ಡಾ. ಶಿವಾನಂದರಿಂದ ಸಿದ್ದರಾಮಯ್ಯರವರ ಕ್ಷೇತ್ರ ವರುಣಾ, ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಗಳಲ್ಲಿ ಸ್ಪರ್ಧೆ

0

ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆಯ ಸಂಚಾಲಕ ಡಾ. ಯು.ಪಿ. ಶಿವಾನಂದರು ಹಾಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ಶಿಗ್ಗಾಂವಿ ಕ್ಷೇತ್ರ ಹಾಗೂ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯರ ವರುಣಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಕಳೆದೆರಡು ವರ್ಷಗಳಿಂದ ನಡೆಸಲಾಗುತ್ತಿರುವ ಜನಾಂದೋಲನದ ಮುಂದುವರಿದ ಭಾಗವಾಗಿ ಸಂಭಾವ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಿದ್ಧರಾಮಯ್ಯರ ಕ್ಷೇತ್ರಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ನಿಜ ಅರ್ಥದಲ್ಲಿ ರಾಜರುಗಳಾಗಿರಬೇಕಾದ ಮತದಾರರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳನ್ನು ‘ತಾವು ಅರಿಸಿ ಬಂದಲ್ಲಿ ಸರಕಾರಿ ಕಛೇರಿಗಳಲ್ಲಿಯ ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೀರಾ? ಅಧಿಕಾರಿಗಳು ಲಂಚವಾಗಿ ಪಡೆದ (ಕಾನೂನಿನ ಚೂರಿ ಉಪಯೋಗಿಸಿ ದರೋಡೆ ಮಾಡಿದ ಹಣವನ್ನು) ಅಧಿಕಾರಿಗಳಿಂದ ಜನರಿಗೆ ತೆಗೆಸಿಕೊಡುತ್ತೀರಾ?’ ಎಂಬ ಪ್ರಶ್ನೆಯನ್ನು ಕೇಳಬೇಕು. ಲಂಚ ಭ್ರಷ್ಟಾಚಾರ ನಿಲ್ಲಿಸಬೇಕೆಂದು ಅಭ್ಯರ್ಥಿಗಳೊಡನೆ ಹೇಳಬೇಕು ಮತ್ತು ಅವರಿಂದ ಪ್ರತಿಜ್ಞೆ ಮಾಡಿಸಬೇಕು. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಅಂದರೆ ದೇಶ ದ್ರೋಹ ಎಂಬುವುದನ್ನು ಮತದಾರರು ಪ್ರತಿಪಾದಿಸಬೇಕು. ಅಭ್ಯರ್ಥಿಗಳಿಂದ ಹೇಳಿಸಬೇಕು. ಆ ಜವಾಬ್ದಾರಿಯನ್ನು ಜನಪ್ರತಿನಿಧಿಗಳಾಗ ಬಯಸುವವರು ಒಪ್ಪಿಕೊಳ್ಳಲೇ ಬೇಕು. ಒಂದು ವೇಳೆ ಅದನ್ನು ಹೇಳಲು ಅಭ್ಯರ್ಥಿಗಳಿಗೆ ಧೈರ್ಯ ಇಲ್ಲದಿದ್ದರೆ ಅವರು ಜನಪ್ರತಿನಿಧಿಗಳಾಗಲು ಅರ್ಹರೇ? ಎಂದು ಮತದಾರರು ಪ್ರಶ್ನಿಸಬೇಕು.

ಈ ಜನಜಾಗೃತಿ ಆಂದೋಲನವನ್ನು ನಾವು ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪ್ರಾರಂಭಿಸಿದ್ದೇವೆ. ಅದನ್ನು ಸಂಭಾವ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಬೊಮ್ಮಾಯಿಯವರ ಕ್ಷೇತ್ರದಲ್ಲಿ ಪ್ರಾರಂಭಿಸುವ ಮೂಲಕ ಆ ಕ್ಷೇತ್ರದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಲಂಚ, ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಉಂಟಾಗಿ ಲಂಚ, ಭ್ರಷ್ಟಾಚಾರ ಮುಕ್ತ ರಾಜ್ಯವಾಗಬೇಕು ಎಂಬ ಆಶಯದಿಂದ ಆಂದೋಲನ ಕೆಲಸ ಮಾಡಲಿದೆ.

