ಪುತ್ತೂರು:ಇತರರ ಹೆಸರು ಆರ್ಟಿಸಿಯಲ್ಲಿದ್ದರೂ ಸಹೋದರರೀರ್ವರು ಸೇರಿಕೊಂಡು ಸದ್ರಿ ಆಸ್ತಿಗಳ ಆಧಾರದಲ್ಲಿ ಮೋಸ, ವಂಚನೆಯಿಂದ ಸಾಲ ಪಡೆದುಕೊಂಡು ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರ ದುರುಪಯೋಗಪಡಿಸಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅವರ ತಮ್ಮ ಚಂದ್ರಶೇಖರ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರು ಗ್ರಾಮದ ಶ್ರೀ ದೇವಿ ಅನಿಲಕೋಡಿ ದಿ.ಅನಂತೇಶ್ವರ ಭಟ್ ಎಂಬವರ ಮಗಳು ಶ್ರೀಮತಿ ವಸಂತಲಕ್ಷ್ಮೀ ಯಾನೆ ವಸಂತಿ(63ವ.)ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪಡ್ನೂರು ಗ್ರಾಮದ ಸರ್ವೆ ನಂಬ್ರ 95/1,96/4,96/30,97/10,113/4,97/,97/10,96/30,113/3,96/2,95/6,95/5,95/4,96/3ಅ,95/3 ಮತ್ತು 3/1 ಹಾಗೂ ಕಬಕ ಗ್ರಾಮದ ಸರ್ವೆ ನಂಬ್ರ: 96/20ರಲ್ಲಿ ಜಮೀನನ್ನು ಹೊಂದಿದ್ದು ಸದ್ರಿ ಜಮೀನಿನಲ್ಲಿ ನನಗೆ ಮತ್ತು ನನ್ನ ತಾಯಿ, ತಮ್ಮಂದಿರಿಗೆ 31/108 ಅಂಶದ ಹಕ್ಕು ಇರುವುದಾಗಿ ಎಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ತೀರ್ಮಾನ ಆಗಿರುತ್ತದೆ. ಈ ತೀರ್ಪಿನ ವಿರುದ್ಧ ಆರೋಪಿ ಈಶ್ವರ ಭಟ್ ಪಂಜಿಗುಡ್ಡೆ 5ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯು ವಜಾಗೊಂಡಿರುತ್ತದೆ. ಸದ್ರಿ ಡಿಕ್ರಿಯ ಪ್ರಕಾರ ಆರ್ಟಿಸಿಯಲ್ಲಿ ನನ್ನ ಮತ್ತು ತಮ್ಮಂದಿರು, ತಾಯಿಯ ಹೆಸರು ನಮೂದು ಇರುತ್ತದೆ. 2022ನೇ ಮೇ ತಿಂಗಳಿನಲ್ಲಿ ಜಮೀನಿನ ದಾಖಲಾತಿಗಳನ್ನು ತಾನು ಪರಿಶೀಲಿಸಿದಾಗ ಬನ್ನೂರು ರೈತರ ಸೇವಾ ಸಹಕಾರಿ ಸಂಘ ಮತ್ತು ಕಾರ್ಪೋರೇಶನ್ ಬ್ಯಾಂಕ್ ಬೊಳ್ವಾರ್ ಶಾಖೆ (ಈಗಿನ ಯೂನಿಯನ್ ಬ್ಯಾಂಕ್)ಯಲ್ಲಿ ಸದ್ರಿ ಆಸ್ತಿಗಳ ಆಧಾರದಲ್ಲಿ ಆರೋಪಿಗಳು ತಮ್ಮ ಹೆಸರಿನಲ್ಲಿ ಸಾಲಗಳನ್ನು ಪಡೆದುಕೊಂಡಿರುವುದು ಕಂಡು ಬಂದಿರುತ್ತದೆ.