- ನಳಿನ್ ಕುಮಾರ್ ಕಟೀಲ್,ತೇಜಸ್ವಿಸೂರ್ಯ, ಶೃತಿ ಸಹಿತ ಪಕ್ಷದ ಹಲವು ನಾಯಕರು ಭಾಗಿ
- ಕೇಸರಿ ಪೇಟಾ ಧರಿಸಿದ್ದ ಮಹಿಳೆಯರು, ಶಲ್ಯ ಧರಿಸಿದ್ದ ಕಾರ್ಯಕರ್ತರು
- ಚೆಂಡೆ, ಗೊಂಬೆನೃತ್ಯ ವಿಶೇಷ ಆಕರ್ಷಣೆ
- ಪುತ್ತೂರಿನಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ-ತೇಜಸ್ವಿ ಸೂರ್ಯ
- ಮಹಿಳೆಗೆ ಭಾರತದ ಊರುಗೋಲು ಆಗಲು ಶಕ್ತಿ ನೀಡಿದ್ದು ಬಿಜೆಪಿ-ಶೃತಿ
- ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನನಸಾಗುತ್ತಿದೆ-ಪ್ರತಾಪ್ಸಿಂಹ ನಾಯಕ್
- ಪುತ್ತೂರಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ-ಆಶಾ ತಿಮ್ಮಪ್ಪ
- ಬಿಜೆಪಿಯ ಭದ್ರಕೋಟೆಯಲ್ಲಿ ಯಾವುದೇ ಸವಾಲು ಸ್ವೀಕರಿಸಲು ಬದ್ಧ-ಸಂಜೀವ ಮಠಂದೂರು
- ಅಭೂತಪೂರ್ವ ಕಾರ್ಯಕ್ರಮ-ಸಾಜ ರಾಧಾಕೃಷ್ಣ ಆಳ್ವ
ಪುತ್ತೂರು:ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಏ.20ರಂದು ನಾಮಪತ್ರ ಸಲ್ಲಿಸಿದರು.ಬೃಹತ್ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸಿದ ಅವರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಗಿರೀಶ್ನಂದನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮೊದಲು ಅವರು ಪಕ್ಷದ ಪ್ರಮುಖರು, ಕಾರ್ಯಕರ್ತರೊಂದಿಗೆ ಬೆಳಿಗ್ಗೆ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ, ಮಹಾಮಾಯಿ ದೇವಸ್ಥಾನ, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ಜನಪ್ರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಜೈಕಾರ ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಚಲನಚಿತ್ರ ನಟಿ ಬಿಜೆಪಿ ನಾಯಕಿ ಶೃತಿ, ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸಹಿತ ಪಕ್ಷದ ಹಲವು ನಾಯಕರು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪಾದಯಾತ್ರೆಯಲ್ಲಿದ್ದರು. ಪಾದಯಾತ್ರೆಯ ಆರಂಭದಲ್ಲಿ ಬಂದೋಬಸ್ತ್ ನಿರತ ಅರೆ ಮಿಲಿಟರಿ ಪಡೆ, ಹಿಂದಿನಿಂದ ಮೈಕ್ ಅನೌನ್ಸ್ಮೆಂಟ್ ವಾಹನ, ಕೇಸರಿ ಪೇಟ ಧರಿಸಿದ್ದ ಮಹಿಳೆಯರು, ಶಲ್ಯ ಧರಿಸಿದ್ದ ಕಾರ್ಯಕರ್ತರು, ವಿಟ್ಲದ ಗೊಂಬೆ ಕುಣಿತ, ಚೆಂಡೆ ಸದ್ದು, ನಾಸಿಕ್ ಬ್ಯಾಂಡ್ ಗಮನ ಸೆಳೆಯಿತು. ಪಾದಯಾತ್ರೆಯು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಟು ಮುಖ್ಯರಸ್ತೆಯಾಗಿ ಸಾಗಿ ಕೋರ್ಟ್ ರಸ್ತೆಯಾಗಿ ಕಿಲ್ಲೆಮೈದಾನದಲ್ಲಿ ಸಮಾವೇಶಗೊಂಡಿತ್ತು. ಈ ನಡುವೆಯೇ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ನೇರವಾಗಿ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಮಂಗಳೂರು ವಿಭಾಗ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಜೊತೆಗಿದ್ದರು. ಪಾದಯಾತ್ರೆ ಕಿಲ್ಲೆ ಮೈದಾನದಕ್ಕೆ ಆಗಮಿಸಿದ ಬಳಿಕ ಅಲ್ಲಿ ಬೃಹತ್ ಪ್ರಚಾರ ಸಭೆ ನಡೆಯಿತು.
ಪುತ್ತೂರಿನಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ: ಸಂಸದ, ಬಿಜೆಪಿ ಯುವ ಮೋರ್ಛಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಹಿಂದೆ ಇದೇ ಕ್ಷೇತ್ರದಲ್ಲಿ ಸಂಜೀವ ಮಠಂದೂರು ನಾಮಪತ್ರ ಸಲ್ಲಿಕೆ ವೇಳೆ ಬಂದಿದ್ದೆ.ಅದೇ ಪ್ರೀತಿ ವಿಶ್ವಾಸ ಈ ಬಾರಿಯೂ ತೋರಿಸಿದ್ದೀರಿ. ಹಾಗಾಗಿ ಅವತ್ತು ಸಂಜೀವ ಮಠಂದೂರು ಅವರಿಗೆ 20 ಸಾವಿರ ಮತಗಳ ಅಂತರದಿಂದ ಗೆಲುವು ತಂದು ಕೊಟ್ಟಂತೆ ಈ ಬಾರಿ ಅಶಾ ತಿಮ್ಮಪ್ಪ ಅವರ ನಾಮಪತ್ರ ಸಲ್ಲಿಕೆ ರ್ಯಾಲಿ ನೋಡಿ ನೂರಕ್ಕೆ ನೂರು ವಿಶ್ವಾಸವಿದೆ. ಈ ಬಾರಿ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಅತ್ಯಂತ ನಿಷ್ಠಾವಂತ ಕಾರ್ಯಕರ್ತರ ಪಡೆ ಹೇಗಿದೆ ಎಂದರೆ, ಇಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಮತದಾನ ಕೇಂದ್ರಕ್ಕೆ ಕರೆದುಕೊಂಡು ಹೋದರು ಕೂಡಾ ಬಿಜೆಪಿಯ ಕಮಲ ಚಿಹ್ನೆಗೆ ಮತ ಹಾಕುವ ಕಾರ್ಯಕರ್ತರು ಇದ್ದಾರೆ.ಕೇಸರಿ ರಕ್ತ ತರುವ ಕಾರ್ಯಕರ್ತರ ಪಡೆಯೂ ಇದೆ. ಇದು ಬಿಜೆಪಿ ಆಸ್ತಿ. ದಕ್ಷಿಣದ ಉಳ್ಳಾಲ ಸೇರಿದಂತೆ ಬಿಜೆಪಿ ಎಲ್ಲಾ ಕಡೆ ಈ ಬಾರಿ ಜಯಭೇರಿ ಗಳಿಸಬೇಕಾಗಿದೆ. ನಮಗೆ ಒಂದೊಂದು ಸೀಟು ಕೂಡಾ ಬಹಳ ಮುಖ್ಯ. ಸುಭದ್ರ ಮತ್ತು ಸಂಪೂರ್ಣ ಬಹುಮತಕ್ಕೆ ಒಂದೊಂದು ಮತವೂ ಅಗತ್ಯವಿದೆ. ಅಭಿವೃದ್ದಿಗೆ ಸ್ಪೀಡ್ ಬ್ರೇಕರ್ ಆಗದಂತೆ ನೋಡಬೇಕು. ನಾಮಪತ್ರ ರ್ಯಾಲಿ ನೋಡುವಾಗ ಮೇ 13ರ ವಿಜಯಯೋತ್ಸವ ಎಷ್ಟು ವಿಜ್ರಂಭಣೆಯಲ್ಲಿ ಆಗಲಿದೆ ಎಂಬುದು ಗೊತ್ತಾಗುತ್ತಿದೆ ಎಂದ ತೇಜಸ್ವಿಸೂರ್ಯ ಅವರು ಕೇಸರಿ ಶಾಲನ್ನು ಹಿಡಿದು ಬಿಜೆಪಿಗೆ ಜೈಕಾರ ಹಾಕುವಂತೆ ವಿನಂತಿಸಿದಾಗ ಸಭೆಯಲ್ಲಿ ನೆರೆದ ಸಾವಿರಾರು ಕಾರ್ಯಕರ್ತರು ಕೇಸರಿ ಶಾಲನ್ನು ಮೇಲೆತ್ತಿ ತಿರುಗಿಸಿ ಜೈಕಾರ ಹಾಕಿದರು.
