? ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದಿಲ್ಲ
ಪುತ್ತೂರು:ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮ ಮಿತ್ತೂರು ಪೇಟೆಯಲ್ಲಿ ನಡೆಯಿತು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ನಾನು ಪ್ರಧಾನ ಮಂತ್ರಿ ಮೋದಿ ಬಗ್ಗೆ ಮಾತನಾಡುವುದಿಲ್ಲ, ರಾಜ್ಯದ ರಾಜಕಾರಣದ ಬಗ್ಗೆಯೂ ಮಾತನಾಡುವುದಿಲ್ಲ, ಬದಲಾಗಿ ನಾನು ಪುತ್ತೂರಿನ ರಾಜಕಾರಣದ ಬಗ್ಗೆ ಮಾತನಾಡುತ್ತೇನೆ. ಪುತ್ತೂರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ಯಾವುದೇ ಮೂಲಭೂತ ಸೌಕರ್ಯಯಗಳನ್ನು ಜನರಿಗೆ ಸರಕಾರದಿಂದ ದೊರೆತಿಲ್ಲ. ಪುತ್ತೂರಿನ ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನ ಸಾಮಾನ್ಯರಿಗೂ ತಿಳಿದಿದೆ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಎರಡು ಪಕ್ಷದವರು ಅಧಿಕಾರಕ್ಕಾಗಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತು ಪಕ್ಷದಿಂದ ಪಕ್ಷಕ್ಕೆ ಹಾರುವುದನ್ನು ಬಿಟ್ಟರೆ ಅಭಿವೃದ್ಧಿಯ ಬಗ್ಗೆ ಮತ್ತು ಜನಸಾಮಾನ್ಯರ ಬಗ್ಗೆ ತಲೆಕೆಡಸಿಕೊಂಡಿಲ್ಲ. ಕುಮಾರಸ್ವಾಮಿಯವರಿಂದಾಗಿ ಇಂದು ರೈತರು ನೆಮ್ಮದಿಯ ಬದುಕು ಬಾಳುತ್ತಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಸುಮಾರು 12,500 ರೈತರ ಸಾಲ ಮನ್ನಾ ಆಗಲು ಕಾರಣ ಜೆಡಿಎಸ್ ಸರ್ಕಾರ. ರೈತ ಬಾಂಧವರು ಇದನ್ನು ನೆನಪಿಸಿಕೊಳ್ಳಬೇಕು. ಕುಮಾರಸ್ವಾಮಿಯವರ ಹಾಗೂ ಜೆಡಿಎಸ್ ಪಕ್ಷದ ಋಣ ತಮ್ಮ ಮೇಲಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿಕೊಟ್ಟು ಕೆಲಸ ಮಾಡಲು ಶಕ್ತಿ ತುಂಬಬೇಕು ಎಂದು ಕೇಳಿಕೊಂಡರು. ಕಾಂಗ್ರೆಸ್ ಪಕ್ಷ ಏನು ಉಚಿತ ಉಚಿತ ಎಂದು ಕಾರ್ಡ್ ಗಳನ್ನೂ ಹಂಚುತ್ತಿದೆ ಇದನ್ನೆಲ್ಲಾ ನೀಡಿ ಜನರನ್ನು ಸೋಮಾರಿಗಳನ್ನಾಗಿ ಮಾಡುವ ಬದಲು ಬೆಲೆ ಏರಿಕೆಯ ಬಗ್ಗೆ ಚಿಂತಿಸಿ. ಉಚಿತ ನೀಡುವುದರಿಂದ ಜನಗಳು ಸೋಮಾರಿಗಳಗುತ್ತಾರೆ ಹೊರತು ಬೇರೆ ಏನು ಪ್ರಯೋಜನವಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಈ ಭಾರಿ ಅಧಿಕಾರಕ್ಕೆ ಬಂದರೆ ರಿಕ್ಷಾ ಚಾಲಕರಿಗೆ ಸಾರಥಿಗೆ ಸೈ ಯೋಜನೆಯಡಿ ಮಾಸಿಕ 2,000 ವೇತನ, ಬಿಪಿಲ್ ಕುಟುಂಬದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಮೊಪೆಡ್, ರೈತರ ಪಂಪ್ ಸೆಟ್ ಗಳಿಗೆ 24/7 ವಿದ್ಯುತ್, ಅಂಗವಿಕಲರಿಗೆ ಮಾಸಿಕ ಪಿಂಚಣಿ 2,500 ಕ್ಕೆ ಏರಿಕೆ ಮುಂತಾದ ಯೋಜನೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾದ ಅಶ್ರಫ್ ಕಲ್ಲೇಗ, ರಾಜ್ಯ ಜೆಡಿಎಸ್ ವಕ್ತಾರೆ ಶ್ರೀಮತಿ ಜೋಹಾರ ನಿಸಾರ್ ಅಹ್ಮದ್, ಗಂಗಾಧರ್ ಮಲಾರ್, ರಫೀಕ್ ಮನಿಯಾರ್ ಮತ್ತಿತರು ಉಪಸ್ಥಿತರಿದ್ದರು.