ಪುತ್ತೂರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ದಕ್ಷಿಣ ಕನ್ನಡ ಸಂಸದರಾಗಿ 3ನೇ ಅವಧಿಗೆ ಕಾರ್ಯ ನಿರ್ವಹಿಸುತ್ತಿರುವ ನಳಿನ್ ಕುಮಾರ್ ಕಟೀಲ್ರವರು 2ನೇ ಅವಧಿಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡದ್ದಲ್ಲದೆ ದಯನೀಯ ಸ್ಥಿತಿಯಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸೋಲಿನ ಹೊಣೆ ಹೊರುವುದಾಗಿ ಈಗಾಗಲೇ ತಿಳಿಸಿರುವ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೆ ರಾಜೀನಾಮೆ ನೀಡದಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿಲ್ಲ. ಸೋಲಿನ ಕುರಿತು ವಿಮರ್ಶೆ ನಡೆಸಿ ಮುಂದಕ್ಕೆ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು ಎಂದು ಚರ್ಚೆ ನಡೆಸಿದ ಬಳಿಕ ಹೈಕಮಾಂಡ್ ಸೂಚನೆ ಮೇರೆಗೆ ನಳಿನ್ ಕುಮಾರ್ ರಾಜೀನಾಮೆ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಲಿರುವುದರಿಂದ ಮುಖ್ಯಮಂತ್ರಿ ಯಾರಾಗುತ್ತಾರೆ, ಯಾವ ಸಮುದಾಯದವರು ಆಗುತ್ತಾರೆ ಎಂಬುದನ್ನು ನೋಡಿಕೊಂಡು ವಿಧಾನಸಭೆಯ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ. ಆ ಬಳಿಕ ನಳಿನ್ ಕುಮಾರ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಈ ಮಧ್ಯೆ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಹಲವರ ಹೆಸರನ್ನು ಪರಿಶೀಲನೆ ನಡೆಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡರವರನ್ನು ಕಣಕ್ಕಿಳಿಸಿರುವುದು, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ಸ್ಪರ್ಧೆ ನಡೆಸಿ ಬಿಜೆಪಿಗೆ ಬಹುದೊಡ್ಡ ಪೆಟ್ಟು ನೀಡಿರುವುದು, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಗೆದ್ದು, ತನ್ನ ಭದ್ರಕೋಟೆಯಲ್ಲಿಯೇ ಬಿಜೆಪಿ ಮುಗ್ಗರಿಸಿರುವುದು, ಈ ವಿಚಾರಕ್ಕೆ ಸಂಬಂಧಿಸಿ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿರುವುದು ಕೂಡ ನಳಿನ್ ಕುಮಾರ್ ರಾಜೀನಾಮೆ ನೀಡಲು ಮುಂದಾಗಿರುವುದಕ್ಕೆ ಮುಖ್ಯ ಕಾರಣವಾಗಿದೆ.