ದ್ವೇಷದ ಹಿಂದುತ್ವ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸಿತು: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಪ್ರತೀ ಬಾರಿ ಚುನಾವಣೆಯ ಸಂದರ್ಭದಲ್ಲಿ ಹಿಂದುತ್ವದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷದ ವಿಷ ಬೀಜ ಬಿತ್ತಿ ಅನ್ಯಾಯದ ಮೂಲಕ ಗೆಲುವು ಸಾದಿಸುತ್ತಿದ್ದ ಬಿಜೆಪಿಗೆ ಈ ಬಾರಿ ಅವರೇ ಸೃಷ್ಟಿಸಿದ ದ್ವೇಷದ ಹಿಂದುತ್ವ ತಿರುಗುಬಾಣವಾಗಿ ಚುಚ್ಚುತ್ತಿದ್ದು, ಶ್ರೀ ಮಹಾಲಿಂಗೇಶ್ವರ ಮಣ್ಣಲ್ಲಿ ಅನ್ಯಾಯ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಅವರು ಕುಂಬ್ರ ಜಂಕ್ಷನ್ನಲ್ಲಿ ಎ.24ರಂದು ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಐದು ವರ್ಷದಲ್ಲಿ ಏನು ಅಭಿವೃದ್ದಿ ಕೆಲಸ ಮಾಡಿದ್ದಾರೆ ಅದನ್ನು ಹೇಳಿ ಓಟು ಕೇಳಲಿ. ದ್ವೇಷವನ್ನೇ ಸಮಾಜದಲ್ಲಿ ಬಿತ್ತುವ ಮೂಲಕ ವಾಮ ಮಾರ್ಗದಲ್ಲಿ ಓಟು ಪಡೆಯುತ್ತಿದ್ದ ಬಿಜೆಪಿಗೆ ಈ ಬಾರಿ ಸರಿಯಾಗಿಯೇ ಅವರ ನಕಲಿ ಹಿಂದುತ್ವ ಪಾಠ ಕಲಿಸಲಿದ್ದು, ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆದ್ದೇ ಗೆಲ್ಲುತ್ತಾರೆ ಅದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಪುತ್ತೂರು ಶಾಸಕರು 5 ವರ್ಷದಲ್ಲಿ ಯಾವುದೇ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ. ಪುತ್ತೂರಿನಲ್ಲಿ ಕಾಂಗ್ರೆಸ್ ಒಂದಾಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಬಾರಿ ಎಂದೆಂದೂ ಕಂಡರಿಯದ ರೀತಿಯಲ್ಲಿ ಕಾಂಗ್ರೆಸ್ ಒಂದಾಗಿದ್ದು ಬಿಜೆಪಿಯನ್ನು ತೊಳಗಿಸಿಯೇ ಸಿದ್ದ ಎಂದು ಹೇಳಿದರು.
ಶಾಸಕರು ಮಾಡಿದ ಕೆಲಸ ಜನತೆಗೆ ಗೊತ್ತಾಗಿದೆ
ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ಶಾಸಕರಾಗಿ ಪುತ್ತೂರಿನಲ್ಲಿ ಮಾಡಿದ ಕೆಲಸ ಅವರ ಶಾಸಕತ್ವದ ಕೊನೇ ಗಳಿಗೆಯಲ್ಲಿ ಹೊರಗೆ ಬಂದಿದೆ. ಜನ ಎಲ್ಲವನ್ನೂ ನೋಡಿದ್ದಾರೆ. ಅವರು ಮಾಡಿದ ಘನಂದಾರಿ ಅಭಿವೃದ್ದಿ ಕೆಲಸ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಪ್ರಚಾರ ಪಡೆದಿದೆ. ಅದನ್ನು ಬಿಟ್ಟು ಅವರು ಬೇರೆ ಏನು ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿ ವ್ಯಂಗ್ಯವಾಡಿದರು.
