗೆ ಸಮಸ್ಯೆಯಾಗುತ್ತಿದೆ. ಶಿರಾಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ 5 ಗ್ರಾಮಗಳ ಜನರು ಬರುತ್ತಿದ್ದಾರೆ. ಅಲ್ಲದೇ ಗ್ರಂಥಾಲಯ, ದೇವಾಲಯ, ಚರ್ಚ್, ಶಾಲೆ, ಅಂಗನವಾಡಿ, ಭಜನಾ ಮಂದಿರಗಳೂ ಇವೆ. ಇವರೆಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವೀಸ್ ರಸ್ತೆ ಹಾಗೂ ಸುಸಜ್ಜಿತ ಸಂಪರ್ಕ ರಸ್ತೆ ಬೇಕಾಗಿದೆ. ಇದಕ್ಕೆ ಅಧಿಕಾರಿಗಳು ತಕ್ಷಣ ಸ್ಪಂದನೆ ನೀಡಬೇಕು. ಇಲ್ಲವಾದಲ್ಲಿ ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡುವುದಾಗಿ ಹೇಳಿದರು.
ಗುತ್ತಿಗೆ ಕಂಪನಿಯವರ ಲೈಸನ್ಸ್ ರದ್ದು-ಎಂ.ಕೆ. ಪೌಲೋಸ್: ಗ್ರಾ.ಪಂ. ಸದಸ್ಯ ಎಂ.ಕೆ.ಪೌಲೋಸ್ರವರು ಮಾತನಾಡಿ, ಬೇಡಿಕೆಗೆ ಸ್ಪಂದನೆ ಸಿಗದೇ ಇದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ವಹಿಸಿಕೊಂಡ ಕಂಪನಿಯವರಿಗೆ ಪಂಚಾಯತ್ನಿಂದ ನೀಡಿರುವ ಲೈಸೆನ್ಸ್ ರದ್ದುಗೊಳಿಸಲು ಮುಂದಿನ ಸಾಮಾನ್ಯ ಸಭೆಯಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಶಿರಾಡಿ ಸಂತಸೆಬಾಸ್ಟಿನ್ ಚರ್ಚ್ನ ವಿಕಾರ್ ಫಾ.ಸನೀಶ್, ರೆ.ಫಾ.ಜೈಸನ್, ರೆ.ಫಾ.ಜೋಸೆಫ್ ಅಡ್ಡಹೊಳೆ, ಕೆಪಿಸಿಸಿ ಸುಳ್ಯ ಬ್ಲಾಕ್ ಉಸ್ತುವಾರಿ ನಂದಕುಮಾರ್, ಕೆಪಿಸಿಸಿ ಸದಸ್ಯ ಕೆ.ಪಿ.ತೋಮಸ್, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯ ಸಣ್ಣಿಜಾನ್, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಕೆ.ಪಿ.ಅಬ್ರಹಾಂ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.