ಮಹಿಳೆಗೆ ಭಾರತದ ಊರುಗೋಲು ಆಗಲು ಶಕ್ತಿ ನೀಡಿದ್ದು ಬಿಜೆಪಿ ಪಕ್ಷ: ಬಿಜೆಪಿ ನಾಯಕಿಯೂ ಆಗಿರುವ ಚಲನಚಿತ್ರ ನಟಿ ಶೃತಿ ಅವರು ಮಾತನಾಡಿ, ಮಹಿಳೆಯನ್ನು ಪೂಜಿಸುವ ಏಕೈಕ ದೇಶ ಭಾರತ,ಭಾರತ ಮಹಿಳೆಗೆ ಪೂಜ್ಯಸ್ಥಾನ ನೀಡಿದೆ.ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮಹಿಳೆಯರಿಗೆ ಪ್ರಧಾನ ಸ್ಥಾನ ಕೊಟ್ಟದ್ದು ಬಿಜೆಪಿ ಮಾತ್ರ. ಭಾರತವನ್ನು ರಕ್ಷಣೆ ಮಾಡುವ ಶಕ್ತಿ ಮಹಿಳೆಗಿದೆ.ಅದಕ್ಕಾಗಿ ನಿರ್ಮಲಾಸೀತಾರಾಮ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಾಧಾನ್ಯತೆ ಕೊಟ್ಟ ಪಕ್ಷವಿದು.ಇವತ್ತು ಸ್ತ್ರೀವಾದಿ ಪುರುಷ ಅಂಬೇಡ್ಕರ್ ಮಾತ್ರವಲ್ಲ ಅವರ ಜೊತೆ ನರೇಂದ್ರ ಮೋದಿಯವರೂ ಸೇರಿಕೊಂಡಿದ್ದಾರೆ. ಹಾಗಾಗಿ ಇವತ್ತು ಬಿಜೆಪಿ ಕೇವಲ ರಾಜಕೀಯ ಪಕ್ಷವಾಗಿ ಉಳಿಯದೆ ಎಲ್ಲಾ ಮಹಿಳೆಯರಿಗೆ ತವರಿನ ಪಕ್ಷವಾಗಿ ಮಾರ್ಪಟ್ಟಿದೆ ಎಂದರು. ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮೀ ಯೋಜನೆ, ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಗೆ ಮಹತ್ವವಿದೆ.ಆಗಿನ ಕಾಲದ ಮಹಿಳೆಯರು ನಮಗಿರುವ ಸವಾಲಿಗಿಂತಲೂ ಹೆಚ್ಚು ಸವಾಲನ್ನು ನೋಡಿದವರು. ಕಿತ್ತೂರು ರಾಣಿಯಿಂದ ಹಿಡಿದು ಅಬ್ಬಕ್ಕನ ತನಕವೂ ಅವರು ದೇಶ ರಕ್ಷಣೆ ಮಾಡಲು ಹೋರಾಟ ಮಾಡಿದ್ದಾರೆ ಹೊರತು ತಮ್ಮನ್ನು ರಕ್ಷಣೆ ಮಾಡಲು ಹೋರಾಟ ಮಾಡಿಲ್ಲ. ಅಂತಹ ಇತಿಹಾಸ ಇರುವ ನಾವು ಇವತ್ತು ನಮಗಾಗಿ ಹೋರಾಟ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಶೃತಿಯವರು ಅವತ್ತು ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಕತ್ತಿ ಹಿಡಿದು ಯುದ್ದ ಮಾಡಬೇಕಾಗಿತ್ತು. ಆದರೆ ಇವತ್ತಿನ ಹೆಣ್ಣು ಮಕ್ಕಳು ಕನಿಷ್ಟ ಒಂದು ಸೌಟ್ ಹಿಡಿದು ಗಲಾಟೆ ಮಾಡಲ್ವ ಎಂದರಲ್ಲದೆ ಇವತ್ತು ಹೆಣ್ಮಕ್ಕಳು ಕತ್ತಿ ಹಿಡಿದು ಕುದುರೆ ಏರಿ ಯುದ್ದ ಮಾಡಬೇಕಾಗಿಲ್ಲ.ನಂಬಿಕೆ ಅನ್ನುವ ಕುದುರೆ ಏರಿ ವಿದ್ಯಾಭ್ಯಾಸ ಅನ್ನುವ ಆಯುಧವನ್ನು ಹಿಡಿದು ಹೋರಾಟ ಮಾಡಬೇಕಾಗಿದೆ ಎಂದರು.ಪುತ್ತೂರಿನಲ್ಲಿ ಆಶಾಕ್ಕ ಕಳೆದ ೪೫ ವರ್ಷಗಳಿಂದ ಪಕ್ಷಕ್ಕಾಗಿ ಸೇವೆ ಮಾಡಿದವರು.ಅವರು ಇರುವ ತನ್ನೊಬ್ಬ ಮಗನನ್ನೂ ಪಕ್ಷಕ್ಕೆ ಕೊಟ್ಟ ಅತ್ಯಂತ ಶ್ರೇಷ್ಟ ಮಹಿಳೆ ಎಂದು ಹೇಳಿದ ಶೃತಿಯವರು, ರಾಜ್ಯದಲ್ಲೇ ಒಂದೇ ಜಿಲ್ಲೆಯಿಂದ ಎರಡು ಮಹಿಳೆಗೆ ಅವಕಾಶ ಕೊಟ್ಟ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ.ಹಾಗಾಗಿ ಭಾರತದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕಿ ಎಂದರು.
ರಾಜಕಾರಣ ಸೇಡಿಗಾಗಿ ಅಲ್ಲ ಸೇವೆಗಾಗಿ ಇರಬೇಕು: ಧರ್ಮದ ಹೆಸರಿನಲ್ಲಿ ಕುರ್ಚಿಗಾಗಿ ಆಸೆ ಪಟ್ಟು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಣ್ಣಾ ನೀನಾಗಲಿ, ಬೇರೆ ಯಾರೇ ಆಗಲಿ ಸೇಡಿಗಾಗಿ ರಾಜಕಾರಣಕ್ಕೆ ಬರಬಾರದು. ಸೇವೆಗಾಗಿ ರಾಜಕಾರಣಕ್ಕೆ ಬರಬೇಕೆಂದು ಶೃತಿ ಅವರು ಅಶೋಕ್ ಕುಮಾರ್ ರೈ ಅವರ ಹೆಸರು ಉಲ್ಲೇಖಿಸದೆ ಟಾಂಟ್ ಕೊಟ್ಟರು. ಇಲ್ಲಿರುವ ಎಲ್ಲಾ ಪ್ರಜ್ಞಾವಂತ ಮತದಾರರು ಮತ್ತೊಂದು ಅತಂತ್ರ ಸರಕಾರ ಕೊಡಬೇಡಿ. ಸ್ಥಿರ ಸರಕಾರ ಕೊಡಿ ಎಂದು ಶೃತಿ ಹೇಳಿದರು.
ಸುಳ್ಯದಲ್ಲಿ ಗೆಲುವು ನಿಶ್ಚಿತ, ಅಂತರ ಚಿಂತನೆ ಮಾಡಬೇಕಾಗಿದೆ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಕಾರ್ಯಕರ್ತರ ಶಕ್ತಿಯಿಂದ ಬಿಜೆಪಿ ಗೆಲುವು ಖಂಡಿತಾ. ಸುಳ್ಯ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ನಿಶ್ಚಿತ. ಆದರೆ ಅಂತರ ಎಷ್ಟು ಎಂದು ಚಿಂತನೆ ಮಾಡಬೇಕಾಗಿದೆ. ಇವತ್ತು ಇಲ್ಲಿ ಕೂತವರು ಬರೇ ಆಶಕ್ಕನಿಗೆ ಮಾತ್ರ ಮತ ಕೇಳುವುದಲ್ಲ. ನಮ್ಮ ವ್ಯಾಪ್ತಿಯ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೂ ಅಲ್ಲಲ್ಲಿರುವ ನಮ್ಮ ಸಂಬಂಧಿಕರ ಮೂಲಕ, ಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡಬೇಕು.ಎಲ್ಲರ ಮನವನ್ನು ಬಿಜೆಪಿಗೆ ಪರಿವರ್ತನೆ ಮಾಡಬೇಕೆಂದು ಹೇಳಿದರಲ್ಲದೆ, ಈ ಹಿಂದೆ ನಾವು ಪುರುಷರ ಹಿಂದೆ ವಿಧಾನಸೌಧಕ್ಕೆ ಹೋಗುತ್ತಿದ್ದೆವು. ಮುಂದಿನ ದಿನ ಮಹಿಳೆಯ ಹಿಂದೆ ಪುರುಷರು ವಿಧಾನ ಸೌಧಕ್ಕೆ ಬರುವ ಹಾಗೆ ಆಗಲಿ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನನಸಾಗುತ್ತಿದೆ: ವಿಧಾನ ಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್ ಅವರು ಮಾತನಾಡಿ ಬದಲಾದ ಭಾರತವನ್ನು ನಾವು ನೋಡುತ್ತಿದ್ದೇವೆ.ಕರ್ನಾಟಕದ ಚುನಾವಣೆಯನ್ನು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿ ನೋಡಬಾರದು ಎಂದು ವಿನಂತಿ ನನ್ನದು.ಬಿಜೆಪಿ ಮತ್ತು ನರೇಂದ್ರ ಮೋದಿಯವರು ಭಾರತ ಚಿತ್ರಣವನ್ನು ಬದಲಾಯಿಸುತ್ತಿದ್ದಾರೆ.ಬಿಜೆಪಿಯೇ ಭರವಸೆ ಎಂದು ಕೋಟ್ಯಾಂತರ ಜನರು ನಂಬಿದ್ದಾರೆ.ಬಿಜೆಪಿ ಚುನಾವಣೆಗೆ ನಿಲ್ಲುತ್ತದೆ ಎಂದಾದರೆ ಕೇವಲ ಒಂದಷ್ಟು ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಮಾಡಿ ಯಾವುದೋ ಅಧಿಕಾರಕ್ಕಾಗಿ ಅಲ್ಲ.ಕಾಂಗ್ರೆಸ್ನ ಜೊತೆಗೆ ಬಿಜೆಪಿಯನ್ನು ತುಲನೆ ಮಾಡಿದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಯಾರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೋ ಅವರೆಲ್ಲರ ಕನಸಿನ ಭಾರತ ನನಸಾಗುವಂತಹ ಒಂದು ಕ್ಷಣದಲ್ಲಿ ನಾವಿದ್ದೇವೆ ಎಂದರು.
ಬಿಜೆಪಿಯ ಭದ್ರಕೋಟೆಯಲ್ಲಿ ಯಾವುದೇ ಸವಾಲನ್ನು ಸ್ವೀಕರಿಸಲು ಬದ್ಧ: ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸಂಜೀವ ಮಠಂದೂರು,ಕಳೆದ 5 ವರ್ಷದಲ್ಲಿ ನನಗೆ ಆಶೀರ್ವಾದ ಮಾಡಿ ನನ್ನನ್ನು ಮನೆಯ ಮಗನನ್ನಾಗಿ ನೋಡಿದ ಕಾರ್ಯಕರ್ತ ದೇವರಿಗೆ ಮತದಾರ ಬಂಧುಗಳಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾತು ಆರಂಭಿಸಿದರು. ಇವತ್ತು ನರೇಂದ್ರ ಮೋದಿ ನೇತೃತ್ವದಲ್ಲಿ ಭವ್ಯ ಭಾರತವನ್ನು ನೋಡುತ್ತಿದ್ದೇವೆ.ಜಗತ್ತಿನಲ್ಲಿ ಭಾರತ ರಾಷ್ಟ್ರೋತ್ಥಾನ ಆಗಬೇಕಾದರೆ ಪುತ್ತೂರು ಕೂಡಾ ಉತ್ಥಾನ ಆಗಬೇಕೆಂಬ ಘೋಷಣೆ ಅಡಿಯಲ್ಲಿ ನವ ಭಾರತಕ್ಕೆ ನವ ಕರ್ನಾಟಕ, ನವ ಪುತ್ತೂರು ಆಗಬೇಕೆಂದು ಕಳೆದ 5 ವರ್ಷದಿಂದ ಸುಮಾರು ರೂ.1500 ಕೋಟಿ ಅನುದಾನವನ್ನು ನೀಡಿ ನಿಮ್ಮ ಮನೆಬಾಗಿಲಿಗೆ ಸರಕಾದಿಂದ ಸೌಲಭ್ಯ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.ಅನ್ನ ಆರೋಗ್ಯ ಅಕ್ಷರ ಇದು ಧ್ಯೇಯ, ಪ್ರತಿಯೊಬ್ಬ ನಾಗರಿಕನು ಆತ್ಮನಿರ್ಭರದಿಂದ ನೋಡಬೇಕು ಎಂಬ ಕಲ್ಪನೆಯ ಅಡಿಯಲ್ಲಿ ಹಲವು ಯೋಜನೆ ಸಾಕಾರಗೊಂಡಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಹಾಕಿಕೊಂಡ ಅಭಿವೃದ್ಧಿ ಕಾರ್ಯಕ್ರಮ, ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಂಡ ಆತ್ಮನಿರ್ಭರ ಕಾರ್ಯಕ್ರಮಗಳು ಇವತ್ತು ಜನಸಾಗರ ನೋಡಿದಾಗ ಮತ್ತೊಮ್ಮೆ ಬಿಜೆಪಿಗೆ ನೀವೆಲ್ಲ ಆಶೀರ್ವಾದ ಮಾಡುತ್ತೀರಿ ಎಂಬುದು ನಿಶ್ಚಯವಾಗಿದೆ ಎಂದು ಹೇಳಿದ ಮಠಂದೂರು, ನಮ್ಮೆಲ್ಲರ ಅಕ್ಕ ಆಶಾ ತಿಮ್ಮಪ್ಪ ಅವರು ಆಶಾ ಕಿರಣವಾಗಿ ಸಾಬೀತು ಮಾಡಲಿದ್ದೀರಿ.ನನ್ನನ್ನು 20 ಸಾವಿರ ಮತಗಳಿಂದ ಗೆಲ್ಲಿಸಿದಂತೆ ಆಶಾ ಅಕ್ಕನವರನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಪುತ್ತೂರು ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಭದ್ರಕೋಟೆಯಾಗಿ ಯಾವುದೇ ಸವಾಲನ್ನು ಸ್ವೀಕಾರ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತೋರಿಸಿಕೊಡುವ ಕೆಲಸವನ್ನು ನಾವೆಲ್ಲ ಮಾಡಬೇಕೆಂದು ಹೇಳಿದರು.
