ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್- ಗೈಡ್ ವಾರ್ಷಿಕ ಶಿಬಿರವು ಕೆದಿಲ ಗಾಂಧಿನಗರ ಶ್ರೀದೇವಿ ಭಜನಾ ಮಂದಿರದಲ್ಲಿ ನಡೆಯಿತು. ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿಯಾದ ಮಹೇಶ್ ಜೆ. ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲೆಯ ಆಡಳಿತಾಧಿಕಾರಿಯಾದ ರವೀಂದ್ರ ಡಿ. ರವರು ಮಾತನಾಡಿ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಸ್ಕೌಟ್ ಗೈಡ್ ಚಟುವಟಿಕೆಗಳು ಸಾಮಾಜಿಕ ಬದುಕಿನ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ ಎಂದರು. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಕೆದಿಲ ಪರಿಸರದಲ್ಲಿರುವ ಸತ್ವಂ ಜಲನಿಧಿಗೆ ಹಾಗೂ ಅಲ್ಲಿನ ಅಕ್ಕಿಮಿಲ್ಲಿಗೆ ಭೇಟಿ ನೀಡಿದರು. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಕಾಣಸಿಗುವ ತೆಂಗಿನಗರಿಯ ತಟ್ಟಿ, ಪೊರಕೆ, ವಿವಿಧ ಆಟಿಕೆಗಳು ಹಾಗೂ ಅಡಿಕೆ ಹಾಳೆಯಿಂದ ಬೀಸಣಿಗೆ ಮೊದಲಾದವುಗಳನ್ನು ತಯಾರಿಸಲು ಕಲಿತರು. ಹಳ್ಳಿಯ ಹೊರಾಂಗಣ ಆಟಗಳನ್ನು ಆಡಿಸಲಾಯಿತು. ಶಿಬಿರದ ಭಾಗವಾಗಿ ಸ್ಕೌಟ್- ಗೈಡ್ ವಿದ್ಯಾರ್ಥಿಗಳಿಗೆ ಬೆಂಕಿ ಬಳಸಿ ಅಡುಗೆ ತಯಾರಿ ಮತ್ತು ಕಬ್- ಬುಲ್ ಬುಲ್ ವಿದ್ಯಾರ್ಥಿಗಳಿಗೆ ಬೆಂಕಿ ಬಳಸದೆ ಅಡುಗೆ ತಯಾರಿಸುವ ಚಟುವಟಿಕೆಯನ್ನು ಮಾಡಿಸಲಾಯಿತು. ಸಂಜೆಯ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ತರಬೇತುದಾರರಾದ ಗೋಪಾಲಕೃಷ್ಣ ನೇರಳಕಟ್ಟೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶಿಬಿರಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾಗುವಂತೆ ವಿವಿಧ ವಿನೋದಾವಳಿಗಳನ್ನು ನಡೆಸಿಕೊಟ್ಟರು.
ಶಿಬಿರಾಗ್ನಿ:
ರಾತ್ರಿ ನಡೆದ ಶಿಬಿರಾಗ್ನಿ ಕಾರ್ಯಕ್ರಮವನ್ನು ಭಜನಾಮಂದಿರದ ಅಧ್ಯಕ್ಷರಾದ ಚೆನ್ನಪ್ಪ ಗೌಡರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಶಾಲೆಯ ಸಂಚಾಲಕರಾದ ಜೆ.ಪ್ರಹ್ಲಾದ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಸ್ವಯಂಶಿಸ್ತನ್ನು ಅಳವಡಿಸಿಕೊಳ್ಳಲು ಮತ್ತು ಸಾಮಾಜಿಕ ಸಾಮರಸ್ಯದಿಂದ ಬದುಕಲು ಸ್ಕೌಟ್ -ಗೈಡ್ ಚಟುವಟಿಕೆಗಳು ಸಹಕಾರಿ ಎಂದರು. ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಎಲ್ಲಾ ಶಿಬಿರಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ., ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ ಶೆಟ್ಟಿ,ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮರುದಿನ ಬಿ ಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆಯನ್ನು ಪೂರೈಸಿದ ನಂತರ ಭಜನಾಮಂದಿರದ ಆವರಣದಲ್ಲಿ ಕಹಿಬೇವಿನ ಗಿಡವನ್ನು ವಿದ್ಯಾರ್ಥಿಗಳು ನೆಡುವುದರ ಮೂಲಕ ವಾರ್ಷಿಕ ಶಿಬಿರ ಸಂಪನ್ನಗೊಂಡಿತು. ಈ ಶಿಬಿರದಲ್ಲಿ 78 ಶಿಬಿರಾರ್ಥಿಗಳು ಹಾಗೂ ಸಂಸ್ಥೆಯ ಎಲ್ಲಾ ಸ್ಕೌಟ್ -ಗೈಡ್ ಶಿಕ್ಷಕರು ಭಾಗವಹಿಸಿದ್ದರು.