





ಭಯಭೀತರಾದ ಗ್ರಾಮಸ್ಥರು-ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ


ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ಪೇಟೆ ಸಮೀಪವೇ ಚಿರತೆ ಓಡಾಡಿದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಪಾಣಾಜೆ ಪರಿಸರದಲ್ಲಿ ಜನರನ್ನು ಮತ್ತೊಮ್ಮೆ ಭಯಭೀತರನ್ನಾಗಿಸಿದೆ.





ಆರ್ಲಪದವು ಪೇಟೆಯ ಬದ್ರಿಯಾ ಮಸೀದಿ ಸಮೀಪದ ಎಣ್ಣೆಗದ್ದೆ ಎಂಬಲ್ಲಿ ಚಿರತೆಯಂತೆ ಹೋಲುವ ಪ್ರಾಣಿಯೊಂದು ರಾತ್ರಿ ಸಂಚರಿಸುತ್ತಿದ್ದುದನ್ನು ಸ್ಥಳೀಯರು ಇತ್ತೀಚೆಗೆ ನೋಡಿದ್ದರು. ಸಂಶಯಗೊಂಡ ಜನರು ಅರ್ಲಪದವು ಬದ್ರಿಯಾ ಮಸೀದಿಯ ಸಿ.ಸಿ ಟಿವಿಯಲ್ಲಿ ಪರಿಶೀಲನೆ ಮಾಡಿದ್ದು ನ.20ರಂದು ರಾತ್ರಿ 2 ಗಂಟೆಯ ಸಮಯದಲ್ಲಿ ಚಿರತೆಯಂತೆ ಕಾಣುವ ಪ್ರಾಣಿಯೊಂದು ಸಂಚರಿಸುತ್ತಿರುವ ದೃಶ್ಯ ಗೋಚರಿಸಿತ್ತು. ಬಳಿಕ ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಚಿರತೆ ಸಂಚರಿಸಿದೆ ಎನ್ನಲಾದ ಸ್ಥಳದಲ್ಲಿ ಬೋನ್ ಇರಿಸಿದ್ದಾರೆ.
ಭಯಭೀತರಾದ ಜನರು:
ಚಿರತೆಯೆನ್ನಲಾದ ಪ್ರಾಣಿ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಕಂಡ ಮೇಲೆ ಆರ್ಲಪದವು ಪರಿಸರದರ ಜನರು ಭಯಭೀತರಾಗಿದ್ದಾರೆ. ಗ್ರಾಮಸ್ಥರು ರಾತ್ರಿ ಸಂಚರಿಸಲು ಹೆದರುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಪೇಟೆಯಲ್ಲಿ ಜನಸಂಖ್ಯೆ ಕಡಿಮೆಯಾಗಿದ್ದು ಬೇಗನೆ ಮನೆ ಸೇರುತ್ತಿದ್ದಾರೆ. ಅಲ್ಲದೆ ಶಾಲಾ ಮಕ್ಕಳು ಹಾಗೂ ಪೋಷಕರು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೆಲವು ತಿಂಗಳ ಹಿಂದೆಯೂ ನಡೆದಿತ್ತು ಚಿರತೆ ಪ್ರಕರಣ: ಕಳೆದ ಫೆಬ್ರವರಿ ತಿಂಗಳಿನಲ್ಲಿಯೂ ಚಿರತೆ ಬಂದಿದೆ ಎಂಬ ಸುದ್ದಿ ಹರಿದಾಡಿತ್ತು. ಕರ್ನಾಟಕ ಕೇರಳ ರಾಜ್ಯ ಗಡಿಭಾಗದ, ಬಂಟಾಜೆ ರಕ್ಷಿತಾರಣ್ಯದ ವ್ಯಾಪ್ತಿಯ ಜಾಂಬ್ರಿ ಪರಿಸರದಲ್ಲಿ ಚಿರತೆಯೊಂದನ್ನು ತಂದು ಬಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಸಮಯದಲ್ಲಿಯೂ ಜನರು ಭಯಭೀತರಾಗಿದ್ದರು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಽಕಾರಿಗಳ ವಿರುದ್ಧ ಆಕ್ರೋಶಗೊಂಡು ಪಾಣಾಜೆ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು.
ಗ್ರಾಮ ಪಂಚಾಯತ್‌ನಿಂದ ಪ್ರಕಟಣೆ:
ಇದೀಗ ಮತ್ತೆ ಚಿರತೆಯ ಸುದ್ದಿ ಹರಿದಾಡಿ ಜನರು ಭಯಗೊಂಡಿರುವ ಹಿನ್ನಲೆಯಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಪ್ರಕಟಣೆ ಹೊರಡಿಸಿದೆ. ಚಿರತೆಯ ಚಲನವಲನಗಳು ಗೋಚರಿಸಿದಂತೆ ಅರಣ್ಯ ಇಲಾಖೆಯವರು ಬಂದು ಖುದ್ದಾಗಿ ಪರಿಶೀಲಿಸಿದ್ದು ಜನ ಸಾಮಾನ್ಯರು ಗಾಬರಿಯಾಗದೆ ರಾತ್ರಿ ಸಮಯದಲ್ಲಿ ನಾಗರಿಕರು ಹಾಗೂ ಮಕ್ಕಳು ಜಾಗ್ರತೆ ವಹಿಸಬೇಕೆಂದು, ಮುಂದಿನ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅರಣ್ಯ ಇಲಾಖೆಯವರು ತಿಳಿಸಿರುತ್ತಾರೆ ಎಂದು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.
ಚಿರೆತೆ ಅಲ್ಲ ಅದು ಕಾಡುಬೆಕ್ಕು(Wild Cat)
ಮುಂಜಾಗ್ರತಾ ಕ್ರಮವಾಗಿ ಬೋನು ಅಳವಡಿಕೆ
ಘಟನೆಯ ಬಗ್ಗೆ ಪರಿಶೀಲನೆ ಮಾಡಿದ ಅರಣ್ಯ ಅಧಿಕಾರಿಗಳು ಇದು ಚಿರತೆ ಅಲ್ಲ ಕಾಡುಬೆಕ್ಕು ಎಂಬ ಪ್ರಾಣಿ ಎಂದು ಮಾಹಿತಿ ನೀಡಿದ್ದಾರೆ. ಸಿಸಿಟಿವಿಯಲ್ಲಿ ಕಂಡ ದೃಶ್ಯವನ್ನು ಇಲಾಖಾಧಿಕಾರಿಗಳು ಪರಿಶೀಲನೆ ಮಾಡಿ, ಚಿರತೆಯಂತೆ ಹೋಲುವ ಕಾಡುಬೆಕ್ಕು ಪ್ರಾಣಿ ಇದೆ. ಆದ್ದರಿಂದ ಅದು ಚಿರತೆ ಅಲ್ಲ ಕಾಡುಬೆಕ್ಕು ಎಂದು ದೃಢೀಕರಿಸಿದ್ದಾರೆ. ಗ್ರಾಮಸ್ಥರು ಹೆದರುವ ಅಗತ್ಯ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಬದ್ರಿಯಾ ಮಸೀದಿಯ ರಸ್ತೆಯ ಕೆಳಗೆ ಅರಣ್ಯ ಇಲಾಖೆಯಿಂದ ಬೋನು ಇರಿಸಲಾಗಿದೆ ಎಂದು ಪಾಣಾಜೆ ಅರಣ್ಯ ಇಲಾಖೆಯ ಗಸ್ತುಪಾಲಕರು ತಿಳಿಸಿದ್ದಾರೆ.