ಅಭೂತಪೂರ್ವ ಕಾರ್ಯಕ್ರಮ: ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಸ್ವಾಗತಿಸಿ ಮಾತನಾಡಿ, ಇವತ್ತು ಪುತ್ತೂರು ಜಾತ್ರೆಯ ಸಂಪನ್ನದ ಬಳಿಕ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಅಭಿನಂದನೆ, ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಮಂಗಳೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎಸ್ ಅಪ್ಪಯ್ಯ ಮಣಿಯಾಣಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ್, ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯೆ ಗೌರಿ ಬನ್ನೂರು ವಂದೇ ಮಾತರಂ ಹಾಡಿದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು.ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ಬಿಜೆಪಿ ಹಿರಿಯರು ನಾಯಕರು, ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
ಪುತ್ತೂರಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ:
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮಾತನಾಡಿ ಶ್ರದ್ಧೆ, ಶಿಸ್ತು, ಅನುಶಾಸನ, ರಾಷ್ಟ್ರೀಯತೆ ಇದನ್ನು ನರನಾಡಿಗಳಲ್ಲಿ ತುಂಬಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೆರಳಲ್ಲಿ ಬೆಳೆದವಳು ನಾನು.ಬಿಜೆಪಿಯ ಹಿರಿಯರಾದ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರ ಜೀವನವೇ ನನಗೆ ಪ್ರೇರಣೆ. ಮೂರು ದಶಕಗಳ ಹಿಂದಿನ ಭಾರತ ರಾಜಕೀಯವನ್ನು ಹಿಂತಿರುಗಿ ನೋಡಿದರೆ, ಪುತ್ತೂರಿನಲ್ಲಿ ಗೂಂಡಾಗಳ ಅಟ್ಟಹಾಸ.ಅಲ್ಲಲ್ಲಿ ದೊಂಬಿ ಗಲಾಟೆಗಳು, ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದುದು ನಾವು ತಿಳಿದ ವಿಚಾರ.ಇದಕ್ಕೆ ಸವಾಲಾಗಿ ಒಂದು ಬಾರಿ ರಾಮ್ಭಟ್ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಪಡೆದ ಬಳಿಕ ಯಾವುದೇ ಘಟನೆಗಳು ಪುತ್ತೂರು,ಸುಳ್ಯದಲ್ಲಿ ನಡೆದಿಲ್ಲ. ಮುಂದಿನ ದಿನ ಡಿ.ವಿ.ಸದಾನಂದ ಗೌಡ, ಮಲ್ಲಿಕಾಪ್ರಸಾದ್, ಸಂಜೀವ ಮಠಂದೂರು ಅವರೆಲ್ಲರ ಶಾಸಕತ್ವದ ಅವಧಿಯಲ್ಲಿ ಪುತ್ತೂರಿನಲ್ಲಿ ಉತ್ತಮ ರೀತಿಯ ಆಡಳಿತ ನಡೆದಿರುವುದು ಹೆಮ್ಮೆ ಅನಿಸುತ್ತಿದೆ. ಪ್ರತಿ ಬಾರಿ ನಾವು ಚುನಾವಣೆಯಲ್ಲಿ ಸವಾಲುಗಳನ್ನು ಎದುರಿಸಿದ್ದೇವೆ. ನಮಗೆ ಹಿಂದುತ್ವದ ರಾಷ್ಟ್ರೀಯತೆಯ ಆಧಾರದಲ್ಲಿ ಕೆಲಸ ಮಾಡುವ ಜನಸ್ನೇಹಿತ ಸರಕಾರ ಬೇಕಾಗಿದೆ.ಭಯಮುಕ್ತ ಸಾಮರಸ್ಯದ ಸ್ವಾಭಿಮಾನದ ಸಮಾಜ ನಿರ್ಮಾಣ ನಮ್ಮ ಸಂಘಟನೆಯ ಧ್ಯೇಯವಾಕ್ಯ. ಅದರಲ್ಲಿ ಹಲವಾರು ಯುವಕರು, ತರುಣರ ದೃಢ ಸಂಕಲ್ಪದಿಂದ, ಕಾರ್ಯಕರ್ತರ ಹುಮ್ಮಸ್ಸಿನಿಂದ ಮತ್ತೊಮ್ಮೆ ಪುತ್ತೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿ ಕೆಲಸವನ್ನು ಎಲ್ಲರೂ ಮಾಡುತ್ತೀರಿ ಎಂದು ವಿಶ್ವಾಸವಿದೆ. ಮುಂದೆ ಹಿಂದುಗಳಿಗೆ ಯಾವುದೇ ಸಮಸ್ಯೆ ಉಂಟಾದರೂ ಈ ಆಶಾ ತಿಮ್ಮಪ್ಪ ಎಷ್ಟು ಹೊತ್ತಿಗಾದರೂ ಖಂಡಿತಾ ನಿಮ್ಮ ರಕ್ಷಣೆಗೆ ಬರುತ್ತೇನೆ. ಆ ಸಂದರ್ಭದಲ್ಲಿ ನನ್ನಿಂದ ಏನು ಆಗಬೇಕೋ ಅದನ್ನು ನಾನು ಮಾಡುತ್ತೇನೆ.ನಮ್ಮ ಪಾರ್ಟಿ ಇರುವುದೇ ಹಿಂದುತ್ವಕ್ಕೋಸ್ಕರ. ಹಿಂದುತ್ವ ಉಳಿದಾಗ ದೇಶ ಉಳಿಯುತ್ತದೆ. ದೇಶ ಉಳಿದಾಗ ಸಂಸ್ಕೃತಿ ಉಳಿಯುತ್ತದೆ. ಹಲವಾರು ವರ್ಷದಿಂದ ಜನಪ್ರತಿನಿಧಿಯಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇನೆ.ಪುತ್ತೂರಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮಾಡುವಲ್ಲಿ ಖಂಡಿತಾ ನಾನು ಯಶಸ್ವಿಯಾಗುತ್ತೇನೆ.ಈ ನಿಟ್ಟಿನಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ಅವರು ವಿನಂತಿಸಿದರು.
