ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಮಹಿಳೆಯೋರ್ವರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಲಂಚ ನೀಡಿ ತನ್ನ ಸಂಪತ್ತೆಲ್ಲವನ್ನೂ ಕಳೇದುಕೊಂಡಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸುಳ್ಯಪದವಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಾರೆ.
ತನ್ನ ಸ್ವಾಧೀನದಲ್ಲಿರುವ ಒಂದು ಎಕ್ರೆ ಜಾಗವನ್ನು ಸಕ್ರಮ ಮಾಡಿಕೊಡುವಂತೆ ಪುತ್ತೂರು ಹೊರವಲಯದ ಬನ್ನೂರು ನಿವಾಸಿ ಮಹಿಳೆಯೋರ್ವರು ಅರ್ಜಿ ಹಾಕಿದ್ದರು. ಇವರು ಸಲ್ಲಿಸಿದ ಅರ್ಜಿ ತಾಲೂಕು ಕಚೇರಿಗೆ ತಲುಪಿದಾಗ ಇವರಿಗೆ ಕರೆ ಬರುತ್ತದೆ. ಕಚೇರಿಗೆ ತೆರಳಿದಾಗ ಇವರ ಬಳಿ ಹಣ ಕೇಳುತ್ತಾರೆ. ಒಂದು ಎಕ್ರೆಗೆ ಎರಡು ಲಕ್ಷ ನೀಡಿದರೆ ಮಾತ್ರ ನಿಮ್ಮದು ಸಕ್ರಮವಾಗುತ್ತದೆ ಎಂದು ತಿಳಿಸಿದ್ದಾರೆ. ವಿಧಿ ಇಲ್ಲದೆ ಮಹಿಳೆ ತನ್ನ ಮನೆಯಲ್ಲಿದ್ದ ಎರಡು ಸಾಕು ದನಗಳನ್ನು ಮಾರಿದ ಹಣ ಸೇರಿಸಿ ಒಟ್ಟು 60 ಸಾವಿರ ಸಂಬಂಧಪಟ್ಟವರ ಕೈಗೆ ನೀಡಿದ್ದು, ಆ ಬಳಿಕ ಉಳಿದ ಮೊತ್ತವನ್ನು ನೋಡುವಂತೆ ಮತ್ತು ಬಾಕಿ ಮೊತ್ತವನ್ನು ನೀಡದೇ ಇದ್ದಲ್ಲಿ ನಿಮ್ಮ ಫೈಲು ಮುಂದೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ ಬಡತನದಲ್ಲಿರುವ ಮಹಿಳೆ ಹಣ ನೀಡದ ಕಾರಣಕ್ಕೆ ಅವರ ಫೈಲು ಪೆಂಡಿಂಗ್ ಆಗಿದೆ. ಆ ಬಳಿಕ ಮಹಿಳೆ ತನ್ನ ಕಚೇರಿಗೆ ಬಂದು ವಿಷಯ ತಿಳಿಸಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಮಹಿಳೆ ಕಚೇರಿಯಲ್ಲಿ ಬಂದು ಕಣ್ಣೀರು ಹಾಕಿ ಸಂಬಂಧಿಸಿದವರಿಗೆ ಹಿಡಿಶಾಪ ಹಾಕುತ್ತಿದ್ದರು. ಅವರನ್ನು ಸಮಾಧಾನಿಸಿ ದನ ಖರೀದಿ ಮಾಡುವಂತೆ ಆರ್ಥಿಕವಾಗಿ ನೆರವು ನೀಡಿದ್ದು, ಮಾತ್ರವಲ್ಲದೆ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ, ನಿಮ್ಮ ಅಕ್ರಮ ಸಕ್ರಮ ಫೈಲನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದೇನೆ. ಇಂತಹ ಸಾವಿರಾರು ಫೈಲುಗಳು ತಾಲೂಕು ಕಚೇರಿಯಲ್ಲಿದ್ದು ಎಲ್ಲವೂ ಮೈ ಕೊಡವಿ ಮೇಲೆ ಬರಲು ಜನರ ಆಶೀರ್ವಾದ ಬೇಕು ಎಂದು ಎಂದು ಸಭೆಯಲ್ಲಿ ಅಶೋಕ್ ರೈ ಮನವಿ ಮಾಡಿದರು.