ನಾವು ಓಟಿಗಾಗಿ ನಿಂತಿಲ್ಲ, ಓಟೂ ಕೇಳುತ್ತಿಲ್ಲ. ಮತದಾರರ ಜಾಗೃತಿಗಾಗಿ ಸ್ಪರ್ಧಿಸಿದ್ದೇವೆ. ಆದರೆ ಒಂದು ವೇಳೆ ಓಟಿಗೆ ನಿಂತ ಎಲ್ಲಾ ಅಭ್ಯರ್ಥಿಗಳು ಸರಕಾರಿ ಕಛೇರಿಗಳಲ್ಲಿ ಲಂಚ, ಭ್ರಷ್ಟಾಚಾರ ನಿಲ್ಲಿಸಲು ತಮಗೆ ಸಾಧ್ಯವಿಲ್ಲ ಎಂದು ಹೇಳಿದರೆ, ಅದು ಸಾಧ್ಯವಿದೆ. ನಮ್ಮನ್ನು ಗೆಲ್ಲಿಸಿ ನೋಡಿ ಖಂಡಿತಾ ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳಲಿಕ್ಕಾಗಿ ನಾವು ಸ್ಪರ್ಧಿಸಿದ್ದೇವೆ ಹೊರತು ಇಲ್ಲಿ ಶಾಸಕರಾಗುವ ಯಾವುದೇ ಇಚ್ಚೆ ನಮಗಿಲ್ಲ. ಮತದಾರ ನಮಗೆ ಓಟು ಹಾಕುವ ಬದಲು ಚುನಾವಣೆಗೆ ನಿಂತ ಅಭ್ಯರ್ಥಿಯಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಭರವಸೆ ಪಡೆಯಲಿ. ಆ ವಿಷಯವನ್ನು ನಮ್ಮ ಸುದ್ದಿ ಜನಾಂದೋಲನ ವೇದಿಕೆಯ ನಂಬ್ರಕ್ಕೆ ಕಳುಹಿಸಿದಲ್ಲಿ ಅದನ್ನು ಲಂಚ, ಭ್ರಷ್ಟಾಚಾರ ವಿರುದ್ಧದ ಮತವೆಂದು ಪರಿಗಣಿಸಲಿದ್ದೇವೆ. ಅದು ಆಂದೋಲನವನ್ನು ಮುಂದುವರಿಸಲು ನೀಡಿದ ಶಕ್ತಿ ಎಂದು ತಿಳಿದು ಮುಂದುವರಿಯಲಿದ್ದೇವೆ. ಈ ಮತದಾರರ ಜಾಗೃತಿಯನ್ನು ಈ ಚುನಾವಣೆಯಲ್ಲಿ ಮಾತ್ರವಲ್ಲ ಮುಂದೆ ಬರುವ ಜಿ.ಪಂ, ತಾ.ಪಂ, ಗ್ರಾಮ ಪಂಚಾಯತ್ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಸಲಾಗುವುದು ಎಂದು ಡಾ.ಶಿವಾನಂದರು ಹೇಳಿದ್ದಾರೆ.

ಪ್ರತಿಯೊಬ್ಬ ಮತದಾರ ‘ನಮ್ಮ ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ’ ಎಂಬ ಭರವಸೆಯನ್ನು ಚುನಾವಣೆಗೆ ನಿಂತ ಅಭ್ಯರ್ಥಿಗಳಿಂದ ಪಡೆಯುವುದು ಮತ್ತು ತಮಗೆ ಇಲಾಖೆಗಳಲ್ಲಿ ಅಧಿಕಾರಿಗಳಿಂದ ತೊಂದರೆಯಾದಾಗ ರಕ್ಷಣೆಗೆ ಬರುವಂತೆ ಅವರನ್ನು ಕೇಳುವುದು ತಮ್ಮ ಹಕ್ಕು ಎಂದು ಪರಿಗಣಿಸಬೇಕು. ಅದನ್ನು ಮಾಡುವುದು ಜನಪ್ರತಿನಿಧಿಯಾಗ ಬಯಸುವವನ ಕರ್ತವ್ಯವೂ ಹೌದು ಎಂದೇ ತಿಳಿಯಬೇಕು. ಹಾಗೆ ಮಾಡಿದಲ್ಲಿ ಆ ಕ್ಷೇತ್ರ ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ ಎಂದು ನಂಬಿದ್ದೇವೆ.

ಡಾ. ಯು.ಪಿ. ಶಿವಾನಂದ ,
ಸಂಚಾಲಕರು, ಸುದ್ದಿ ಜನಾಂದೋಲನ ವೇದಿಕೆ

LEAVE A REPLY

Please enter your comment!
Please enter your name here