ಪುತ್ತೂರು: ಮಾಣಿಲ ಮತ್ತು ಎಣ್ಮಕಜೆ ನದಿಗೆ ಸೇತುವೆ ನಿರ್ಮಾಣವಾಗಬೇಕೆಂಬುದು ಮಾಣಿಲ ಗ್ರಾಮಸ್ಥರ ಕನಸಾಗಿದ್ದು ಅದನ್ನು ಶಾಸಕರಾದ ಬಳಿಕ ಅಶೋಕ್ ರೈಗಳು ನನಸು ಮಾಡಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಮಾಣಿಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಶಾಸಕಳಾಗಿದ್ದ ವೇಳೆ 12 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದೆ ಆದರೆ ಸರಕಾರ ಬಿಜೆಪಿ ಇದ್ದ ಕಾರಣ ಹಣ ಮಂಜೂರಾಗಿಲ್ಲ ಎಂದು ಹೇಳಿದರು. ಈ ಬಾರಿ ಕಾಂಗ್ರೆಸ್ ಗೆದ್ದರೆ ಸೇತುವೆ ನಿರ್ಮಾಣ ಮಾಡಿಸಿಯೇ ಸಿದ್ದ ಕೈ ಗೆ ಬಲ ಕೊಡೊ ಎಂದುಮನವಿ ಮಾಡಿದರು. ಪುತ್ತೂರಿನಲ್ಲಿ ಬಿಜೆಪಿ ಯ ಪಾಪದ ಕೊಡ ತುಂಬಿದೆ ಈ ಕಾರಣಕ್ಕೆ ಹಿಂದುತ್ವವನ್ನು ಈ ಬಾರಿ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬಿಜೆಪಿಯವರ ಹಿಂದುತ್ವವನ್ನು ಪಕ್ಷೇತರ ಅಭ್ಯರ್ಥಿ ಕೊಂಡು ಹೋಗಿದ್ದಾರಂತೆ ಎಂದು ವ್ಯಂಗ್ಯವಾಡಿದರು.ಬಿಜೆಪಿಗೆ ಮತ ನೀಡಿ ವೋಟು ಹಾಳುಮಾಡಬೇಡಿ ಎಂದು ಮನವಿ ಮಾಡಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಮನೆಗೆ ಮನೆಗೆ ತೆರಳಿ ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು. ಸಮುದಾಯದ ಮಧ್ಯೆ ವಿಷ ಬೀಜ ಬಿತ್ತುವವರು ನಮಗೆ ಬೇಡ ಎಂದು ಮನವಿ ಮಾಡಿದರು.
ಪ್ರತೀ ಬೂತ್ ನಲ್ಲಿ ವೋಟ್ ಲೀಡ್ ಬರಬೇಕು: ಅಶೋಕ್ ರೈ
ಪ್ರತೀಯೊಬ್ಬ ಕಾರ್ಯಕರ್ತರು ಯಾವ ಮನೆಯನ್ನೂ ಬಿಡದೆ ಭೇಟಿ ಮಾಡಬೇಕು. ಪ್ರತೀ ಬೂತ್ ನಲ್ಲಿಲೀಡ್ ಬರುವಂತೆ ನೋಡಿಕೊಳ್ಳಬೇಕು. ಪಕ್ಷದಲ್ಲಿ ಕಾರ್ಯಕರ್ತರ ಕೊರತೆಯಿಲ್ಲ. ಎಲ್ಲಾ ಕಡೆ ಕಾರ್ಯಕರ್ತರ ಪಡೆಯೇ ಇದೆ ಎಂಬುದು ಸಂತೋಷದ ವಿಷಯ. ನಾವು ಇನ್ನು ಎಂಟು ದಿನ ಆಹೋರಾತ್ರಿ ಕೆಲಸ ಮಾಡಿದರೆ ಮುಂದಿನ 5 ವರ್ಷ ನೆಮ್ಮದಿಯ ಜೀವನ ಮಾಡಬಹುದು. ಬೂತ್ ಮಟ್ಟದ ಪ್ರತೀ ಮನೆಗೂ ಗ್ಯಾರಂಟಿ ಕಾರ್ಡು ಕಡ್ಡಾಯವಾಗಿ ಕೊಡಿ. ಬಿಜೆಪಿಯವರು ನಮ್ಮ ಜೊತೆ ಸೇರಿಕೊಳ್ಳುತ್ತಿದ್ದಾರೆ,ಕೆಲವರು ಎದುರು ಬೀಳುವುದಿಲ್ಲ ಹಿಂದಿನಿಂದ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಬೇಕು. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಕುಚ್ಚಲಕ್ಕಿ ಕೊಡ್ತೇವೆ
ನಾವು ಅಧಿಕಾರಕ್ಕೆ ಬಂದರೆ ತಲಾ 5 ಕೆ ಜಿ ಕುಚ್ಚಲಕ್ಕಿ ಮತ್ತು 5 ಕೆ ಜಿ ಬೆಳ್ತಿಗೆಯನ್ನು ಕೊಡ್ತೇವೆ. ಯಾವ ತಾಯಂದಿರೂ ಇನ್ನುಮನೆಗೆ ದುಡ್ಡು ಕೊಟ್ಟು ಅಕ್ಕಿ ತರುವುದು ಬೇಡ,ಕರೆಂಟ್ ಬಿಲ್ ಕಟ್ಟುವುದು ಬೇಡ, ಉಳಿದ ಖರ್ಚಿಗೆ ತಿಂಗಳಿಗೆ ಎರಡು ಸಾವಿರ ತಾಯಂದಿರ ಖಾತೆಗೆ ಜಮೆಯಾಗ್ತದೆ. ಸಂಚಾರಕ್ಕೆ ಸರಕಾರಿ ಬಸ್ ಉಚಿತವಾಗಿ ತಾಯಂದಿರಿಗೆ ಪ್ರಯಾಣಿಸಲು ಅವಕಾಶವನ್ನು ಸರಕಾರ ಒದಗಿಸಲಿದೆ. ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂದುಮನವಿಮಾಡಿದರು.