ಉರಿಮಜಲಿನಲ್ಲಿ ಇಡ್ಕಿದು ವಲಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಬಿಜೆಪಿಯವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ದ: ಅಶೋಕ್ ಕುಮಾರ್ ರೈ

ಬಿಜೆಪಿಗರ ಕುತಂತ್ರವನ್ನು ಜನರಿಗೆ ಮನದಟ್ಟು ಮಾಡುವ ಕೆಲಸವಾಗಬೇಕು: ಡಾ.ರಾಜಾರಾಮ್ ಕೆ.ಬಿ.

ನಮ್ಮ ಅಭ್ಯರ್ಥಿಗೆ ಗೆಲುವಾಗುವುದನ್ನು ಯಾವ ಶಕ್ತಿಗಳಿಗೂ ತಡೆಯಲು ಸಾಧ್ಯವಿಲ್ಲ: ಎಂ.ಎಸ್.ಮಹಮ್ಮದ್

ನಮ್ಮ ಶಾಸಕರ ಗೆಲುವಾದರೆ ಆಗ ತಳಮಟ್ಟದ ಕಾರ್ಯಕರ್ತನು ನಾಯಕನಾದಂತೆ: ನೂರುದ್ದೀನ್ ಸಾಲ್ಮರ

ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿಯವರಿಗೆ ಸಂಶಯ ಬೇಡ – ನೀವುಗಳು ಕೂಡ ಅರ್ಜಿ ಸಲ್ಲಿಸಿ: ಉಮಾನಾಥ ಶೆಟ್ಟಿ ಪೆರ್ನೆ

ವಿಟ್ಲ: ನಾನು ಏನೇ ಮಾತಾಡಿದರು ಬಿಜೆಪಿಯವರು ಅದನ್ನು ತಿರುಚಿ ನನ್ನ ಬಗ್ಗೆ ಅಪಪ್ರಚಾರ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡುಬರುತ್ತಿದ್ದಾರೆ. ನಾನ್ಯಾವತ್ತು ಯಾವುದೇ ಪಕ್ಷ, ಜಾತಿಯನ್ನು ನಿಂಧಿಸಿದವನಲ್ಲ. ಎಲ್ಲಾ ಜಾತಿ, ಪಕ್ಷವನ್ನು ಸಮಾನವಾಗಿ ಕಂಡವ ನಾನು. ಬಿಜೆಪಿಗರು ನಡೆಸುತ್ತಿರುವ ಭ್ರಷ್ಟಾಚಾರ ಕಂಡು ಎಂದಿಗೂ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳಲಾರೆ.ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ದ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಹೇಳಿದರು.


ಅವರು ಇಡ್ಕಿದು ಗ್ರಾಮದ ಉರಿಮಜಲಿನಲ್ಲಿ ನಡೆದ ಇಡ್ಕಿದು ವಲಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರನ್ನು ಬಿಟ್ಟರೆ ಅತೀ ಹೆಚ್ಚು ತೆರಿಗೆ ಪಾವತಿಸುವ ಪ್ರದೇಶವೆಂದರೆ ಅದು ಮಂಗಳೂರು. ಆದರೆ ನಮ್ಮಲ್ಲಿ ಹೇಳುವಂತಹ ಅಭಿವೃದ್ಧಿ ಏನೂ ಆಗಿಲ್ಲ‌. ಪುತ್ತೂರಿಗೆ ಅತೀ ಅಗತ್ಯವಿರುವ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಕೆಲಸ ರಾಜ್ಯ ಹಾಗು ಕೇಂದ್ರದಲ್ಲಿರುವ ಬಿಜೆಪಿ ಸರಕಾರದಿಂದ ಆಗಿಲ್ಲ‌. ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವವನ್ನು ಹೇಳಿಕೊಂಡು ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಳಮಟ್ಟದ ಕಾರ್ಯಕರ್ತರನ್ನು ಬಲಿಷ್ಠಗೊಳಿಸುವ ಕೆಲಸವಾಗಬೇಕು. ನಿಜ ವಿಚಾರ ಹೇಳಿ ಜನರ ಮನಸ್ಸನ್ನು ಪರಿವರ್ತನೆ ಮಾಡುವ ಕೆಲಸವಾಗಬೇಕು. ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯಧರ್ಮವನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ನಾನು ಯಾವತ್ತೂ ಜಾತಿ – ಭೇದ ಮಾಡಿಲ್ಲ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ‌, ಮಾನವೀಯತೆಯ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ನಿಮ್ಮ ಘನತೆ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ವ್ಯತ್ಯಾಸಗಳು ಎಲ್ಲಾ ಕಡೆಯಲ್ಲಿದೆ ಅದನ್ನು ಸರಿಪಡಿಸಕೊಂಡು ಮುನ್ನಡೆಯೋಣ. ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಸಹಕರಿಸಿ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ.ರವರು ಮಾತನಾಡಿ ನಾವು ಈಗಾಗಲೇ ಚುನಾವಣೆಗೆ ಸನ್ನದ್ದರಾಗಿದ್ದೇವೆ. ಕಾಂಗ್ರೆಸ್ ಸರಕಾರ ನಮಗೆ ಅನಿವಾರ್ಯ. ಸಮಾನತೆಯ ಸಂದೇಶ ಸಾರಿದ ಕಾಂಗ್ರೆಸ್ ಪಕ್ಷ ಜನರಿಗೆ ಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ.
ಬಿಜೆಪಿಗರ ಈ ಕುತಂತ್ರವನ್ನು ಜನರಿಗೆ ಮನಮುಟ್ಟುವ ರೀತಿಯಲ್ಲಿ ನಾವು ತಿಳಿಹೇಳುವ ಕೆಲಸವಾಗಬೇಕು. ನಮ್ಮ ಕಾರ್ಯಕರ್ತರು ಯಾವುದೇ ಟೀಕೆ – ಟಿಪ್ಪಣಿ ಗಳಿಗೆ ಕಿವಿಕೊಡದೆ ಮುಂದುವರಿಯಿರಿ. ಕಾಂಗ್ರೆಸ್ ಈ ಹಿಂದೆ ನೀಡಿದ ಪ್ರಣಾಳಿಕೆಯಂತೆ ನಡೆದುಕೊಂಡಿದೆ. ಕಾಂಗ್ರೆಸ್ ಸರಕಾರ ಪ್ರಾಮಾಣಿಕತೆಯಿಂದ ಕೆಲಸ ಮಾಡಿದೆ. ಕಬಕ- ವಿಟ್ಲ ರಸ್ತೆಯ ಅವ್ಯವಸ್ಥೆಯ ಕುರಿತಾಗಿ ಕಾಂಗ್ರೆಸ್ ಕಬಕದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಡಾಮರೀಕರಣ ಮಾಡಲಾಗಿದೆ. ಆದರು ಅದು ಸಂಪೂರ್ಣ ಕಳಪೆಯಾಗಿದ್ದು ಚುನಾವಣೆ ಸಂದರ್ಭದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ. ಈ ಡಾಮರೀಕರಣ ಒಂದು ಮಳೆಗೆ ಎದ್ದುಹೋಗಿ, ಹೊಂಡ ನಿರ್ಮಾಣವಾಗಲಿದೆ. ಅಶೋಕ್ ಕುಮಾರ್ ರೈ ಓರ್ವ ಸಮರ್ಥ ಅಭ್ಯರ್ಥಿ. ಪ್ರತಿಯೋರ್ವ ಬಡವನ ಕಣ್ಣೀರು ಒರೆಸುವ ಕೆಲಸ ಅಶೋಕ್ ಕುಮಾರ್ ರೈಯವರಿಂದ ಆಗುತ್ತಿದೆ. ಅವರನ್ನು ಬಹುಮತದಿಂದ ಗೆಲ್ಲಿಸೋಣ ಎಂದರು.

