ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಭೂಮಿಯಿಲ್ಲದ ಬಡ.ವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದ್ದು ಕಾಂಗ್ರೆಸ್ನ ಇಂದಿರಾಗಾಂಧಿ. ಅದೇ ರೀತಿ ಕರ್ನಾಟಕದಲ್ಲಿ ಕೃಷಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೃಷಿಕರ ಬದುಕನ್ನು ಹಸನಾಗಿಸಿದ್ದೂ ಕಾಂಗ್ರೆಸ್ ಸರಕಾರವೇ ಆಗಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
ಪೆರ್ಲಂಪಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಾಗ ಅನೇಕ ಮಂದಿ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡವರೆಲ್ಲರೂ ಇಂದಿಗೂ ಕಾಂಗ್ರೆಸ್ಸಲ್ಲೇ ಇದ್ದಾರೆ. ಆದರೆ ಭೂಮಿ ಪಡೆದುಕೊಂಡವರ ಮಕ್ಕಳು ಇಂದು ಬಿಜೆಪಿಯಲ್ಲಿ ಗುರುತಿಸಿ ಬದುಕುಕೊಟ್ಟ ಕಾಂಗ್ರೆಸ್ಗೆ ಧಿಕ್ಕಾರ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ 30 ವರ್ಷದಿಂದ ಕೃಷಿಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪ್ರತೀಯೊಬ್ಬ ಕೃಷಿಕರೂ ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ, ಕೆಲವರು ಮೂರರಿಂದ ನಾಲ್ಕು ಸಂಪರ್ಕವನ್ನೂ ಪಡೆದುಕೊಂಡಿದ್ದಾರೆ. ಈ ಯೋಜನೆಯನ್ನು ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದು ಇದು ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದೆ. ಈ ವಿಚಾರ ಬಹುತೇಕರಿಗೆ ಮರೆತಿರಬಹುದು ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ದೇಶದಲ್ಲಿ, ರಾಜ್ಯದಲ್ಲಿ ಆಡಳಿದ ನಡೆಸಿದ ಕಾಂಗ್ರೆಸ್ ಜನತೆಗೆ ಮರೆಯಲಾಗದ ನಿರಂತರ ಯೋಜನೆಯನ್ನು ನೀಡಿದೆ. ಅದರ ಲಾಭವನ್ನು ಪ್ರತೀಯೊಬ್ಬರೂ ಪಡೆಯುತ್ತಿದ್ದಾರೆ. ಈ ಕಾರಣಕ್ಕೆ ನಾವು ಕಾಂಗ್ರೆಸ್ ಪಕ್ಷವನ್ನು ಎಂದೂ ಮರೆಯಬಾರದು ಎಂದು ಹೇಳಿದರು.ಈ ಬಾರಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗೃಹಿಣಿಯರಿಗೆ ಮಾಸಿಕ 2000 ಹಾಗೂ ಪ್ರತೀ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಯನ್ನು ಕೈಗೊಂಡಿದೆ. ಇದೇ ಯೋಜನೆ ಖಾಯಂ ಆಗಿ ಕರ್ನಾಟದಲ್ಲಿ ಜಾರಿಯಾಗುವಂತೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿದೆ. ಈ ಬಾರಿ ಪ್ರತೀ ಮತದಾರರು ಚಿಂತಿಸಿ ಮತನೀಡಬೇಕು. ನಮ್ಮ ಊರಿನಲ್ಲಿ ಶಾಂತಿಯುತ ವಾತಾವರಣ , ನೆಮ್ಮದಿಯ ನಾಳೆಗಾಗಿ ಪ್ರತೀಯೊಬ್ಬರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು,ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಂಸುಂದರ್ ರೈ ಮತ್ತಿತರರು ಉಪಸ್ಥಿತರಿದ್ದರು.