ಪತ್ನಿಗೆ ಕೊಕ್ಕೆ ಕತ್ತಿಯಿಂದ ಹಲ್ಲೆ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ, ದಂಡ

0

ಪುತ್ತೂರು:2021ರಲ್ಲಿ ನಡೆದ ಘಟನೆಯೊಂದರಲ್ಲಿ ಪತ್ನಿಗೆ ಕೊಕ್ಕೆಕತ್ತಿಯಿಂದ ಕಡಿದು ತೀವ್ರ ಸ್ವರೂಪದ ಗಾಯ ಉಂಟು ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

2021ರ ಜನವರಿ 14ರಂದು ಬೆಳಿಗ್ಗೆ 9 ಗಂಟೆಗೆ ಪಡ್ನೂರು ಗ್ರಾಮದ ಅರುವಾರ ಎಂಬಲ್ಲಿ ಘಟನೆ ನಡೆದಿತ್ತು.ಶ್ರೀಮತಿ ಗೋಪಿ ಎಂಬವರು ಮನೆಯ ಜಗಲಿಯಲ್ಲಿ ಕುಳಿತು ಸೆಗಣಿ ಸಾರಲು ಕರಿಯನ್ನು ಗುದ್ದುತ್ತಿದ್ದ ಸಂದರ್ಭ ತನ್ನ ಪತಿ ಈಶ್ವರ ಪೂಜಾರಿಯವರಲ್ಲಿ, ಮನೆಯ ಒಳಗಡೆ ಇದ್ದ ಅಡಿಕೆಯನ್ನು ಹೊರಗಡೆ ಒಣಗಲು ಹಾಕುವಂತೆ ಹೇಳಿದ್ದರು.ಆ ಸಮಯ, `ನೀನು ನನ್ನಲ್ಲಿ ಅಡಿಕೆ ಒಣಗಲು ಹಾಕಲು ಹೇಳುತ್ತೀಯಾ’ ಎಂದು ಹೇಳಿ ಈಶ್ವರ ಪೂಜಾರಿಯವರು ಪತ್ನಿ ಗೋಪಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಒಳಗಡೆಯಿದ್ದ ಕೊಕ್ಕೆ ಕತ್ತಿಯನ್ನು ತೆಗೆದುಕೊಂಡು ಬಂದು ಆಕೆಗೆ ಕಡಿದಾಗ ಆಕೆ ಓಡಿಕೊಂಡು ಮನೆಯ ಹೊರಗಡೆ ಅಂಗಳದ ಬದಿ ಕಣಿವೆಯ ಬಳಿಗೆ ತೆರಳಿದರು.ಅವರನ್ನು ಅಟ್ಟಾಡಿಸಿಕೊಂಡು ಬಂದ ಈಶ್ವರ ಪೂಜಾರಿಯವರು ಆಕೆಯ ಎಡಕೋಲು ಕೈಗೆ, ಬಲಕೋಲು ಕೈ ಮತ್ತು ತಲೆಗೆ ಕತ್ತಿಯಿಂದ ಕಡಿದು ತೀವ್ರ ಸ್ವರೂಪದ ಗಾಯಗೊಳಿಸಿದ್ದಾಗಿ ಆರೋಪಿಸಲಾಗಿತ್ತು.ಘಟನೆ ಕುರಿತು ಗೋಪಿಯವರು ಪುತ್ತೂರು ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಆರೋಪಿ ಈಶ್ವರ ಪೂಜಾರಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ಆಗಿನ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕರವರು ವಿಚಾರಣೆ ನಡೆಸಿ ಆರೋಪಿ ವಿರುದ್ಧ ಕಲಂ 498(ಎ), 504, 326 ಐಪಿಸಿಯಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರು ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅರ್ಚನಾ ಕೆ.ಉನ್ನಿತ್ತಾನ್‌ರವರು ಆರೋಪಿ ಈಶ್ವರ ಪೂಜಾರಿ ತಪ್ಪಿತಸ್ಥ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಚೇತನಾದೇವಿಯವರು ವಾದಿಸಿದ್ದರು.

ಶಿಕ್ಷೆಯ ಪ್ರಮಾಣ:
ಸೆಕ್ಷನ್ 326ರಡಿಯ ಅಪರಾಧಕ್ಕಾಗಿ 3 ವರ್ಷ ಜೈಲು, 5 ಸಾವಿರ ರೂ.ದಂಡ.ದಂಡ ಪಾವತಿಸಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ.ಸೆಕ್ಷನ್ 498(ಎ)ಅಡಿಯ ಅಪರಾಧಕ್ಕಾಗಿ 2 ವರ್ಷ ಜೈಲು, 5000 ರೂ.ದಂಡ.ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಜೈಲು. ಸೆಕ್ಷನ್ 504 ಐಪಿಸಿ ಅಪರಾಧಕ್ಕಾಗಿ 6 ತಿಂಗಳ ಜೈಲು ಶಿಕ್ಷೆ ಮತ್ತು 3ಸಾವಿರ ರೂ.ದಂಡ.ದಂಡ ತೆರಲು ತಪ್ಪಿದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.ಎಲ್ಲ ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here