ಕೆಪಿಸಿಸಿ ಕಾರ್ಯದರ್ಶಿಯಾದ ಎಂ. ಎಸ್. ಮುಹಮ್ಮದ್ ರವರು ಮಾತನಾಡಿ ಮೇ.10 ನಮಗೊಂದು ಸುದಿನ. ನಮ್ಮ ಭವಿಷ್ಯವನ್ನು ನಿರ್ಧರಿಸುವ ದಿನವಾಗಿದೆ‌. ನಮ್ಮ ದುಃಖ ಯಾತನೆಗೆ ಉತ್ತರಕೊಡುವ ದಿನವಾಗಿದೆ. ಕರ್ನಾಟಕದಲ್ಲಿರುವ ಬಿಜೆಪಿ ಸರಕಾರಕ್ಕೆ 40% ಸರಕಾರ ಎನ್ನುವ ಬಿರುದು ಇದೀಗಾಗಲೇ ಸಿಕ್ಕಿದೆ. 40% ಕಮಿಶನ್ ಗೆ ಇಂದು ಕಡಿವಾಣ ಹಾಕುವ ಕೆಲಸವಾಗಬೇಕು. ಕೋಮು ಭಾವನೆಯನ್ನು ಹುಟ್ಟುಹಾಕಿ ಮತಗಿಟ್ಟಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಸಮಾಜದ ದುರ್ಬಲ ವರ್ಗವನ್ನು ಮೇಲಕ್ಕೆತ್ತುವ ಕೆಲಸ ಬಿಜೆಪಿಯಿಂದ ಆಗಿಲ್ಲ. ಕಾಂಗ್ರೆಸ್ ಸರಕಾರ ಆಡಳಿತದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಬಿಜೆಪಿ ಸರಕಾರ ತೆಗೆದುಹಾಕಿದೆ.
ಕಾಂಗ್ರೆಸ್ ನ ಆಡಳಿತ ಸಂದರ್ಭದಲ್ಲಿ ಹುಟ್ಟು ಹಾಕಿರುವ ಇಂದಿರಾ ಕ್ಯಾಂಟಿನ್ ಅನ್ನು ಮುಚ್ಚುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸವಾಗಿದೆ‌. ಜನಪರ ಕೆಲಸಕ್ಕೆ ಒಲವು ತೋರದ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕಾದ ಅನಿವಾರ್ಯತೆ ಜನತೆಯ ಪಾಲಿಗೆ ಬಂದೊದಗಿದೆ. ಅಶೋಕ್ ಕುಮಾರ್ ರೈಯವರು ಬಿಜೆಪಿ ಪಕ್ಷದಲ್ಲಿದ್ದರೂ ಕೋಮುವಾದಿ, ಜಾತಿವಾದಿಯಾಗಿರಲಿಲ್ಲ. ಅವರು ಜೀವನದಲ್ಲಿ ಜಾತ್ಯಾತೀತ ತತ್ವದ ಅಡಿಯಲ್ಲಿ ನಡೆದಿರುವುದರಿಂದ ಅವರಿಗೆ ಬಿಜೆಪಿಯಲ್ಲಿ ಸೀಟು ಸಿಕ್ಕಿಲ್ಲ. ಸಂಪಾದನೆಯ ಒಂದಂಶವನ್ನು ಬಡವರ್ಗಕ್ಕೆ ನೀಡುವ ಕೆಲಸ ಅವರ ಟ್ರಸ್ಟ್ ನ ಮುಖಾಂತರ ಕೊಡುವ ಕೆಲಸ ಮಾಡುತ್ತಿದ್ದಾರೆ. ಮನುಷ್ಯನಿಗೆ ಶ್ರೀಮಂತಿಕೆಯ ಜೊತೆಗೆ‌ ಹೃದಯ ಶ್ರೀಮಂತಿಕೆ ಬೇಕು. ಅದು ಇರುವ ಮಾನವತವಾದಿ ಶ್ರೇಷ್ಟ ಅಭ್ಯರ್ಥಿ ಅಶೋಕ್ ಕುಮಾರ್ ರೈ. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ನ ಗೆಲುವಿಗೆ ಸಹಕರಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈಗೆ ಗೆಲುವಾಗುವುದನ್ನು ಯಾವ ಶಕ್ತಿಗಳಿಗೂ ತಡೆಯಲು ಸಾಧ್ಯವಿಲ್ಲ. ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಕರ್ನಾಟಕವಾಗಲಿದೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರರವರು ಮಾತನಾಡಿ ಕಾರ್ಯಕರ್ತರಿಗೆ ಮಣ್ಣನೆ ಸಿಗಬೇಕಾದರೆ ನಮ್ಮ ಕ್ಷೇತ್ರದಲ್ಲಿ ನಮ್ಮ ಶಾಸಕರಿರಬೇಕು. ನಮ್ಮ ಶಾಸಕರ ಗೆಲುವಾದರೆ ಆಗ ನಮ್ಮ ತಳಮಟ್ಟದ ಕಾರ್ಯಕರ್ತನು ನಾಯಕನಾದಂತೆ. ಸಾಮನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ನಮ್ಮ ನಾಯಕನಾಗ ಬೇಕಾಗಿರುವುದು ಬಹಳ ಅನಿವಾರ್ಯ. ಎಲ್ಲರೂ ದೃಡಸಂಕಲ್ಪ ದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಣತೊಡೋಣ ಎಂದರು.

ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆರವರು ಮಾತನಾಡಿ ಬಲಿಷ್ಟ ನೆಲದಲ್ಲಿ ಧೈರ್ಯ ತೆಗೆದುಕೊಳ್ಳುವ ಕೆಲಸ ಎಲ್ಲರಿಂದಲೂ ಆಗಬೇಕು. ನೀಡಿದ ಗ್ಯಾರಂಟಿಯನ್ನು ಉಳಿಸಿಕೊಂಡ ಪಕ್ಷ ಕಾಂಗ್ರೆಸ್. ನಾವಿಂದು ನಮ್ಮ ಪಕ್ಷದ ತತ್ವ ಸಿದ್ದಾಂತವನ್ನು ಎಲ್ಲರಿಗೂ ತಿಳಿಹೇಳುವ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾವು ಕಟ್ಟಿದ ತೆರಿಗೆ ಹಣವನ್ನು ಕೇಂದ್ರದಿಂದ ಮರಳಿ ತರುವ ಕೆಲಸ ಮಾಡಲಿದ್ದೇವೆ. ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿಯವರಿಗೆ ಯಾವ ಸಂಶಯ ಬೇಡ, ನೀವುಗಳು ಕೂಡ ಅರ್ಜಿ ಸಲ್ಲಿಸಲು ಪ್ರಾರಂಭಿಸಿ. ಕಾಂಗ್ರೆಸ್ ನ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕಂಡ ಬಿಜೆಪಿಯ ಮನೆಯಗಳು ಕಾಂಗ್ರೆಸ್ ನತ್ತ ತಿರುಗಿದೆ‌. ಮಹಿಳೆಯರನ್ನು ಸಭಲೆಯರನ್ನಾಗಿ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿಯಾದ ಮಹೇಶ್ ಅಂಕೊತ್ತಿಮಾರ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ವಕ್ತಾರ ರಮಾನಾಥ್ ವಿಟ್ಲ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಯೋಜಕರಾದ ವಿ ಕೆ ಎಂ ಅಶ್ರಫ್, ಹಿರಿಯ ಮುಖಂಡರಾದ ಕೃಷ್ಣರಾವ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾದ ನಝೀರ್ ಮಠ, ವಿಟ್ಲ-ಉಪ್ಪಿನಂಗಡಿ ಬ್ಲಾಕ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ,ಕುಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಶೆಟ್ಟಿ ಅಳಕೆಮಜಲ್, ಮುಖಂಡರುಗಳಾದ ಉಲ್ಲಾಸ್ ಕೋಟ್ಯಾನ್, ಬೇಬಿ ಗೌಡ ಸೂರ್ಯ,ಅಶ್ರಫ್ ಬಸ್ತಿಕರ್, ವೇದನಾಥ್ ಸುವರ್ಣ, ಹಿರಿಯರಾದ ಹಾಜಿ ಮೊಹಿದ್ದೀನ್ ಶಾಫಿ,ಅಬ್ಬಾಸ್ ಕೋಲ್ಪೆ, ಹಾಜಿ ಅಬ್ದುಲ್ ಖಾದರ್ , ಶೇಕಬ್ಬ ಕೋಲ್ಪೆ, ಹಮೀದ್ ಕನ್ಯಾನ ಕೋಲ್ಪೆ, ವಿ ಎ ರಶೀದ್ ವಿಟ್ಲ, ಹಸೈನಾರ್ ನೆಲ್ಲಿಗುಡ್ಡೆ, ಇಕ್ಬಾಲ್ ಹಾನೆಸ್ಟ್, ಹನೀಫ್ ಬಗ್ಗುಮೂಲೆ, ಉಮ್ಮರ್ ಶಾಫಿ ಕಲಂದಡ್ಕ, ಮೊಹಮ್ಮದ್ ಖಂದಕ್, ಅಬೂಬಕ್ಕರ್ ಕೋಲ್ಪೆ, ಲತೀಫ್ ದಲ್ಕಾಜೆ, ಲಕ್ಷ್ಮಣ ಮಿತ್ತೂರು, ಅಬ್ಬು ನವಗ್ರಾಮ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು,
ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಕೋಲ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಲತೀಫ್ ದಲ್ಕಾಜೆ ಕೋಲ್ಪೆ ವಂದಿಸಿದರು.

LEAVE A REPLY

Please enter your comment!
Please enter your name here