ಪುತ್ತೂರು:ಮೇ 10ರ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರುನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿಯವರಿಗೆ ಅವಕಾಶ ನೀಡದೇ ಇರುವುದಕ್ಕೆ ಅಸಮಾಧಾನಿತರಾಗಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಅವರು ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹೇಳಿದ್ದಾರೆ.
ಪುತ್ತೂರುನ ಮಹಿಳಾ ಕಾಂಗ್ರೆಸ್ ನಾಯಕಿಯರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಹೊರತು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ.ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿಯವರಿಗೆ ಈ ಬಾರಿ ಪಕ್ಷದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಈ ಮಹಿಳಾ ಮಣಿಗಳಿಗೆ ಸ್ವಲ್ಪ ಬೇಜಾರಾಗಿರಬಹುದು ಹೊರತು ಬೇರೇನೂ ಇಲ್ಲ, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ನಲ್ಲಿ ಮಹಿಳೆಯರನ್ನು ಸಂಘಟಿಸುವುದರಲ್ಲಿ ಶ್ರೀಮತಿ ಶಾರದಾ ಅರಸ್, ಶ್ರೀಮತಿ ವಿಶಾಲಾಕ್ಷಿ ಬನ್ನೂರು, ಶ್ರೀಮತಿ ಶುಭಮಾಲಿನಿ ಮಲ್ಲಿಯವರ ಅಪಾರ ಕೊಡುಗೆ ಇದೆ,ಪಕ್ಷದ ಪ್ರತಿಯೊಂದು ಸಂಘಟನಾ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.ಅವರು ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.
ಈಗಾಗಲೇ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ, ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದ ನಾನು ಹಾಗೂ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿಯವರು ಸೇರಿ ಸದರಿ ಮಹಿಳಾ ನಾಯಕಿಯರಲ್ಲಿ ಮಾತುಕತೆ ನಡೆಸಿರುತ್ತೇವೆ, ಕೆಲವೇ ದಿನಗಳಲ್ಲಿ ಅವರು ಚುನಾವಣೆ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.