ಗೆದ್ದರೆ ಒಂದೇ ತಿಂಗಳಲ್ಲಿ ಅಕ್ರಮ ಸಕ್ರಮ ಫೈಲ್ ವಿಲೇವಾರಿ: ಅಶೋಕ್ ರೈ
ನನಗೆ ಈ ಬಾರಿ ಆಶೀರ್ವಾದ ಮಾಡಿ. ನಾನು ಗೆದ್ದು ಬಂದು ಒಂದೇ ತಿಂಗಳಲ್ಲಿ ಎಷ್ಟು ಅಕ್ರಮಸಕ್ರಮ ಫೈಲ್ಗಳು ಪೆಂಡಿಗ್ ಇದೆ ಅದೆಲ್ಲವನ್ನೂ ನಯಾ ಪೈಸೆ ಖರ್ಚಿಲ್ಲದೆ ಅರ್ಜಿದಾರರಿಗೆ ಮಾಡಿಕೊಡಲಿದ್ದೇನೆ. ತಾಲೂಕಿನಲ್ಲಿ ಮೂರು ಸಾವಿರಕ್ಕೂ ಮಿಕ್ಕಿ 34ಸಿ ಅರ್ಜಿ ಪೆಂಡಿಂಗ್ ಇದೆ ಅದನ್ನು ಎಲ್ಲರಿಗೂ ಬರೆದು ಕೊಡಲಿದ್ದೇನೆ. ಪ್ಲಾಟಿಂಗ್, ಸರ್ವೆ ಆಗದೆ ಜನರಿಗೆ ತೊಂದರೆ ನೀಡುತ್ತಿದ್ದು, ಅದೆಲ್ಲವನ್ನೂ ತಿಂಗಳೊಳಗೆ ಸರಿಪಡಿಸಲಿದ್ದೇನೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ವಾಗ್ದಾನ ಮಾಡಿದರು. ನನ್ನ ರಾಜಕೀಯ ಅವಧಿಯಲ್ಲಿ ನಾನು ಯಾವ ರಾಜಕೀಯ ನಾಯಕರನ್ನು ಇದುವರೆಗೂ ಯಾವುದೇ ವೇದಿಕೆಯಲ್ಲಿ ಅಪಹಾಸ್ಯ ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ಬಗ್ಗೆ ಸಾಮಾಜಿಕ ತಾಣದಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಬಿಜೆಪಿ ಹರಿಯಬಿಡುತ್ತಿದೆ ಇದಕ್ಕೆಲ್ಲಾ ಜನ ತಕ್ಕ ಉತ್ತರ ನೀಡಲಿದ್ದಾರೆ. ನಾನು ಆರೆಸ್ಸೆಸ್ ಎಂದು ನನ್ನ ಮಗನ ಜೊತೆ ಇರುವ ಫೋಟೋವನ್ನು ಎಸ್ಡಿಪಿಐಯವರು ಸೋಶಿಯಲ್ ಮೀಡಿಯದಲ್ಲಿ ಹಾಕುತ್ತಿದ್ದಾರೆ. ನನ್ನ ಜೊತೆ ಚರ್ಚೆಗೆ ಬರಲಿ ಮುಸ್ಲಿಂ ಸಮುದಾಯಕ್ಕೆ ಎಸ್ಡಿಪಿಐ ಏನು ಮಾಡಿದೆ ಎಂಬುದನ್ನು ತಿಳಿಸಲಿ. ನಾನು 2300 ಮುಸ್ಲಿಂ ಕುಟುಂಬಗಳಿಗೆ ನೆರವು ನೀಡಿದ್ದೇನೆ, 42 ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು. ಎಲ್ಲರೂ ಒಟ್ಟಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಈ ಬಾರಿ ಪುತ್ತೂರಲ್ಲಿ ಮತ್ತೆ ಕಾಂಗ್ರೆಸ್ ಶಾಸಕರು ಬರಲಿದ್ದಾರೆ, ರಾಜ್ಯದಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ಸರಕಾರ ಬಂದೇ ಬರುತ್ತದೆ. ಬೆಲೆ ಏರಿಕೆ , ದ್ವೇಷದ ವಾತಾವರಣದಿಂದ ಜನ ರೋಸಿ ಹೋಗಿದ್ದಾರೆ. ಜನತೆ ಬಿಜೆಪಿ ಬೇಡ ಎಂಬ ಹಂತಕ್ಕೆ ಬಂದಿದ್ದಾರೆ. ಬಿಜೆಪಿಯವರೇ ಸಾಮೂಹಿಕವಾಗಿ ಕಾಂಗ್ರೆಸ್ ಸೇರುತ್ತಿರುವುದು ಮುಂದಿನ ಕಾಂಗ್ರೆಸ್ ಪರ್ವದ ಮುನ್ಸೂಚನೆಯಾಗಿದೆ ಎಂದು ಹೇಳಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಮಾತನಾಡಿ ಕಾಂಗ್ರೆಸ್ ಈ ದೇಶಕ್ಕೆ, ರಾಜ್ಯಕ್ಕೆ ಅನಿವಾರ್ಯ ಎಂಬಂತಾಗಿದೆ. ಬಡವರು ಸಮಾಧಾನದಿಂದ ಬದುಕಬೇಕಾದರೆ ಕಾಂಗ್ರೆಸ್ ಸರಕಾರ ಬರಬೇಕು ಎಂದು ಹೇಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯ ಬಗ್ಗೆ ವಿವರಿಸಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಿ ಬಿಜೆಪಿ ದುರಾಡಳಿತದ ಬಗ್ಗೆ ವಿವರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ರಾಜ್ಯದಲ್ಲಿ , ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ಆಳ್ವಿಕೆಯಲ್ಲಿ ಜನತೆ ಅನುಭವಿಸುತ್ತಿರುವ ನೋವಿನ ಬಗ್ಗೆ ವಿವರಿಸಿದರು.
ವೈದ್ಯರನ್ನು ದೇವರಿಗೆ ಸಮಾನವಾಗಿ ಕಾಣುವ ನಮ್ಮ ಸಮಾಜದಲ್ಲಿ ಪುತ್ತೂರಿನಲ್ಲೊಬ್ಬರು ವೈದ್ಯರು ಭಾಷಣ ಮಾಡುವಾಗ ಒಂದು ಧರ್ಮದವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಇದು ವಿದ್ಯೆಯ ಕೊರತೆಯೋ, ಅರಿವಿನ ಕೊರತೆಯೋ ಏನೆಂಬುದೇ ಗೊತ್ತಗುತ್ತಿಲ್ಲ. ಒಬ್ಬ ವೈದ್ಯ ಆರೀತಿ ಮಾತನಾಡಿ ಸಮಾಜದಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿರುವುದು ಆತಂಕದ ವಿಚಾರವಾಗಿದೆ. ಈ ಮಾತು ಒಬ್ಬ ವೈದ್ಯರ ಬಾಯಿಂದ ಬರುತ್ತಿರುವುದನ್ನು ನೋಡಿದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ಆಲೋಚಿಸುವಾಗ ಭಯ ಹುಟ್ಟುತ್ತದೆ ಎಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಖೇದ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಮಲರಾಮಚಂಧ್ರ, ನಝೀರ್ ಮಠ, ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಮುರಳೀಧರ್ ರೈ ಮಠಂತಬೆಟ್ಟು, ಫಾರೂಕ್ ಬಾಯಬೆ, ವೇದನಾಥ ಸುವರ್ಣ, ಶಕೂರ್ ಹಾಜಿ ಪುತ್ತೂರು, ಅಶೋಕ್ ಪೂಜಾರಿ ಬೊಳ್ಳಾಡಿ , ನೂರುದ್ದೀನ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು. ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ, ಕೃಷ್ಣಪ್ರಸಾದ್ ಆಳ್ವ ವಂದಿಸಿದರು.