ಅಶೋಕ್ ಕುಮಾರ್ ರೈಯವರ ಸವಾಲು ಸ್ವೀಕರಿಸಲು ಸಿದ್ದ
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ನಾಮಪತ್ರ ಸಲ್ಲಿಸಿ, ಮಾಡಿದ್ದ ಭಾಷಣದಲ್ಲಿ ಹೇಳಿರುವ ಮಾತಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು. ಅಶೋಕ್ ಕುಮಾರ್ ರೈ ಅವರು, ನಾನು ಬಿಜೆಪಿಯವರನ್ನು ನೋಡಿಕೊಳ್ಳಬೇಕು ಅಂತಲೇ ಕಾಂಗ್ರೆಸ್ಸಿಗೆ ಬಂದಿರುವುದು ಎಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಅವರ ಉದ್ದೇಶವಲ್ಲ, ಬಡವರ ಕಷ್ಟವನ್ನು ಹೋಗಲಾಡಿಸುವ ಉದ್ದೇಶವಿಲ್ಲ.ಯುವಕರಿಗೆ ಉದ್ಯೋಗ ಕೊಡಿಸುವ ಚಿಂತನೆ ಇಲ್ಲ. ಕ್ಷೇತ್ರದ ಎಲ್ಲಾ ಜನರು ಸಂಘರ್ಷವಿಲ್ಲದೆ ನೆಮ್ಮದಿಯಿಂದ ಬದುಕಬೇಕೆಂಬ ಹಂಬಲವಿಲ್ಲ. ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಬೇಕೆಂಬ ಬದ್ಧತೆ ಇಲ್ಲ.ಈ ಭಾಗದಲ್ಲಿ ದೇವಸ್ಥಾನ, ದೈವಸ್ಥಾನ ಅಭಿವೃದ್ಧಿ ಪಡಿಸಿ ಪರಂಪರೆಯನ್ನು ಮತ್ತಷ್ಟು ಗಟ್ಟಿ ಮಾಡಬೇಕೆಂಬ ಉದ್ದೇಶವಿಲ್ಲ.ಹಿಂದೆಂದು ಕೂಡಾ ಪಿಎಫ್ಐ ಅಟ್ಟಹಾಸಗಳನ್ನು ತಡೆಗಟ್ಟುವ ಉದ್ದೇಶವಿಲ್ಲ. ಅವರ ಉದ್ದೇಶವನ್ನು ಅವರೇ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಬಿಜೆಪಿಗೆ ಬುದ್ದಿ ಕಲಿಸಲು ಚುನಾವಣೆಗೆ ನಿಂತಿರುವುದಾಗಿ ಹೇಳಿಕೊಂಡಿದ್ದಾರೆ. ಬಿಜೆಪಿಗೆ, ವಿಶ್ವದ ಅತಿ ದೊಡ್ಡ ಕಾರ್ಯಕರ್ತರ ಪಡೆಗೆ ಬುದ್ದಿಕಲಿಸಲು ಹೊರಟಿದ್ದಾರೆ.ನನ್ನ ನಿಮ್ಮ ಇಡೀ ಪಕ್ಷದ ಮತ್ತು ಸ್ವಾಭಿಮಾನದ ಸವಾಲಿದು.ತುರ್ತು ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರನ್ನು ಜೈಲಿಗೆ ಹಾಕಿದಾಗ, ಗೋಲಿಬಾರ್ಗಳಾದಾಗ ಎಲ್ಲಾ ತ್ಯಾಗಗಳನ್ನು ಮಾಡಿ ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮಾಡಿದ, ಅಯೋಧ್ಯೆಯಲ್ಲಿ ರಾಮಮಂದಿರ ವಿವಾದಕ್ಕೆ ತಾರ್ಕಿಕ ಅಂತ್ಯ ತೋರಿಸಿದ, ನಮ್ಮ-ನಿಮ್ಮಂಥ ಯುವಕರಿಗೆ ಮಾರ್ಗದರ್ಶನ ನೀಡಿ, ರೈಲ್ವೇಯಲ್ಲಿ ಚಹಾ ಮಾರುವ ವ್ಯಕ್ತಿಯೂ ದೇಶದ ಪ್ರಧಾನಿ ಆಗಬಹುದು ಎಂದು ತೋರಿಸಿದ ಬಿಜೆಪಿಗೆ ಅವರು ಸವಾಲು ಹಾಕಿದ್ದಾರೆ.ಇವರ ಸವಾಲು ಸ್ವೀಕರಿಸಲು ನಾವು ಸಿದ್ಧರಿದ್ದೇವೆ.ಇದು ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾಡಿದ ಸವಾಲು ಅಲ್ಲ.ಒಬ್ಬ ವ್ಯಕ್ತಿ ಸಂಘಟನೆಗೆ ಮಾಡಿದ ಸವಾಲಿದು.ನಮ್ಮೆಲ್ಲರ ಸಾಮೂಹಿಕ ಇಚ್ಚಾಶಕ್ತಿ ಮೇ 10ಕ್ಕೆ ಉತ್ತರ ಕೊಡಬೇಕು ಎಂದು ತೇಜಸ್ವಿ ಸೂರ್ಯ ಹೇಳಿದರು.