ಪ್ರಸ್ತುತ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷನಾಗಿದ್ದು, ಈ ಹಿಂದೆ ನಿರ್ದೇಶಕನಾಗಿ ಹಾಗೂ ಉಪಾಧ್ಯಕ್ಷನಾಗಿ ಹಲವಾರು ವರ್ಷಗಳಿಂದ ಇದ್ದ ಈಶ್ವರ ಭಟ್ ತನ್ನ ಪ್ರಭಾವ ಬಳಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮೋಸ ಹಾಗೂ ವಂಚನೆಯಿಂದ ಸಾಲ ಪಡೆದುಕೊಂಡಿರುವುದಾಗಿದೆ. ಈ ಕುರಿತು ತಾನು ವಕೀಲರ ಮೂಲಕ ಈ ಹಿಂದೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಗೊಪಾಲಕೃಷ್ಣ ಭಟ್ ಮತ್ತು ಕಾರ್ಪೋರೇಶನ್ ಬ್ಯಾಂಕ್ ಬೊಳ್ವಾರ್ ಶಾಖೆ ಇದರ ವ್ಯವಸ್ಥಾಪಕರಾಗಿದ್ದ ಭವೇಶ್ರವರಿಗೆ ಪತ್ರ ವ್ಯವಹಾರ ಮಾಡಿದಾಗ ಅವರುಗಳೂ ಸತ್ಯವನ್ನು ಮರೆಮಾಚಿರುತ್ತಾರೆ. ಇವರೆಲ್ಲರೂ ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರ ದುರುಪಯೋಗಪಡಿಸಿದ ಅಪರಾಧ ಎಸಗಿರುತ್ತಾರೆ ಎಂದು ಶ್ರೀಮತಿ ವಸಂತಲಕ್ಷ್ಮೀ ಯಾನೆ ವಸಂತಿಯವರು ಪುತ್ತೂರು ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಅವರು ನೀಡಿರುವ ದೂರಿನ ಮೇರೆಗೆ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅವರ ಸಹೋದರ ಚಂದ್ರಶೇಖರ ಎಂಬವರ ವಿರುದ್ಧ ಪೊಲೀಸರು ಕಲಂ 217,417,419,420,463,464,465,467,468,469,471 ಜೊತೆಗೆ 34 ಐ.ಪಿ.ಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾವು ಮೋಸದಿಂದ ಸಾಲ ತೆಗೆಯಲಿಲ್ಲ -ಪಂಜಿಗುಡ್ಡೆ ಈಶ್ವರ ಭಟ್ ಸ್ಪಷ್ಟನೆ
ನಮ್ಮ ಮತ್ತು ವಸಂತಲಕ್ಷ್ಮೀಯವರ ಮೇಲೆ ಸುಮಾರು 53 ವರ್ಷಗಳಿಂದ ಸಿವಿಲ್ ವ್ಯಾಜ್ಯವಿದ್ದು ಇದೀಗ ಕೋರ್ಟ್ನಲ್ಲಿ ತನಿಖಾ ಹಂತದಲ್ಲಿದೆ. ವೈಯಕ್ತಿಕ ದ್ವೇಷದಿಂದ ನಮ್ಮ ವಿರುದ್ಧ ಈ ಸುಳ್ಳು ಆರೋಪ ಮಾಡಿರುತ್ತಾರೆ. ನಾವು ಬನ್ನೂರು ಸೊಸೈಟಿ ಮತ್ತು ಬ್ಯಾಂಕಿನಿಂದ ಯಾವುದೇ ಮೋಸದಿಂದ ಸಾಲ ತೆಗೆಯಲಿಲ್ಲ.ಇಂತಹ ಸುಳ್ಳು ಆರೋಪವನ್ನು ಹಲವಾರು ವಿಷಯಗಳಲ್ಲಿ ಮಾಡಿರುತ್ತಾರೆ. ಇದಕ್ಕೆ ನಾವು ಕಾನೂನು ಹೊರಾಟವನ್ನು ಮಾಡುತ್ತೇವೆ ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.