





ವಿದ್ಯಾರ್ಥಿಗಳ ಕನಸುಗಳು ಬದುಕಿಗೆ ದಾರಿದೀಪವಾಗಲಿ: ಪ್ರದೀಪ್ ಬಡೆಕ್ಕಿಲ


ಪುತ್ತೂರು: ಕನಸಿನ ಬೆನ್ನಟ್ಟಿ ಹೋದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಸಹಜ. ಇವೆರಡನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕು ಗೆಲುವಿನೆಡೆ ಮುಖ ಮಾಡುತ್ತದೆ. ನಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಬಿಗ್ ಬಾಸ್ ಖ್ಯಾತಿಯ ವಾಯ್ಸ್ ಓವರ್ ಕಲಾವಿದ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರದೀಪ್ ಬಡೆಕ್ಕಿಲ ಹೇಳಿದರು.






ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆದ ಕನಸುಗಳು-2025 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳ ಕನಸುಗಳು ಗರಿ ಬಿಚ್ಚಿ ಹಾರಬೇಕು. ಕನಸುಗಳು ನಮ್ಮನ್ನು ನಿದ್ದೆಗೆಡಿಸುವಂತಿರಬೇಕು. ನಿದ್ದೆಯಲ್ಲಿ ಬರುವ ಕನಸುಗಳ ಲಗಾಮು ನಮ್ಮಲ್ಲಿ ಇರುವುದಿಲ್ಲ. ನಿದ್ದೆ ಕೆಡಿಸುವ ಕನಸುಗಳನ್ನು ಹಾಕಿಕೊಂಡಾಗ ಮಾತ್ರ ನಮ್ಮ ಭವಿಷ್ಯವನ್ನು ಗಟ್ಡಿಗೊಳಿಸಲು ಸಾಧ್ಯ. ನಮ್ಮ ಕನಸುಗಳನ್ನು ನಾವೇ ಕಟ್ಟಿಕೊಂಡಲ್ಲಿ ಆರೋಗ್ಯಯುತವಾದ ಸ್ಪರ್ಧಾ ಮನೋಭಾವ ನಮ್ಮಲ್ಲಿ ಬೆಳೆಯುತ್ತದೆ ಎಂದು ಹಿತ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ ಮಾತನಾಡುತ್ತಾ ಸೋಲು-ಗೆಲುವು ಜೀವನದ ಒಂದು ಭಾಗ. ಗೆದ್ದು ಬೀಗುವುದಕ್ಕಿಂತ ಮುಂದಿನ ಗೆಲುವಿನ ಕಾರ್ಯ ಯೋಜಿಸಿಕೊಳ್ಳಬೇಕು. ನಾವು ಮಾಡುವ ಸಾಧನೆ, ಶಕ್ತಿಗಳೆಲ್ಲ ಯಾವತ್ತೂ ಒಳ್ಳೆಯ ವಿಚಾರದಿಂದ ಕೂಡಿರಬೇಕೇ ಹೊರತು ಕೆಟ್ಟ ವಿಚಾರಗಳ ಕಡೆ ಅಲ್ಲ. ಇವೆಲ್ಲ ವಿಚಾರಗಳು ಕಾರ್ಯರೂಪಗೊಳ್ಳುವುದು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಮತ್ತು ಸಂಸ್ಕಾರ ಎಂದಿಗೂ ಬೇರೆ ಅಲ್ಲ. ಸಂಸ್ಕಾರಯುತ ಶಿಕ್ಷಣದಿಂದ ಹಲವಾರು ಪ್ರತಿಭೆಗಳು ಹೊರಹೊಮ್ಮುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 750ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ನಿರ್ದೇಶಕರಾದ ಡಾ.ಕೆ.ಎನ್ ಸುಬ್ರಹ್ಮಣ್ಯ ಹಾಗೂ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಉಪಸ್ಥಿತರಿದ್ದರು. ಉಪನ್ಯಾಸಕಿ ದಯಾಮಣಿ ಟಿ.ಕೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಪನ್ಯಾಸಕಿಯರಾದ ಶೈಲಜಾ ಭಟ್ ವಂದಿಸಿ, ಹರ್ಷಿತಾ ಪಿ ನಿರೂಪಿಸಿದರು.