ತೇಜಸ್ವಿ ಸೂರ್ಯ ಭಾಗವಹಿಸುವುದಿಲ್ಲವೆಂಬ ಅಪಪ್ರಚಾರಕ್ಕೆ ತಿರುಗೇಟು
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಪುತ್ತೂರಿನ ಬಿಜೆಪಿ ಕಾರ್ಯಕ್ರಮಕ್ಕೆ ಭಾಗವಹಿಸುವುದಿಲ್ಲವೆಂಬ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿತ್ತು.ಆದರೆ ಅವರನ್ನು ಕರೆಸಿಯೇ ಸಿದ್ದ ಎಂದು ನಾವು ಪಟ್ಟು ಹಿಡಿದು ಅವರನ್ನು ಕರೆಸಿ ಅಪಪ್ರಚಾರಕ್ಕೆ ತಿರುಗೇಟು ನೀಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ತಿಳಿಸಿದ್ದಾರೆ.
ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಬರಲಿದೆ
ಆಶಾ ತಿಮ್ಮಪ್ಪ ಅವರ ಜೊತೆ ನಾಮಪತ್ರ ಸಲ್ಲಿಕೆಯ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪತ್ರಿಕಾ ಮಾಧ್ಯಮದ ಜೊತೆ ಮಾತನಾಡಿ, ಕರ್ನಾಟಕದಲ್ಲಿ ರಾಜಕೀಯ ಕಾವು ಎದ್ದಿದೆ. ಬಿಜೆಪಿ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಅಭೂತಪೂರ್ವವಾಗಿ ಕಾರ್ಯಕರ್ತರ ಉತ್ಸಾಹ, ಬೆಂಬಲದ ಜೊತೆ ನಮ್ಮ ಹೊಸ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಬಾರಿ ಈ ಕ್ಷೇತ್ರದಲ್ಲಿ ಶಾಸಕರಾಗಿರುವ ಸಂಜೀವ ಮಠಂದೂರು ಅವರು ಅಭೂತಪೂರ್ವ ರೀತಿಯಲ್ಲಿ ರೂ.2 ಸಾವಿರ ಕೋಟಿ ಅನುದಾನವನ್ನು ಕ್ಷೇತ್ರಾಭಿವೃದ್ಧಿಗೆ ನೀಡಿರುವುದರಿಂದ ಜನರು ಬಿಜೆಪಿ ಪರವಾಗಿದ್ದಾರೆ.ಹಾಗಾಗಿ ಆಶಾ ತಿಮ್ಮಪ್ಪ ಅವರು ಗೆಲ್ಲಲಿದ್ದಾರೆ ಎಂದರು.
ಬಂಡಾಯ ಅಭ್ಯರ್ಥಿ ಬಗ್ಗೆ ಅಪಾರ ಗೌರವವಿದೆ: ಬಂಡಾಯ ಅಭ್ಯರ್ಥಿ ಬಗ್ಗೆ ಅಪಾರವಾದ ಗೌರವವಿದೆ. ಪ್ರಜಾಪ್ರಭುತ್ವದಲ್ಲಿ ಯಾರು ಕೂಡಾ ಚುನಾವಣೆಯಲ್ಲಿ ನಿಲ್ಲಬಹುದು. ಬಿಜೆಪಿ ಎಲ್ಲವನ್ನೂ ಗಮನಿಸುತ್ತದೆ. ಕಾರ್ಯಕರ್ತರ ಪರಿಶ್ರಮದಿಂದ ಈ ಕ್ಷೇತ್ರವನ್ನು ಗೆಲ್ಲುವುದಕ್ಕೆ ಪ್ರಯತ್ನ ಮಾಡುತ್ತದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವೈಚಾರಿಕವಾದ ಹೋರಾಟ ಮಾಡಲಿದೆ. ಈ ಬಾರಿ ಪುತ್ತೂರು ಸಹಿತ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಬಹುಮತ ಗಳಿಸಲಿದೆ ಎಂದು ಹೇಳಿದ ಅವರು, ಸಂಘ ರಾಜಕೀಯ ಮಾಡುವುದಿಲ್ಲ. ಸಂಘ ವ್ಯಕ್ತಿ ನಿರ್ಮಾಣ, ರಾಷ್ಟ್ರಭಕ್ತಿ, ರಾಷ್ಟ್ರ ಜೀವನವನ್ನು ಕಲಿಸುತ್ತದೆ. ಇದರ ಆಧಾರದಲ್ಲಿ ಸಂಘದಲ್ಲಿ ಬೆಳೆದವರು ಬೇರೆಲ್ಲ ಕ್ಷೇತ್ರದಲ್ಲೂ ಇರಬಹುದು ಎಂದು ಪತ್ರಕರ್ತರ ಪ್ರಶ್ನೆಗೆ ಕಟೀಲ್ ಉತ್ತರಿಸಿದರು.