ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಇತ್ತಂಡಗಳವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿದೆ.
ಒಂದು ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಎದುರುಕಜೆ ನಿವಾಸಿ ಅಬ್ದುಲ್ ರಹಿಮಾನ್ ರವರ ಪುತ್ರ ಅಬ್ದುಲ್ ಅಜೀಜ್ ದೂರುದಾರರಾಗಿದ್ದು, ಅಬೂಬಕ್ಕರ್ ಸಿದ್ದಿಕ್ ಆರೋಪಿಯಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಮರಕ್ಕಿಣಿ ನಿವಾಸಿ ಅಬ್ದುಲ್ಲರವರ ಪುತ್ರ ಅಬೂಬಕ್ಕರ್ ಸಿದ್ದೀಕ್ ದೂರುದಾರರಾಗಿದ್ದು, ಅಪ್ರಾಝ್ ಅಲಿಯಾಸ್ ಅಜೀಜ್, ಜಲೀಲ್ , ಇಶಾಮ್, ಫರ್‌ಹಾನ್ ರವರು ಆರೋಪಿಗಳಾಗಿದ್ದಾರೆ.
ಅಬ್ದುಲ್ ಅಜೀಜ್‌ರವರು ನೀಡಿದ ದೂರಿನಲ್ಲಿ ಏನಿದೆ..?: ಮಕ್ಕಳ ಎದುರು ಸಿಗರೇಟ್ ಸೇದುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಬೂಬಕ್ಕರ್ ಸಿದ್ದಿಕ್ ಎಂಬಾತ ನಾನು ಮನೆಯಲ್ಲಿರುವ ಸಮಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಅಬ್ದುಲ್ ಕರೀಂರವರ ಬದ್ರಿಯಾ ಚಿಕನ್ ಸೆಂಟರ್ ಅಂಗಡಿಯ ಬಳಿಗೆ ಬರಲು ತಿಳಿಸಿದ್ದ. ಅದರಂತೆ ನಾನು ಅಂಗಡಿ ಬಳಿಗೆ ತೆರಳಿದಾಗ ಅಬೂಬಕ್ಕರ್ ಸಿದ್ದಿಕ್ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಿಕನ್ ಸೆಂಟರ್ ನಲ್ಲಿದ್ದ ಚೂರಿಯಿಂದ ಎದೆಯ ಕೆಳಗೆ ಹೊಟ್ಟೆಯ ಭಾಗಕ್ಕೆ ಚುಚ್ಚುತ್ತಿದ್ದಂತೆ ಚಿಕನ್ ಸೆಂಟರ್‌ನಲ್ಲಿದ್ದ ಅಬ್ದುಲ್ ಕರೀಂ , ಜಲೀಲ್ ಮತ್ತು ಹಿಶಾಮ್‌ರವರು ಅಬೂಬಕ್ಕರ್‌ನನ್ನು ಹೊಡೆಯದಂತೆ ತಡೆದಾಗ ನನಗೆ ಜೀವಬೆದರಿಕೆ ಒಡ್ಡಿ ಪರಾರಿಯಾಗಿದ್ದಾನೆ ಎಂದು ಅಬ್ದುಲ್ ಅಜೀಜ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಬೂಬಕ್ಕರ್ ಸಿದ್ದೀಕ್ ನೀಡಿದ ದೂರಿನಲ್ಲಿ ಏನಿದೆ..?: ‘ಮೆ.14ರಂದು ರಂದು ಮಧ್ಯಾಹ್ನ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಬದ್ರಿಯಾ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಅಪ್ರಾಝ್ ಯಾನೆ ಅಜೀಜ್ ,ಜಲೀಲ್ ,ಇಶಾಮ್ ಹಾಗೂ ಫರ್‌ಹಾನ್‌ರವರು ಬಂದು, ಆರೋಪಿಗಳ ಪೈಕಿ ಅಪ್ರಾಝ್ ಯಾನೇ ಅಜೀಜ್ ಎಂಬಾತ ಗಾಂಜಾ ಸೇವನೆ ಮಾಡುತ್ತಿದ್ದ ವಿಚಾರವನ್ನು ನಾನು ಬೇರೆಯವರಲ್ಲಿ ಹೇಳಿರುತ್ತೇನೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವುದಾಗಿ’ ಅಬೂಬಕ್ಕರ್ ಸಿದ್ದಿಕ್ ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿದೆ.